ಸಂಕ್ರಾಂತಿ ಕಳೆದ ನಂತರ ಯುಗಾದಿಯವರೆಗೂ ಒಕ್ಕಣೆ ಕಾರ್ಯದಲ್ಲಿ ನಿರತರಿರುವ ರೈತಾಪಿ ಜನರಿಗೆ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆ ಬಿಸಿ ತಟ್ಟಿದೆ. ತಾಲ್ಲೂಕಿನಾದ್ಯಂತ ರಾಜಕೀಯ ಚಟುವಟಿಕೆಗಳು ಬಿರುಸನ್ನು ಪಡೆದುಕೊಂಡಿದ್ದು, ಎಲ್ಲಾ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು ತಮ್ಮ ಪಕ್ಷವನ್ನು ಪ್ರತಿನಿಧಿಸುತ್ತಿರುವ ಅಭ್ಯರ್ಥಿಯ ಗೆಲುವಿಗೆ ಸರ್ವ ಪ್ರಯತ್ನಗಳನ್ನೂ ನಡೆಸಿದ್ದಾರೆ.
ಅಭ್ಯರ್ಥಿಗಳು ಮತ್ತು ಬೆಂಬಲಿಗರು ಮನೆಮನೆಗೆ ಭೇಟಿ ನೀಡುತ್ತಾ, ತೋಟ, ಹೊಲ ಎಲ್ಲೇ ಇದ್ದರೂ ಮತಯಾಚಿಸುತ್ತಾ, ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರನ್ನು ಮತ ಹಾಕುವಂತೆ ಕೋರುತ್ತಾ ಗೆಲುವಿಗಾಗಿ ತಂತ್ರ ಪ್ರತಿತಂತ್ರಗಳನ್ನು ಹೆಣೆಯುತ್ತಿದ್ದಾರೆ.
ವ್ಯಾಟ್ಸಪ್ ಮತ್ತು ಫೇಸ್ಬುಕ್ ಪ್ರಚಾರ: ಮತದಾರರು ಗ್ರಾಮೀಣ ಪ್ರದೇಶದವರಾದರೂ, ಬಹುತೇಕ ಮಂದಿಯ ಬಳಿ ಸ್ಮಾರ್ಟ್ ಫೋನ್ಗಳಿವೆ, ಇಂಟರ್ನೆಟ್ ಸಂಪರ್ಕವಿದೆ. ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇ–ಹರಾಜು ಪ್ರಕ್ರಿಯೆ ಪ್ರಾರಂಭವಾಗುತ್ತಿರುವುದರಿಂದ ರೇಷ್ಮೆ ಬೆಳೆಗಾರರು ಸ್ಮಾರ್ಟ್ ಫೋನ್ ಉಪಯೋಗ ಅರಿತಿದ್ದಾರೆ. ಕೆಲವು ಅಭ್ಯರ್ಥಿಗಳು ತಂತ್ರಜ್ಞಾನದ ಪ್ರಯೋಜನವನ್ನೂ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಪ್ರಚಾರದ ವೈಖರಿಯನ್ನು, ತಮ್ಮ ಸಾಧನೆಯನ್ನು, ಪಕ್ಷದ ಸಾಧನೆಯನ್ನು ಮತ್ತು ಭರವಸೆಗಳನ್ನು ವ್ಯಾಟ್ಸಪ್ ಮತ್ತು ಫೇಸ್ಬುಕ್ ಮೂಲಕ ತಿಳಿಸುತ್ತಿದ್ದಾರೆ. ವ್ಯಾಟ್ಸಪ್ ಗ್ರೂಪ್ ಮಾಡಿಕೊಂಡು ಅದರಲ್ಲಿ ಮತ್ತು ಫೇಸ್ಬುಕ್ನಲ್ಲಿ ಪ್ರತಿದಿನ ತಮ್ಮ ಪ್ರಚಾರದ ಚಿತ್ರಗಳನ್ನು ಪ್ರಕಟಿಸುತ್ತಿದ್ದಾರೆ.
ಕಾಂಗ್ರೆಸ್ನ ಒಗ್ಗಟ್ಟು ಪ್ರದರ್ಶನ: ಇಬ್ಬಾಗವಾದ ಜರಾಸಂಧನ ದೇಹ ಒಗ್ಗೂಡಿದಂತೆ ಸಂಸದ ಕೆ.ಎಚ್.ಮುನಿಯಪ್ಪ ಮತ್ತು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ನಡುವಿನ ಮುನಿಸಿನಿಂದ ಒಡೆದಿದ್ದ ಕಾಂಗ್ರೆಸ್ ಪುನಃ ಒಂದಾಗಿದೆ. ಇಬ್ಬರು ಮುಖಂಡರು ಜಂಟಿಯಾಗಿ ಪತ್ರಕಾಗೋಷ್ಠಿ ನಡೆಸುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುರುಪನ್ನು ಮೂಡಿಸಿದ್ದಾರೆ. ಟಿಕೆಟ್ ಸಿಗದೆ ಅತೃಪ್ತರಾದವರನ್ನೂ ಸಮಾಧಾನಗೊಳಿಸಿ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ಮುಖಂಡರು ಮನವೊಲಿಸಿದ್ದಾರೆನ್ನಲಾಗಿದೆ.
ತಾಲ್ಲೂಕಿನ ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವವರಲ್ಲಿ ಚೀಮಂಗಲ ಜಿಲ್ಲಾ ಪಂಚಾಯತಿ ಕ್ಷೇತ್ರದ ಅಭ್ಯರ್ಥಿ ವಿನುತಾ ಆರ್ ಶ್ರೀನಿವಾಸ್ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿದ್ದವರು. ಮೊದಲು ಚೀಮಂಗಲ ಕ್ಷೇತ್ರದಿಂದಲೇ ಆಯ್ಕೆಯಾಗಿದ್ದ ಅವರು ಈ ಬಾರಿಯೂ ಅದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಜಿಲ್ಲಾ ಪಂಚಾಯತಿ ಹಾಲಿ ಸದಸ್ಯ ಸತೀಶ್ ಈ ಮೊದಲು ಜಂಗಮಕೋಟೆ ಕ್ಷೇತ್ರದಿಂದ ಆಯ್ಕೆಯಾಗಿದ್ದು, ಈ ಬಾರಿ ದಿಬ್ಬೂರಹಳ್ಳಿ ಕ್ಷೇತ್ರದಲ್ಲಿ ಪ್ರಯತ್ನ ನಡೆಸಿದ್ದಾರೆ.
ಸಂಸದ ಕೆ.ಎಚ್.ಮುನಿಯಪ್ಪ ಮತ್ತು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ವಿವಿಧ ಗ್ರಾಮಗಳಲ್ಲಿ ಪ್ರಚಾರಸಭೆಗಳನ್ನು ನಡೆಸುತ್ತಾ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಶ್ರಮವಹಿಸಿದ್ದಾರೆ.
ಜೆಡಿಎಸ್ ನ ಆತ್ಮವಿಶ್ವಾಸ: ಜೆಡಿಎಸ್ ಪಕ್ಷದ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಅಭ್ಯರ್ಥಿಗಳು ಜೊತೆಯಾಗಿ ಬೆಂಬಲಿಗರೊಂದಿಗೆ ಮನೆಮನೆ ಬೇಟಿ ನೀಡುತ್ತಾ ಕರಪತ್ರಗಳನ್ನು ನೀಡುತ್ತಾ ಮತಯಾಚಿಸುತ್ತಿದ್ದಾರೆ. ನಮ್ಮ ಪಕ್ಷದ ಚುನಾಯಿತ ಸದಸ್ಯರು ಮತ್ತು ಇತರ ಪಕ್ಷದ ಚುನಾಯಿತ ಸದಸ್ಯರು ಇದುವರೆಗೂ ತಮ್ಮ ಅನುದಾನದಲ್ಲಿ ಯಾವ ರೀತಿಯ ಕೆಲಸಗಳನ್ನು ಮಾಡಿದ್ದಾರೆ ಹಾಗೂ ಅನುದಾನಗಳ ಸದ್ಭಳಕೆ ಮಾಡಿದ್ದಾರೆ ಎಂಬುದನ್ನು ಕರಪತ್ರಗಳ ಮೂಲಕ ಜನರಿಗೆ ತಿಳಿಸುತ್ತಿದ್ದಾರೆ. ಈ ಹಿಂದೆ ಅಬ್ಲೂಡು ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಶಾಸಕ ಎಂ.ರಾಜಣ್ಣ ಅವರ ಪತ್ನಿ ಶಿವಲೀಲಾ ರಾಜಣ್ಣ ಚುನಾಯಿತರಾಗಿದ್ದರು. ಜೆಡಿಎಸ್ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಸ್ಪರ್ಧಿಸಿದ್ದಾರೆ. ಶಾಸಕ ಎಂ.ರಾಜಣ್ಣ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಗ್ರಾಮಗಳಲ್ಲಿ ನಡೆಸಿರುವ ಕಾಮಗಾರಿಗಳನ್ನು ವಿವರಿಸುತ್ತಾ ಭರವಸೆಗಳನ್ನು ನೀಡುತ್ತಾ ಕಾರ್ಯಕರ್ತರೊಂದಿಗೆ ಗ್ರಾಮಗಳನ್ನು ಸುತ್ತುತ್ತಿದ್ದಾರೆ.
ಬಿಜೆಪಿಯ ಪ್ರಯತ್ನ: ಬಿಜೆಪಿ ಪಕ್ಷದ ವರ್ಚಸ್ಸು ಕ್ಷೇತ್ರದಲ್ಲಿ ಕ್ಷೀಣವಾಗಿದ್ದರೂ, ನಾಲ್ವರು ಜಿಲ್ಲಾ ಪಂಚಾಯತಿ ಅಭ್ಯರ್ಥಿಗಳು ಮತ್ತು 12 ಮಂದಿ ತಾಲ್ಲೂಕು ಪಂಚಾಯತಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಗಂಜಿಗುಂಟೆ ಜಿಲ್ಲಾ ಪಂಚಾಯತಿ ಕ್ಷೇತ್ರದ ಅಭ್ಯರ್ಥಿ ಸಿ.ವಿ.ಲೋಕೇಶ್ಗೌಡ ನಾಮಪತ್ರ ಸಲ್ಲಿಸಿದ ದಿನದಿಂದಲೇ ತಮ್ಮ ಪ್ರಚಾರ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಬಿಜೆಪಿಯ ಸಿ.ವಿ.ಲೋಕೇಶ್ಗೌಡ ವಿಧಾನ ಸಭೆ ಚುನಾವಣೆಗೆ ತಾವೊಮ್ಮೆ ಸ್ಪರ್ಧಿಸಿದ್ದರು. ಬಿಜೆಪಿಯ ವಿವಿಧ ತಾಲ್ಲೂಕು ಪಂಚಾಯತಿ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲುವ ಉಮ್ಮೇದಿಯಲ್ಲಿ ಪ್ರಯತ್ನವನ್ನು ನಡೆಸಿದ್ದಾರೆ. ಇವರು ಸೆಳೆಯುವ ಮತಗಳು ಚುನಾವಣೆ ಫಲಿತಾಂಶದಲ್ಲಿ ಪರಿಣಾಮ ಬೀರಲಿವೆ.
ಸಿಪಿಐಎಂ, ಸರ್ವೋದಯ ಮತ್ತು ಸಮಾಜವಾದಿ ಪಕ್ಷ: ಸಿ.ಪಿ.ಐ.ಎಂ ಪಕ್ಷದಿಂದ ಗಂಜಿಗುಂಟೆ ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೆ ಸದಾನಂದ ಸ್ಪರ್ಧಿಸಿದ್ದು, ಬಡವರ ಪಕ್ಷ ನಮ್ಮದು, ಬಡವರಿಗಾಗಿ ಹೋರಾಟ ಮಾಡುವವರು ನಾವು ಎನ್ನುತ್ತಾ ಕೆಂಪು ದಿರಿಸಿನೊಂದಿಗೆ ತಮ್ಮ ಪಕ್ಷದ ಸದಸ್ಯರೊಂದಿಗೆ ಮತಯಾಚಿಸುತ್ತಿದ್ದಾರೆ. ಸಾದಲಿಯ ಎಸ್.ಡಿ.ಶ್ರೀನಿವಾಸ್ ದಿಬ್ಬೂರಹಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದಿಂದ ಕಣಕ್ಕಿಳಿದಿದ್ದರೆ, ಸಾದಲಿಯ ಎಸ್.ವಿ.ಶ್ರೀನಿವಾಸ್ ಸಮಾಜವಾದಿ ಪಕ್ಷದಿಂದ ಕಣದಲ್ಲಿದ್ದಾರೆ.
ಜಿದ್ದಾಜಿದ್ದಿ ಪೈಪೋಟಿ: ಹಣ, ಜಾತಿ, ವಿವಿಧ ಆಮಿಷಗಳು ಚುನಾವಣೆಯಲ್ಲಿ ಗ್ರಾಮೀಣರ ಮನವೊಲಿಸಲು ಬಳಸುವುದನ್ನು ತಡೆಯಲು ಚುನಾವಣಾ ಕಮಿಷನ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ, ಮತಗಳಿಕೆಗಾಗಿ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಮತಗಳಿಕೆಯಾಗಿ ನಾನಾ ಪ್ರಯತ್ನಗಳನ್ನು ನಡೆಸಿದ್ದಾರೆ.
ತಾಲ್ಲೂಕಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನೇರ ಜಿದ್ದಾಜಿದ್ದಿ ಪೈಪೋಟಿಯಿದೆ. ಗಂಜಿಗುಂಟೆ ಕ್ಷೇತ್ರದಲ್ಲಿ ಜೆಡಿಎಸ್ನ ಹಿರಿಯ ರಾಜಕಾರಣಿ ದಿ.ಮುನಿಶಾಮಪ್ಪ ಅವರ ಪುತ್ರ ಮತ್ತು ಶಾಸಕ ಎಂ.ರಾಜಣ್ಣ ಅವರ ಬಾವಮೈದ ಡಾ.ಎ.ಎಂ.ಜಯರಾಮರೆಡ್ಡಿ ಜೆಡಿಎಸ್ ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್ನಿಂದ ದೊಡ್ಡತೇಕಹಳ್ಳಿ ಟಿ.ಎಸ್.ಗೋಪಾಲರೆಡ್ಡಿ ಸ್ಪರ್ಧಿಸಿದ್ದಾರೆ. ಇವರ ನಡುವೆ ಬಿಜೆಪಿಯ ಸಿ.ವಿ.ಲೋಕೇಶ್ಗೌಡ ಮತ್ತು ಸಿ.ಪಿ.ಐ.ಎಂ ಪಕ್ಷದ ಸದಾನಂದ ಇದ್ದಾರೆ. ಇವರು ಗಳಿಸುವ ಮತಗಳು ನಿರ್ಣಾಯಕವಾಗಿಲಿದ್ದು, ಕೆಲವೇ ಮತಗಳು ಗೆಲುವನ್ನು ನಿರ್ಧರಿಸುವುದರಿಂದ ಸೋಲುವವರು ತಮ್ಮೊಂದಿಗೆ ಯಾರನ್ನು ಎಳೆದೊಯ್ಯಬಹುದು ಎಂಬುದು ಅಭ್ಯರ್ಥಿಗಳನ್ನು ಕಾಡುತ್ತಿದೆ.
- Advertisement -
- Advertisement -
- Advertisement -