ಶಿಕ್ಷಕರು ಮನೋವೈಜ್ಞಾನಿಕ ವಿಶ್ಲೇಷಕರಾಗಬೇಕು. ಆಗ ಮಾತ್ರ ಒಂದು ಕೊಠಡಿಯಲ್ಲಿನ ವಿವಿಧ ಗ್ರಹಿಕೆಯ ಹಂತಗಳನ್ನು ಹೊಂದಿರುವ ಮಕ್ಕಳಿಗೆ ಕಲಿಸಲು, ಉತ್ತೇಜಿಸಲು, ಆತ್ಮವಿಶ್ವಾಸ ತುಂಬಲು ಮತ್ತು ಪ್ರೋತ್ಸಾಹಿಸಲು ಸಾಧ್ಯ. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರ ಮತ್ತು ಪೋಷಕರ ಪಾತ್ರ ಸಮಪ್ರಮಾಣದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ತಿಳಿಸಿದರು.
ನಗರದ ಹೊರವಲಯದ ಹನುಮಂತಪುರ ಗೇಟ್ ಬಳಿಯಿರುವ ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ನಡೆದ ಯುಕೆಜಿ ಮಕ್ಕಳ ಗ್ರಾಜುಯೇಷನ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಾಲೆಯಲ್ಲಿ ಶಿಕ್ಷಕರು ಮತ್ತು ಮನೆಯಲ್ಲಿ ಪೋಷಕರು ಮಕ್ಕಳಿಗೆ ಪೂರಕ ವಾತಾವರಣವನ್ನು ಕಲ್ಪಿಸಬೇಕು. ತಮಗೆ ಸಾಧ್ಯವಾಗದ್ದು ಮಕ್ಕಳು ಸಾಧಿಸಬೇಕು ಎಂಬ ಹಂಬಲದಲ್ಲಿ ಪೋಷಕರು ಹೆಚ್ಚಿನ ಒತ್ತಡವನ್ನು ಮಕ್ಕಳ ಮೇಲೆ ಹೇರಬಾರದು. ಹಾಗೆಯೇ ಹೋಲಿಕೆ ಮಾಡಿ ಹೀಯಾಳಿಸಿ ಅವರ ಆತ್ಮವಿಶ್ವಾಸವನ್ನು ಕೊಲ್ಲಬಾರದು ಎಂದು ಹೇಳಿದರು.
ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಾಥನಂದ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರೊಂದಿಗೆ ಓದಲು ಒಳ್ಳೆಯ ವಾತಾವರಣವನ್ನು ಮನೆಯಲ್ಲಿ ಸೃಷ್ಠಿಸಿಕೊಡಬೇಕು. ಶಾಲೆಯಲ್ಲಿ ಮಕ್ಕಳು ಕಲಿಯುವುದಕ್ಕಿಂತ ಹೆಚ್ಚು ಮನೆ ಹಾಗೂ ಸಮಾಜದಿಂದ ಕಲಿಯುತ್ತವೆ. ಹಾಗಾಗಿ ಉತ್ತಮ ನಡತೆ, ಆಚಾರ, ವಿಚಾರ ಮುಂತಾದ ಸಂಗತಿಗಳು ಸಿಗುವ ಹಾಗೆ ನೋಡಿಕೊಳ್ಳಬೇಕು. ಬಾಲ್ಯದಲ್ಲಿ ಕಲಿತದ್ದು ಕಟ್ಟಡಕ್ಕೆ ಅಡಿಪಾಯದಂತೆ ಜೀವನದಲ್ಲಿ ಭವಿಷ್ಯಕ್ಕೆ ನೆರವಾಗುತ್ತದೆ. ಮನೆಯಲ್ಲಿ ದೂರದರ್ಶನ ಮಕ್ಕಳಿಗೆ ಜ್ಞಾನಾರ್ಜನೆಗೆ ಪೂರಕವಾಗಿರಲಿ. ಅವರು ದಾರಿತಪ್ಪುವಷ್ಟು ಅದನ್ನು ನೋಡದಿರಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳು ತಮ್ಮ ಮುದ್ದು ಮಾತಿನಲ್ಲಿ ನಿರೂಪಣೆ, ವಿವರಣೆ, ಪರಿಚಯ ಮತ್ತು ವಂದನೆ ನುಡಿಗಳನ್ನು ಹೇಳಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಯುಕೆಜಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ಸ್ವಾಮೀಜಿ ವಿತರಿಸಿದರು.
ಎಸ್‌ಬಿಎಂ ವ್ಯವಸ್ಥಾಪಕಿ ಹೇಮಲತಾ, ಬಿಜಿಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಮಹದೇವ್, ಸ್ಥಳದಾನಿ ಕೆಂಪರೆಡ್ಡಿ, ಮುರಳಿ, ನಾಗರಾಜು, ಮುನಿರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -