20.1 C
Sidlaghatta
Tuesday, December 5, 2023

ವಿಶ್ವ ಯೋಗ ದಿನಾಚರಣೆ

- Advertisement -
- Advertisement -

ಧೂಳು ಕಣಗಳನ್ನು ಕಂಡರೆ ಈ ವ್ಯಕ್ತಿಗೆ ಭೀತಿ. ಆಸ್ತಮಾ ಕಾಯಿಲೆ ಇವರನ್ನು ಕಂಗೆಡಿಸಿತ್ತು. ಅದಕ್ಕೆಂದು ತೆಗೆದುಕೊಳ್ಳುತ್ತಿದ್ದ ಔಷಧಿಗಳ ಅಡ್ಡಪರಿಣಾಮಗಳು ಇವರನ್ನು ಜರ್ಜರಿತಗೊಳಿಸಿತ್ತು. ಆದರೆ ಈಗವರು ಅತ್ಯುತ್ತಮ ಯೋಗಪಟು. ನಗರದಲ್ಲೀಗ ನೂರಾರು ಜನರಿಗೆ ಯೋಗಾಭ್ಯಾಸ ಕಲಿಸುವ ಗುರುವಾಗಿದ್ದಾರೆ ಪಿ.ಶ್ರೀಕಾಂತ್. ನಿರಂತರವಾಗಿ ಯೋಗಾಭ್ಯಾಸ ಮಾಡುವುದಲ್ಲದೆ ಪ್ರತಿ ರಥಸಪ್ತಮಿಯಂದು ೧೦೦೮ ಸೂರ್ಯನಮಸ್ಕಾರಗಳನ್ನು ಇವರು ಮಾಡುತ್ತಾರೆ.
೧೯೯೮ರಲ್ಲಿ ಮೊಟ್ಟಮೊದಲು ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಉಚಿತ ಯೋಗ ಶಿಕ್ಷಣದ ತರಗತಿಗೆ ಸೇರಿದ ಶ್ರೀಕಾಂತ್ ಪ್ರತಿ ದಿನ ತಪ್ಪದೆ ಯೋಗಾಭ್ಯಾಸ ಮಾಡತೊಡಗಿದರು. ಔಷಧಿಯಿಲ್ಲದೆ ಬದುಕಲು ಕಲಿತು ಈಗ ಇತರರಿಗೆ ನಿರೋಗಿಗಳಾಗಲು ಯೋಗ, ಪ್ರಾಣಾಯಾಮ, ಭಜನೆ ಹಾಗೂ ಧ್ಯಾನದ ಬಗ್ಗೆ ಮಾಹಿತಿ ನೀಡುವವರಾಗಿದ್ದಾರೆ.
ಪತಂಜಲಿ ಯೋಗ ಶಿಕ್ಷಣದಲ್ಲಿ ಜಿಲ್ಲಾ ಪ್ರಶಿಕ್ಷಣ ಶಿಬಿರ, ಪ್ರಾಂತ್ಯ ಮಟ್ಟದ ಪ್ರಶಿಕ್ಷಣ ಶಿಬಿರ, ಆತ್ಮಾನುಸಂಧಾನ ಶಿಬಿರ ಹಾಗೂ ಹಲವಾರು ರಾಜ್ಯ ಮಟ್ಟದ ಯೋಗ ಶಿಬಿರಗಳಲ್ಲಿ ಶಿಕ್ಷಕ ಹಾಗೂ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ನಗರದ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಕಾರ್ಯದರ್ಶಿಯಾಗಿ ಹಲವಾರು ಉಚಿತ ಯೋಗ ತರಬೇತಿ ಶಿಬಿರಗಳನ್ನು ನಡೆಸಿದ್ದಾರೆ. ಯೋಗ ಬಂಧುಗಳನ್ನೊಳಗೊಂಡ ಭಜನಾ ಮಂಡಳಿಯ ನೇತೃತ್ವ ವಹಿಸಿ ನಗರದಲ್ಲಿ ನಡೆಯುವ ಎಲ್ಲಾ ಧರ್ಮಗಳ ಶುಭ ಕಾರ್ಯಗಳಲ್ಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಜನೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಹರಿಜನರ ಕಾಲೋನಿಯಲ್ಲೂ ಭಜನೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ.
‘ನನ್ನನ್ನು ಕಾಡುತ್ತಿದ್ದ ಆಸ್ತಮಾವನ್ನು ದೂರ ಮಾಡಲು, ಆರೋಗ್ಯ ಗಟ್ಟಿ ಮಾಡಿಕೊಳ್ಳಲೆಂದು ಯೋಗ ಶಿಕ್ಷಣಕ್ಕೆ ಸೇರಿದೆ. ಆರೋಗ್ಯ ಸುಧಾರಿಸಿದಂತೆ ಯೋಗವೆಂದರೆ ಕೇವಲ ಆಸನಗಳಲ್ಲ ಎಂಬುದು ಅರಿವಾಯಿತು. ಆಧ್ಯಾತ್ಮ, ಸಾಮಾಜಿಕ ನಡವಳಿಕೆ, ಶಿಸ್ತುಬದ್ಧ ಜೀವನಕ್ರಮ, ಸಮಾಜ ಸೇವೆ, ಆತ್ಮಾವಲೋಕನ ಹಾಗೂ ಸ್ವಂತಕ್ಕೆ ಸ್ವಲ್ಪ ಮತ್ತು ಸಮಾಜಕ್ಕೆ ಸರ್ವಸ್ವ ಎಂಬ ದೃಷ್ಟಿಕೋನ ಲಭ್ಯವಾಯಿತು. ವಿದ್ಯೆ ಮತ್ತು ಅನ್ನವನ್ನು ಹಣ ಪಡೆಯದೆ ನೀಡಬೇಕೆನ್ನುತ್ತದೆ ನಮ್ಮ ಸಂಸ್ಕೃತಿ. ಅದರಂತೆಯೇ ನಾನು ಕಲಿತು ಅನುಕೂಲ ಪಡೆದಂತಹ ಯೋಗ ವಿದ್ಯೆಯನ್ನು ಇತರರಿಗೂ ಕಲಿಸಲು ಪ್ರಾರಂಭಿಸಿದೆ. ಸಕ್ಕರೆ ಕಾಯಿಲೆ, ಬಿಪಿ ಹಾಗೂ ಆಸ್ತಮಾದಂತಹ ರೋಗಗಳನ್ನು ಅಲೋಪತಿ ವೈದ್ಯದ ಔಷಧಿಗಳಿಂದ ನಿಯಂತ್ರಿಸಬಹುದಷ್ಟೇ. ಆದರೆ ನಿರಂತರ ಯೋಗಾಭ್ಯಾಸದಿಂದ ಇವನ್ನು ಸಂಪೂರ್ಣ ಗುಣಪಡಿಸಬಹುದಾಗಿದೆ. ಜೊತೆಯಲ್ಲಿ ನಮ್ಮ ಜೀವನ ಪದ್ಧತಿಯನ್ನೂ ಉತ್ತಮಗೊಳಿಸಿಕೊಳ್ಳಬಹುದು. ಈಗ ಶಿಡ್ಲಘಟ್ಟ ಮತ್ತು ಗ್ರಾಮಂತರ ಪ್ರದೇಶದಲ್ಲಿ ಯೋಗ ಶಿಕ್ಷಣವನ್ನು ಕಲಿಸುತ್ತಿರುವ ತಂಡವೇ ತಯಾರಾಗಿದೆ. ಪ್ರತಿದಿನ ಅಭ್ಯಾಸ ಮಾಡುವ ಜನರ ಸಂಖ್ಯೆಯು ಸಾಕಷ್ಟು ಹೆಚ್ಚಿರುವುದು ಆಶಾದಾಯಕ ಬೆಳವಣಿಗೆಯಾಗಿದೆ’ ಎಂದು ಶ್ರೀಕಾಂತ್ ಯೋಗಾನುಭವವನ್ನು ಹೇಳುವರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!