ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಯಣ್ಣಂಗೂರು ಗ್ರಾಮದಲ್ಲಿ ಕೇಂದ್ರ ಸರ್ಕಾರದ ಪವರ್ ಗ್ರೀಡ್ ಕಾರ್ಪೊರೇಷನ್ ವತಿಯಿಂದ ಅಳವಡಿಸುತ್ತಿರುವ ಪವರ್ ಲೈನ್ ನಿರ್ಮಾಣಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ರೈತರ ಜಮೀನಿನಲ್ಲಿ ದೊಡ್ಡ ಗಾತ್ರದ ಕಂಬಗಳನ್ನು ನಿರ್ಮಿಸಿ ವಿದ್ಯುತ್ ತಂತಿಯನ್ನು ಎಳೆಯಲು ಮುಂದಾದಾಗ ರೈತರು ಅಡ್ಡಿಪಡಿಸಿದ ಘಟನೆ ಬುಧವಾರ ನಡೆದಿದೆ.
ಈ ಭಾಗದಲ್ಲಿ ನೀರಿನ ಸಮಸ್ಯೆಯು ಹೆಚ್ಚಾಗಿದ್ದು ಕಷ್ಟ ಪಟ್ಟು ಬೋರ್ ವೆಲ್ಗಳನ್ನು ಕೊರೆಸಿ ಬೆಳೆಗಳನ್ನು ಬೆಳೆಯುತ್ತಿದ್ದರೆ, ರೈತರಿಗೆ ಯಾವುದೇ ಮಾಹಿತಿ ನೀಡದೇ ಮತ್ತು ನೋಟಿಸ್ ನೀಡದೆ ಏಕಾಏಕಿ ಯಂತ್ರಗಳನ್ನು ತಂದು ತಮ್ಮ ಜಮೀನಿನಲ್ಲಿ ಬೆಳೆಗಳು ಇದ್ದರೂ ಸಹ ವಿದ್ಯುತ್ ತಂತಿಯನ್ನು ಎಳೆಯುತ್ತಿರುವುದು ಸರಿಯಲ್ಲ. ಇದರಿಂದ ತಾವು ಬೆಳೆದ ಬೆಳೆಗಳು ಹಾಳಾಗುತ್ತಿದ್ದು ಈ ಬೆಳೆಗಳನ್ನೇ ನಂಬಿ ಬದುಕು ನಡೆಸುತ್ತಿರುವ ನಾವು ಜೀವನ ನಡೆಸುವುದಾದರು ಹೇಗೆ ಎಂದು ರೈತರು ತಮ್ಮ ಅಳನ್ನು ತೋಡಿಕೊಂಡರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮನೋರಮ ಮತ್ತು ರೈತರ ನಡುವೆ ವಾಗ್ವಾದ ನಡೆಯಿತು. ತಹಶಿಲ್ದಾರ್ ಮಾತನಾಡಿ, ಪವರ್ ಲೈನ್ ನಿರ್ಮಾಣದಿಂದ ರೈತರ ಬೆಳೆಗಳಿಗೆ ಹಾನಿಯಾದರೆ ಬೆಳೆ ಪರಿಹಾರ ಕೊಡುತ್ತೇವೆ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪವರ್ ಲೈನ್ ಅಳವಡಿಸುತ್ತಿರುವುದಾಗಿ ತಿಳಿಸಿದರೂ ಸಹ ಸುಮ್ಮನಾಗದ ರೈತರು ತಮ್ಮ ಜಮೀನಿನಲ್ಲಿಯೇ ಕೀಟ ನಾಶಕ ಔಷದಿಗಳನ್ನು ಕುಡಿದು ಆತ್ಮ ಹತ್ಯೆ ಮಾಡಿಕೊಳ್ಳುವುದಾಗಿ ಔಷದಿ ಬಾಟಲುಗಳನ್ನು ಹಿಡಿದು ಪ್ರತಿಭಟಿಸಿದರು.
ಸ್ಥಳಕ್ಕೆ ಬಾರಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು. ನಂತರ ತಹಶಿಲ್ದಾರ್ ಮತ್ತು ಪೋಲಿಸ್ರ ಸಮ್ಮುಖದಲ್ಲಿ ಪವರ್ ಲೈನ್ ಅಳವಡಿಸಲು ವಿದ್ಯುತ್ ತಂತಿಗಳನ್ನು ಪವರ್ ಗ್ರೀಡ್ ಸಿಬ್ಬಂದಿ ಎಳೆದರು.
ದೇಶದ ಬೆನ್ನೆಲುಬು ರೈತನಾಗಿದ್ದು ಅಂತಹ ರೈತನಿಗೆ ಅನ್ಯಾಯವಾಗುತ್ತಿದೆ. ಸರ್ಕಾರಗಳು ರೈತರ ಪರವಾಗಿ ಇದ್ದೇವೆ ಎಂದು ಹೇಳಿಕೊಂಡು ರೈತರನ್ನು ಕೇವಲ ಮತಕ್ಕಾಗಿ ಬಳಸುಕೊಳ್ಳುತ್ತಿದ್ದಾರೆ ಎಂದು ರೈತರಾದ ಚಿಕ್ಕಣ್ಣ, ಮುನಿನಾರಾಯಣ ಆಕ್ರೋಷ ವ್ಯಕ್ತಪಡಿಸಿದರು.
- Advertisement -
- Advertisement -
- Advertisement -