ಹಲವು ದಶಕಗಳಿಂದ ರೇಷ್ಮೆ ತಯಾರಿಸುತ್ತಿರುವ ಶಿಡ್ಲಘಟ್ಟದ ಫಿಲೇಚರ್ಗಳಲ್ಲಿ ಯಾವುದೇ ಗುರುತರವಾದ ಬದಲಾವಣೆಗಳನ್ನು ತರಲಾಗಿಲ್ಲ. ರೇಷ್ಮೆ ನೂಲು ಬಿಚ್ಚಾಣಿಕಾ ಘಟಕಗಳನ್ನು ನಡೆಸುವ ರೀಲರುಗಳಿಂದ ಮಾಹಿತಿ ಪಡೆದು ಈ ಬಗ್ಗೆ ಸಂಶೋಧನೆ ನಡೆಸುತ್ತೇವೆ ಎಂದು ತಲಘಟ್ಟಪುರದ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿಗಳಾದ ಎ.ಜಿ.ಶಂಕರ್ ಮತ್ತು ರವೀಂದ್ರ ಬಂಡಿವಾಡ ತಿಳಿಸಿದರು.
ನಗರದ ವಿವಿಧ ರೇಷ್ಮೆ ತಯಾರಿಕಾ ಘಟಕಗಳಿಗೆ ಭೇಟಿ ನೀಡಿದ ವಿಜ್ಞಾನಿಗಳು ವಿವಿಧ ರೀಲರುಗಳೊಂದಿಗೆ ರೇಷ್ಮೆ ತಯಾರಿಕಾ ಘಟಕಗಳನ್ನು ಹೇಗೆ ಉನ್ನತೀಕರಣಗೊಳಿಸಬಹುದು ಎಂದು ಚರ್ಚಿಸಿದರು.
ಶಿಡ್ಲಘಟ್ಟದಲ್ಲಿ ರೇಷ್ಮೆ ಗೂಡಿನಿಂದ ಕಚ್ಚಾ ರೇಷ್ಮೆಯನ್ನು ತಯಾರಿಸುವ ಘಟಕಗಳನ್ನು ಫಿಲೇಚರ್ಗಳೆನ್ನುತ್ತಾರೆ. ಅದರ ಪೂರ್ವ ನಾಮ ಇಟಾಲಿಯನ್ ಮಾದರಿ ಕಾಟೇಜ್ ಬೇಸನ್ ಎಂದು. ಈ ಪದ್ಧತಿಯಲ್ಲಿ ಬದಲಾವಣೆಗಳನ್ನು ತಂದಲ್ಲಿ ಸಾಕಷ್ಟು ಹಣ ಉಳಿತಾಯವಾಗುತ್ತದೆ. ಆರೋಗ್ಯವೂ ಸುಧಾರಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಾಜರಿದ್ದ ರೀಲರುಗಳು ಹಲವು ಸಲಹೆಗಳನ್ನು ನೀಡಿದರು. ಮೋಟರ್ ಅಳವಡಿಕೆಗೆ ಸಾಕಷ್ಟು ಸ್ಥಳ ಹಾಗೂ ಹಣ ವ್ಯಯವಾಗುತ್ತದೆ. ಈಗಿರುವ ಪದ್ಧತಿಯನ್ನು ಬದಲಾಯಿಸಿ ಟ್ವಿಸ್ಟಿಂಗ್ ಘಟಕಗಳಲ್ಲಿಯ ಮಾದರಿಯಂತೆ ಬಾಕ್ಸ್ ಪದ್ಧತಿಯಲ್ಲಿ ರೂಪಿಸಿದಲ್ಲಿ ಅನುಕೂಲವಾಗುತ್ತದೆ. ರೀಲಿಂಗ್ ಕೆಲಸ ಮಾಡುವವರು ಕುಳಿತುಕೊಳ್ಳುವ ಸ್ಟೂಲನ್ನು ತಿರುಗುವ ರೀತಿಯಲ್ಲಿ ರೂಪಿಸಿದಲ್ಲಿ ಕೆಲಸ ಮಾಡಲು ಸುಲಭವಾಗುತ್ತದೆ. ರೇಷ್ಮೆ ರಾಟೆಯ ಕೆಳಗಡೆ ಕೆಂಡವನ್ನು ಹಾಕಿಟ್ಟು ರೇಷ್ಮೆಯನ್ನು ಒಣಗಿಸುವ ರೀತಿಯನ್ನು ಬದಲಾಯಿಸಿ. ಕುಕ್ಕಿಂಗ್ ಮಾಡುವ ಒಲೆಯ ಬಿಸಿಯನ್ನು ಬಳಸಿಕೊಂಡು ಪೈಪ್ ಮೂಲಕ ಹಾಯಿಸಿ ಮಲ್ಟಿ ಎಂಡ್ನಲ್ಲಿ ರೂಪಿಸಿರುವಂತೆ ಇಲ್ಲಿಯೂ ರೂಪಿಸಿ. ಇದರಿಂದ ಹುಣಸೆ ಸೌದೆಗಾಗಿ ವ್ಯಯಿಸುವ ಸಾವಿರಾರು ರೂಗಳು ಉಳಿತಾಯವಾಗುತ್ತದೆ. ಪುಲ್ಲಿಗಳಿಂದ ರಾಟೆಗೆ ಸಾಗುವ ರೇಷ್ಮೆ ದಾರದ ದೂರವನ್ನು ವೈಜ್ಞಾನಿಕವಾಗಿ ಸ್ಥಿರಗೊಳಿಸಿ. ಎರಡು ಬೇಸನ್ಗಳ ಒಂದು ಟೇಬಲ್ ಕಟ್ಟಿಸಲು ಸುಮಾರು 3 ಸಾವಿರ ರೂಗಳಾಗುತ್ತದೆ. ಇದರ ಬದಲು ಕಬ್ಬಿಣದ ಸ್ಟಾಂಡ್ ವೈಜ್ಞಾನಿಕವಾಗಿ ರೂಪಿಸಿಕೊಡಿ. ರೀಲಿಂಗ್ ಬೇಸನ್ ಮುಂದೆ ಇರುವ ಕುಕ್ಕಿಂಗ್ ಬೇಸನ್ ಕಟ್ಟಿಸುವ ಬದಲಿಗೆ ಬೇರೆಡೆ ಮಾಡಿದಲ್ಲಿ ಸಾಕಷ್ಟು ಉಪಯೋಗಗಳಿವೆ. ರೀಲಿಂಗ್ ಬೇಸನ್ಗೆ ಕೂಡ ನೀವು ಹೊಸ ರೂಪ ಕೊಟ್ಟಲ್ಲಿ ಸಹಾಯವಾಗುತ್ತದೆ ಎಂದು ಸಲಹೆ ನೀಡಿದರು.
ರೀಲರುಗಳ ಸಲಹೆಯನ್ನು ಪಡೆದು ರೇಷ್ಮೆ ಘಟಕಗಳಿಗೆ ಭೇಟಿ ನೀಡಿದ ವಿಜ್ಞಾನಿಗಳು ಅಲ್ಲಿ ಕೆಲಸ ಮಾಡುವವರಿಂದಲೂ ಸಮಸ್ಯೆಗಳನ್ನು ಕೇಳಿ ಮಾಹಿತಿ ಪಡೆದರು.
ರೇಷ್ಮೆ ನೂಲು ಬಿಚ್ಚಾಣಿಕೆದಾರರಾದ ಡಿ.ಎಂ.ಜಗದೀಶ್ವರ್, ಎಸ್.ಸಮೀವುಲ್ಲಾ, ಎ.ಆರ್.ಅಬ್ದುಲ್ ಅಜೀಜ್, ಜಿ.ರೆಹಮಾನ್, ಅನಂತಪದ್ಮನಾಭ, ಎಸ್.ಡಿ.ಸಲೀಂ, ಮಹಬೂಬ್ಪಾಷ, ಜೋಹರ್ಪಾಷ, ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕರಾದ ಎಚ್.ಆರ್.ಪ್ರಭಾಕರ್, ಮಯ್ನುದ್ದೀನ್, ಸಹಾಯಕ ನಿರ್ದೇಶಕರಾದ ನರಸಿಂಹಮೂರ್ತಿ, ಶಶಿಧರ್, ವಿಸ್ತರಣಾಧಿಕಾರಿಗಳಾದ ರಾಮಕುಮಾರ್, ಕೃಷ್ಣಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -