ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಭಾನುವಾರ ಪಟ್ಟಣದ ಟಿ.ಬಿ.ರಸ್ತೆಯಲ್ಲಿರುವ ಕೃಷ್ಣಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಹೂವಿನ ಅಲಂಕಾರ, ಹೋಮ, ಪೂಜೆ ನಡೆಸಲಾಯಿತು. ಯಾದವ ಕುಲಸ್ಥರು ಕುಟುಂಬ ಸಮೇತರಾಗಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಮಹಿಳೆಯರು ತಂಬಿಟ್ಟು ದೀಪಗಳನ್ನು ಮೆರವಣಿಗೆಯಲ್ಲಿ ತಂದು ಪೂಜೆಯನ್ನು ನೆರವೇರಿಸಿದರು.
ತಾಲ್ಲೂಕಿನ ಯಾದವ ಕುಲಸ್ಥರಿಂದ ಮೆರವಣಿಗೆಯನ್ನು ಆಯೋಜಿಸಿದ್ದು, ಶ್ರೀಕೃಷ್ಣ ಮೂರ್ತಿಗಳಿರುವ ಮುತ್ತಿನ ಪಲ್ಲಕ್ಕಿಗಳು, ಸಪ್ತಾಶ್ವದ ರಥಗಳು, ಕೀಲುಕುದುರೆ, ಗಾರ್ಡಿಬೊಂಬೆ, ನವಿಲುಬೊಂಬೆ, ತಮಟೆ ವಾದನ, ನಾದಸ್ವರ, ಶ್ರೀಕೃಷ್ಣ ವೇಷಧಾರಿಗಳಾದ ಮಕ್ಕಳು, ದೀಪಗಳನ್ನು ಹೊತ್ತ ಮಹಿಳೆಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದ್ದು ಆಕರ್ಷಕವಾಗಿತ್ತು.
ಕೃಷ್ಣಸ್ವಾಮಿ ದೇವಸ್ಥಾನದಲ್ಲಿ ಬಾಲಕೃಷ್ಣನ ಮೂರ್ತಿಯನ್ನು ತೊಟ್ಟಿಲಲ್ಲಿರಿಸಿ ಬೆಣ್ಣೆ, ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ ಹಾಗೂ ಹಣ್ಣುಗಳಿಂದ ಸಿಂಗರಿಸಲಾಗಿತ್ತು. ದೇವಾಲಯದಲ್ಲಿ ಮಹಾಮಂಗಳಾರತಿಯ ನಂತರ ಪ್ರಸಾದವನ್ನು ವಿನಿಯೋಗಿಸಲಾಯಿತು. ಪಟ್ಟಣದ ಉಲ್ಲೂರುಪೇಟೆಯ ಭಜನೆ ಮಂದಿರದಲ್ಲಿರುವ ಪುರಾತನ ತಂಜಾವೂರು ಚಿತ್ರಕಲೆಯ ಬಾಲಕೃಷ್ಣನ ಚಿತ್ರಪಟಕ್ಕೆ ವಿಶೇಷ ಅಲಂಕಾರವನ್ನು ಮಾಡಿ ಪೂಜೆಯನ್ನು ನೆರವೇರಿಸಲಾಯಿತು. ಪದ್ಮಶ್ರೀ ಘಂಟಸಾಲ ಗಾಲ ಕಲಾವೃಂದದ ಡಿ.ಎನ್.ಲಕ್ಷ್ಮೀಪತಿ ಮತ್ತು ತಂಡದವರಿಂದ ಭಕ್ತಿಗೀತೆಗಳ ರಸಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲಾ ಪಲ್ಲಕ್ಕಿಗಳ ತಂಡದವರಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು.

ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಮಾಜಿ ಅಧ್ಯಕ್ಷ ವೇಣುಗೋಪಾಲ್, ಪಿ.ಎಲ್.ಡಿ. ಬ್ಯಾಂಕ್ ಮಾಜಿ ಉಪಾಧ್ಯಕ್ಷ ಅಶ್ವತ್ಥಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -







