ಮಕ್ಕಳ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಮತ್ತು ಕರಕುಶಲ ಕಲೆಯನ್ನು ಹೊಂದಿರುವ ಗೃಹಿಣಿಯರನ್ನು ಬೆಳಕಿಗೆ ತರುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಶಿವಲೀಲಾ ರಾಜಣ್ಣ ತಿಳಿಸಿದರು.
ನಗರದ ಗೌಡರ ಬೀದಿಯ ದಾಸಪ್ಪನವರ ಪಾರ್ಥಸಾರಥಿ ಮನೆಯಲ್ಲಿ ಶನಿವಾರ ಸಂಜೆ ಕ.ಸಾ.ಪ ತಾಲ್ಲೂಕು ಘಟಕದಿಂದ ನಡೆದ ‘ಕಸದಿಂದ ರಸ’ ಎಂಬ ವಿವಿಧ ಪ್ರಕಾರಗಳ ಕರಕುಶಲ ಕಲೆಯನ್ನು ಉಚಿತವಾಗಿ ಕಲಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತ್ಯಾಜ್ಯ ಎಂದು ಬಿಸಾಡುವ ತೆಂಗಿನ ಚಿಪ್ಪು, ರದ್ದಿ ಕಾಗದ, ಐಸ್ಕ್ರೀಮ್ ಚಮಚ, ಹತ್ತಿ ಮುಂತಾದ ಹಲವು ವಸ್ತುಗಳಿಂದ ಬೆರಗಾಗುವಂಥಹ ಕಲಾಕೃತಿಗಳನ್ನು ಲತಾ ಮಂಜುನಾಥ್ ಮಾಡಬಲ್ಲರು. ಈ ಕಲೆಯನ್ನು ಅವರು ಆಸಕ್ತ ಮಕ್ಕಳಿಗೆ ಉಚಿತವಾಗಿ ಕಲಿಸಲಿರುವುದರಿಂದ ಮಕ್ಕಳು ಆಸಕ್ತಿಯಿಂದ ಕಲಿಯಬೇಕು. ಈ ರೀತಿಯ ಕಲಿಕೆಯಿಂದ ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ. ಬುದ್ಧಿ ಚುರುಕಾಗುತ್ತದೆ ಮತ್ತು ಜೀವನೋತ್ಸಾಹ ಮೂಡುತ್ತದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ‘ಕಸದಿಂದ ರಸ’ ಕಲಾ ಶಿಬಿರವು ಹನ್ನೆರಡು ವಾರಗಳ ಕಾಲ ನಡೆಯಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 4 ರಿಂದ 6 ಗಂಟೆಯವರೆಗೂ ನಡೆಯುತ್ತದೆ. ಶಿಬಿರದ ಮುಕ್ತಾಯದಲ್ಲಿ ಕಲಿತ ಮಕ್ಕಳಿಂದ ಅವರು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನವನ್ನು ಕ.ಸಾ.ಪ ತಾಲ್ಲೂಕು ಘಟಕದ ವತಿಯಿಂದ ಪ್ರದರ್ಶನವನ್ನು ಏರ್ಪಡಿಸಲಾಗುವುದು ಹಾಗೂ ಭಾಗವಹಿಸಿದ ಮಕ್ಕಳಿಗೆ ಪ್ರಮಾಣಪತ್ರ ಮತ್ತು ಉತ್ತಮ ಕಲಾಕೃತಿಗಳನ್ನು ಪ್ರದರ್ಶಿಸಿದವರಿಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದು ಹೇಳಿದರು.
ಕ.ಸಾ.ಪ ಜಿಲ್ಲಾ ಮಾಜಿ ಅಧ್ಯಕ್ಷ ಎಸ್.ವಿ.ನಾಗರಾಜರಾವ್ ಕಲೆಯ ಶಿಬಿರದ ಅನುಕೂಲಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಶಿವಲೀಲಾ ರಾಜಣ್ಣ ಮತ್ತು ಸಂಪನ್ಮೂಲ ವ್ಯಕ್ತಿ ಲತಾ ಮಂಜುನಾಥ್ ಅವರಿಗೆ ಕ.ಸಾ.ಪ ತಾಲ್ಲೂಕು ಘಟಕದ ವತಿಯಿಂದ ಸಸಿ ಮತ್ತು ಪುಸ್ತಕವನ್ನು ನೀಡಲಾಯಿತು.
ಕ.ಸಾ.ಪ ತಾಲ್ಲೂಕು ಗೌರವ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಮಹಿಳಾ ಪ್ರತಿನಿಧಿ ಟಿ.ಸಾವಿತ್ರಮ್ಮ, ಸಾಂಸ್ಕೃತಿಕ ಪ್ರತಿನಿಧಿ ಮಾಲತಿ, ಸಂಚಾಲಕ ಭಾಸ್ಕರ್, ಮಾಜಿ ಅಧ್ಯಕ್ಷ ವಿ.ಕೃಷ್ಣ, ರೂಪ ಪಾರ್ಥಸಾರಥಿ, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -