ನಗರದ ನಗರೇಶ್ವರಸ್ವಾಮಿ ಕಲ್ಯಾಣ ಮಂಟಪದಲ್ಲಿ ಭಾನುವಾರ ವಿಪ್ರ ಪೌರೋಹಿತರ ಮತ್ತು ಆಗಮೀಕರ ವಿಶ್ವಸ್ಥ ಮಂಡಳಿಯ ಜಿಲ್ಲಾ ಮತ್ತು ತಾಲ್ಲೂಕು ಶಾಖೆಗಳಿಂದ ಆಯೋಜಿಸಿದ್ದ ‘ವೇದೋನಿತ್ಯಮಧೀಯತಾಂ’ ವೇದ ಪಾರಾಯಣದ ಅಭಿನಂದನಾ ಸಮಾರಂಭದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಸದಾ ಪರಮಾತ್ಮನ ಸನ್ನಿದಾನದಲ್ಲಿರುತ್ತಾ ಆದ್ಯಾತ್ಮ ಜೀವನ ನಡೆಸುವ ವಿಪ್ರರು ಸಮಾಜಕ್ಕೆ ತಮ್ಮನ್ನೇ ಅರ್ಪಣೆ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ವೇದ ಮಂತ್ರಗಳು ಮನುಷ್ಯನ ಅಂತಃಸತ್ವವನ್ನು ಹೆಚ್ಚಿಸುತ್ತವೆ. ಅವನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡುವ ಸಾಮರ್ಥ್ಯ ವೇದ ಮಂತ್ರಗಳಲ್ಲಿ ಇದೆ. ಈ ಮಂತ್ರಗಳನ್ನು ಲೋಕಕಲ್ಯಾಣಾರ್ಥವಾಗಿ ಪಠಿಸಿ ವಿಪ್ರವೃಂದ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ. ಸಮಾಜಕ್ಕೆ ಮಾರ್ಗದರ್ಶನ ಮಾಡುವ ವಿಪ್ರ ಕುಲಕ್ಕೆ ಸರ್ಕಾರದ ವತಿಯಿಂದ ಏನೇ ಅನುಕೂಲ ಬೇಕಿದ್ದರೂ ಮುಂದೆ ನಿಂತು ನಡೆಸಿಕೊಡುತ್ತೇನೆ ಎಂದು ವಾಗ್ದಾನ ಮಾಡಿದರು.
ಖ್ಯಾತ ಜ್ಯೋತಿಷಿ ವೇ.ಬ್ರ.ಶ್ರೀ ವೆಲ್ಲಾಲ ಸತ್ಯನಾರಾಯಣ ಶಾಸ್ತ್ರಿ ಮಾತನಾಡಿ, ವೇದಗಳ ಸಂರಕ್ಷಣೆಯಾಗಬೇಕು ಹಾಗೂ ವೇದದ ಮಹತ್ವ ಎಲ್ಲರಿಗೂ ತಿಳಿಸಬೇಕೆಂಬ ಉದ್ದೇಶ ದಿಂದ ವೇದಪಾರಾಯಣ ಅಭಿಯಾನವನ್ನು ತಾಲ್ಲೂಕಿನ 29 ದೇವಸ್ಥಾನಗಳಲ್ಲಿ ಮತ್ತು 6 ಮನೆಗಳಲ್ಲಿ ನಡೆಸಿರುವುದು ಅಭಿನಂದನೀಯ. ಪ್ರತೀ ವರ್ಷವೂ ಈ ಅಭಿಯಾನವನ್ನು ಮುಂದುವರೆಸಿ. ಸಾಂಘಿಕವಾಗಿ ವಿಪ್ರಕುಲಕ್ಕೆ ಶಕ್ತಿ, ಆತ್ಮಸ್ಥೈರ್ಯ ತುಂಬಿ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುನ್ನ ವೇ.ಬ್ರ.ಶ್ರೀ ವಿರೂಪಾಕ್ಷಂ ರಾಮಮೋಹನ್ ಶಾಸ್ತ್ರಿ ಮತ್ತು ತಂಡದವರಿಂದ ಲೋಕಕಲ್ಯಾಣಾರ್ಥವಾಗಿ ರುದ್ರಹೋಮ ಮಾಡಿ ಮತ್ತು ಪೂರ್ಣಾಹುತಿಯನ್ನು ನೀಡಲಾಯಿತು. ವೇದ ಪಾರಾಯಣದಲ್ಲಿ ಪಾಲ್ಗೊಂಡಿದ್ದ ವೇದ ಪಂಡಿತರುಗಳಿಗೆ ಸನ್ಮಾನಿಸಲಾಯಿತು.
ವಿಪ್ರ ಪೌರೋಹಿತರ ಮತ್ತು ಆಗಮೀಕರ ವಿಶ್ವಸ್ಥ ಮಂಡಳಿಯ ತಾಲ್ಲೂಕು ಅಧ್ಯಕ್ಷ ವೈ.ಎನ್.ದಾಶರಥಿ, ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಶಿವಗುರುಶರ್ಮ, ಖ್ಯಾತ ಜ್ಯೋತಿಷಿ ವಿ.ಸುರೇಶ ಶಾಸ್ತ್ರಿ, ವಕೀಲ ವಿ.ಮುನಿರಾಜು, ಬಿಳಿಶಿವಾಲೆ ರವಿ, ಹಾಪ್‌ಕಾಮ್ಸ್ ಅಧ್ಯಕ್ಷ ಎ.ಎಸ್.ಚಂದ್ರೇಗೌಡ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎಸ್.ವೆಂಕಟೇಶಯ್ಯ, ತಾಲ್ಲೂಕು ಗೌರವಾಧ್ಯಕ್ಷ ಎ.ಎಸ್.ಶಂಕರರಾವ್, ವಿಪ್ರ ಪ್ರತಿಭಾ ಪುರಸ್ಕಾರ ಹಾಗೂ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಡಾ.ಡಿ.ಟಿ.ಸತ್ಯನಾರಾಯಣರಾವ್, ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಹಾಜರಿದ್ದರು.
- Advertisement -
- Advertisement -
- Advertisement -