ಜಾಗತಿಕ ಮಟ್ಟದಲ್ಲಿ ಅಶಾಂತಿ, ಶೀತಲಸಮರಗಳು ಹೆಚ್ಚುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಕುವೆಂಪು ಅವರ ವಿಶ್ವಮಾನವಸಂದೇಶ ಅನುಕರಣೀಯವಾದುದು ಎಂದು ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಹಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಮತ್ತು ಗಾನಗಾರುಡಿಗ ಸಿ.ಅಶ್ಪಥ್ ಅವರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಸಾರಸ್ವತಲೋಕಕ್ಕೆ ರಾಷ್ಟ್ರಕವಿ ಕುವೆಂಪು, ಮತ್ತು ಸಂಗೀತಕ್ಷೇತ್ರಕ್ಕೆ ಸಿ.ಅಶ್ವಥ್ ಅವರ ಕೊಡುಗೆ ಅಪಾರವಾದುದು ಎಂದು ಅವರು ತಿಳಿಸಿದರು.
ಕರವೇ ಜಿಲ್ಲಾ ಉಪಾಧ್ಯಕ್ಷ ಅಶೋಕ್ಕುಮಾರ್ ಮಾತನಾಡಿ, ಕನ್ನಡಪರವಾದ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದರೆ ಕನ್ನಡ ಭಾಷೆಯ ಹಿರಿಮೆಯು ಹೆಚ್ಚುತ್ತದೆ. ಕನ್ನಡದ ಕಾರ್ಯಕ್ರಮಗಳು ವ್ಯಾಪಕವಾಗಿ, ಪರಿಣಾಮಕಾರಿಯಾಗಿ ನಡೆಯಬೇಕು. ಕನ್ನಡ ಭಾಷೆಯ ಹಿರಿಮೆಯನ್ನು ಸಾರುವ ಫಲಕಗಳನ್ನು ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಹಾಕಬೇಕು. ಆಧುನಿಕ ವಿದ್ವಾಂಸರ, ಕವಿಗಳ, ಭಾವಚಿತ್ರಗಳನ್ನು ಪ್ರದರ್ಶಿಸುವುದು ಅಗತ್ಯವಾಗಿದೆ. ಕನ್ನಡವನ್ನು ಪ್ರಾಥಮಿಕ ಹಂತದಲ್ಲಿಯೇ, ೫ ನೇ ತರಗತಿಯವರೆಗೆ, ಬಳಸಿ ಮಾನಸಿಕ ಬೆಳವಣಿಗೆಗೆ ಮೊದಲು ಕಾರಣವಾಗಬೇಕು. ಆ ನಂತರ ಇಂಗ್ಲೀಷ್ ಭಾಷಾ ಕಲಿಕೆಯಿಂದ ಬೌದ್ದಿಕ ಬೆಳವಣಿಗೆಗೆ ಮುಂದಾಗಬೇಕು ಎಂದರು.
ಶಿಕ್ಷಕಿ ಅನಿತಾ ಮಾತನಾಡಿ, ತಮ್ಮ ಬಾಲ್ಯದಿಂದಲೇ ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿ ಸುಮಾರು ೧೫ ಪ್ರಕಾರಗಳಲ್ಲಿ ೭೦ಕ್ಕಿಂತ ಹೆಚ್ಚು ಕೃತಿಗಳನ್ನು ರಚಿಸಿದ ಕನ್ನಡದ ಅಗ್ರಮಾನ್ಯ ಕವಿ ಕುವೆಂಪು ಎಂದರು.
ಮಕ್ಕಳಿಂದ ಬುದ್ದಿಜೀವಿಗಳವರೆಗೆ ಎಲ್ಲರ ಮನಸ್ಸನ್ನು ಮುಟ್ಟಬಲ್ಲ ಸಾಹಿತ್ಯವನ್ನು ಅವರು ರಚಿಸಿದ್ದಾರೆ. ಸಾಹಿತ್ಯದಲ್ಲಿ ಸಮಾನತೆಯನ್ನು ಸಾರಿದವರಲ್ಲಿ ಕುವೆಂಪು ಅಗ್ರಗಣ್ಯರು ಎಂದು ಶಿಕ್ಷಕ ಎ.ಬಿ.ನಾಗರಾಜ ವಿವರಿಸಿದರು.
ಮಕ್ಕಳಿಗಾಗಿ ಕುವೆಂಪು ವಿರಚಿತ ಕವನಗಳ ಗಾಯನ, ಸಿ.ಅಶ್ವತ್ ಅವರ ಗೀತಗಾಯನ ಸ್ಪರ್ಧೆ, ಕುವೆಂಪು ಅವರ ಜೀವನಚರಿತ್ರೆ ಕುರಿತ ಭಾಷಣ ಸ್ಪರ್ಧೆಗಳನ್ನು ನಡೆಸಿ ಹಿರಿಯರ ಮತ್ತು ಕಿರಿಯರ ವಿಭಾಗದಲ್ಲಿ ಪ್ರತ್ಯೇಕ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮಕ್ಕಳಿಂದ ಗೀತಗಾಯನ ನಡೆಯಿತು.
ಶಿಕ್ಷಕ ಬಿ.ನಾಗರಾಜು, ಎಂ.ವೈ.ಲಕ್ಷ್ಮಯ್ಯ, ಶಿಕ್ಷಕಿ ಎಚ್.ತಾಜೂನ್, ಗ್ರಾಮಸ್ಥ ಮುನಿಕೃಷ್ಣಪ್ಪ, ಎಸ್ಡಿಎಂಸಿ ಪದಾಧಿಕಾರಿಗಳು ಹಾಜರಿದ್ದರು.
- Advertisement -
- Advertisement -
- Advertisement -
- Advertisement -