ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ರೈತ ಶೇಖರ್, ಶರತ್ (ಕಪ್ಪು ಬಣ್ಣದ ಬೀಜರಹಿತ) ದ್ರಾಕ್ಷಿ ತಳಿಯ ಉತ್ತಮ ಫಸಲನ್ನು ಬೆಳೆದಿದ್ದು, ಕೊರೊನಾ ಪರಿಣಾಮದಿಂದ ವ್ಯಾಪಾರಿಗಳು ಬರದ ಕಾರಣ ಕಂಗಾಲಾಗಿದ್ದರು. ಆದರೂ ಎದೆಗುಂದದೆ ವ್ಯಾಟ್ಸಪ್ ಹಾಗೂ ಫೇಸ್ ಬುಕ್ ಮುಖಾಂತರ ದ್ರಾಕ್ಷಿ ಮಾರಾಟಕ್ಕೆ ಮುಂದಾಗಿದ್ದಾರೆ.
ತಾವು ಬೆಳೆದಿರುವ ದ್ರಾಕ್ಷಿ ಹಣ್ಣಿನ ಚಿತ್ರವನ್ನು ಫೇಸ್ ಬುಕ್ ಮತ್ತು ವ್ಯಾಟ್ಸಪ್ ಮೂಲಕ ಸ್ನೇಹಿತರಿಗೆ ನೆರವಾಗಲು, ಗ್ರಾಹಕರನ್ನು ಹುಡುಕಿಕೊಡುವಂತೆ ತಮ್ಮ ದೂರವಾಣಿ ಸಂಖ್ಯೆಯೊಂದಿಗೆ ಹಾಕಿದ್ದಾರೆ. ಬೆಂಗಳೂರಿನಲ್ಲಿ ಕೊಳ್ಳುವವರಿದ್ದರೆ ತಂದು ಕೊಡುವುದಾಗಿ ತಿಳಿಸಿದ್ದಾರೆ. ಅದನ್ನು ನೋಡಿ ಕೆಲವಾರು ಅಪಾರ್ಟ್ ಮೆಂಟುಗಳಿಂದ ಇವರಿಗೆ ಕರೆ ಬಂದಿದೆ. ಹಾಗಾಗಿ ಪ್ರತಿದಿನ ಎರಡು ಕೆ.ಜಿ. ದ್ರಾಕ್ಷಿಯ ಹಣ್ಣನ್ನು ಬಾಕ್ಸ್ ಮಾಡಿ ಪ್ಯಾಕ್ ಮಾಡಿ ಬೆಂಗಳೂರಿಗೆ ಹೋಗಿ ನೇರವಾಗಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ.
“ಒಂದು ಎಕರೆಯಲ್ಲಿ ಶರತ್ ದ್ರಾಕ್ಷಿ ತಳಿಯನ್ನು ಬೆಳೆದಿರುವೆ. ಇದು ವಾರ್ಷಿಕ ಬೆಳೆ. ಸುಮಾರು 8 ರಿಂದ 10 ಲಕ್ಷ ರೂಗಳನ್ನು ಖರ್ಚು ಮಾಡಿರುವೆ. ಕೊರೊನಾ ಪರಿಣಾಮದಿಂದ ದ್ರಾಕ್ಷಿಯನ್ನು ಕೊಳ್ಳುವವರಿಲ್ಲ, ಕೊಯ್ಯುವವರೂ ಇಲ್ಲದಂತಾಯಿತು. ಆಗ ಫೇಸ್ ಬುಕ್ ಮತ್ತು ವ್ಯಾಟ್ಸಪ್ ಮೂಲಕ ಪ್ರಯತ್ನಿಸಿದೆ. ಬೆಂಗಳೂರಿನಲ್ಲಿ ಕೆಲವು ಅಪಾರ್ಟುಮೆಂಟುಗಳಲ್ಲಿ ಅಲ್ಲಿನ ಸಂಘದವರು ಫೋನ್ ಮಾಡಿ ದ್ರಾಕ್ಷಿ ಕೊಳ್ಳುವುದಾಗಿ ಹೇಳಿದರು. ಅದಕ್ಕಾಗಿ ಎರಡು ಕೇಜಿ ಪ್ಯಾಕ್ ಮಾಡಿ ಕಾರಿನಲ್ಲಿ ಕೊಂಡೊಯ್ದು ಮಾರುತ್ತಿದ್ದೇನೆ” ಎಂದು ರೈತ ಶೇಖರ್ ತಿಳಿಸಿದರು.
“ದ್ರಾಕ್ಷಿ ಹಾಳಾಗದಂತೆ ಪ್ಯಾಕ್ ಮಾಡಲು ಬಾಕ್ಸ್ ಸಿಗುವುದೇ ಕಷ್ಟಕರವಾಗಿದೆ. ಅದರ ಬೆಲೆ ಒಂದೊಂದಕ್ಕೂ 15 ರೂಗಳಾಗುತ್ತದೆ. ಒಂದು ಬಾರಿ 50 ರಿಂದ 80 ಬಾಕ್ಸ್ ದ್ರಾಕ್ಷಿಯನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಬರುತ್ತಿದ್ದೇನೆ. ಕೊಳವೆ ಬಾವಿಯಲ್ಲಿ ನೀರು ಇಲ್ಲದೆ, ಟ್ಯಾಂಕರ್ ಮೂಲಕ ನೀರು ಹರಿಸಿ ಬೆಳೆ ಬೆಳೆದಿದ್ದು, ಇದೀಗ ಕೇಳಿದಷ್ಟಕ್ಕೆ ದ್ರಾಕ್ಷಿ ಮಾರುವಂತಾಗಿದೆ. ನಾವು ಅನಾಥರು ಎಂಬ ಭಾವ ಮೂಡುತ್ತಿದೆ” ಎಂದು ನೋವಿನಿಂದ ಅವರು ಹೇಳಿದರು.
- Advertisement -
- Advertisement -
- Advertisement -







