ಮಕರ ಸಂಕ್ರಾಂತಿಯಂದು ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಆನಂತರ ಸೂರ್ಯನ ಪಥ ಉತ್ತರಾಭಿಮುಖವಾಗುತ್ತದೆ. ಬೆಳಕು ಹೆಚ್ಚುತ್ತದೆ. ಚಳಿಗಾಲ ಮುಗಿಯಿತು. ಇನ್ನೇನಿದ್ದರೂ ಬಿಸಿಲು ಪ್ರಾರಂಭ ಎಂಬುದನ್ನು ಸಂಕ್ರಾಂತಿ ಸೂಚಿಸುತ್ತದೆ.
ಮುಂಜಾನೆಯ ಕಾಯಕ ನಿರತರಾದ ರೈತರು, ಹಾಲಿನವರು, ಪೇಪರ್, ಹೂ, ತರಕಾರಿ ಮಾರಾಟಗಾರರು ಈ ಬಾರಿಯ ಚಳಿ ಮತ್ತು ಮಂಜಿನ ಹೊಡೆತಕ್ಕೆ ನಲುಗಿದ್ದರು. ಸಂಕ್ರಾಂತಿ ಬೇಗ ಬರಲಿ, ಚಳಿಯ ನಡುಕದಿಂದ ಪಾರಾಗಬಹುದು ಎಂದು ಅವರು ಸ್ವರ್ಗದ ಬಾಗಿಲು ತೆರೆಯುತ್ತದೆಂದು ನಂಬಿದ ಈ ಪರ್ವ ಕಾಲಕ್ಕೆ ಎದುರು ನೋಡುತ್ತಿದ್ದರು. ಕಾದಿದ್ದ ದಿನ ಆಗಮಿಸಿದೆ.
ಆದರೆ ದೀಪವಾರುವ ಮುನ್ನ ಜೋರಾಗಿ ಉರಿಯುವಂತೆ ತಾಲ್ಲೂಕಿನಲ್ಲಿ ಗುರುವಾರ ಚುಮುಚುಮು ಚಳಿಯ ಮುಂಜಾವಿನಲ್ಲಿ ದಟ್ಟ ಮಂಜು ಕವಿದಿತ್ತು. ವಾಹನಗಳು ದೀಪ ಹಾಕಿಕೊಂಡು ಹೋಗಬೇಕಾದ ಪರಿಸ್ಥಿತಿ. ಶಾಲು, ಸ್ವೆಟರ್, ಟೊಪ್ಪಿಗಳಿಂದ ಬಂಧಿತರಾಗದಿದ್ದರೆ ಚಳಿ ತರುವ ನಡುಕ ನಿಲ್ಲುತ್ತಿರಲಿಲ್ಲ.
ಶಿಡ್ಲಘಟ್ಟದಿಂದ ಚಿಂತಾಮಣಿಗೆ ಹೋಗುವ ರಸ್ತೆಯಲ್ಲಿನ ಬಿಳಲುಗಳನ್ನು ಚಾಚಿನಿಂತ ಆಲದಮರಗಳ ಸಾಲು ಮಂಜಿನ ಪಂಜನ್ನು ಹೊತ್ತುನಿಂತಂತೆ ಭಾಸವಾಗುತ್ತಿತ್ತು. ದುರಂತವೆಂದರೆ ಇದು ಈ ಮರಗಳಿಗೆ ಜೀವಮಾನದ ಕಟ್ಟಕಡೆಯ ಚಳಿಗಾಲ. ನೋಡುಗರಾದ ನಮಗೂ ಕಟ್ಟಕಡೆಯ ದೃಶ್ಯಕಾವ್ಯ.
ರಸ್ತೆಯ ಅಗಲೀಕರಣದಿಂದ ರಸ್ತೆ ಬದಿಯ ಮರಗಳಿಗೆ ಕೊಡಲಿ ಬೀಳುತ್ತಿವೆ. ರಾಷ್ಟ್ರೀಯ ಹೆದ್ದಾರಿ- 234ರ ವಿಸ್ತರಣೆ ಕಾರ್ಯ ಪ್ರಾರಂಭವಾಗಿದ್ದು, ರಸ್ತೆ ಅಕ್ಕಪಕ್ಕದ ಮರಗಳನ್ನು ಕಡಿದು ರಸ್ತೆ ವಿಸ್ತರಣೆಗೆ ಅನುವು ಮಾಡಿಕೊಡಲಾಗುತ್ತಿದೆ. ಮೂಡಬಿದರೆ ಮುಳಬಾಗಿಲು ನಡುವಿನ ರಾಷ್ಟ್ರೀಯ ಹೆದ್ದಾರಿ -234ನ್ನು ಈಗಿನ ರಸ್ತೆಯ ಮಧ್ಯಭಾಗದಿಂದ ಎರಡೂ ಬದಿ ತಲಾ 50 ಅಡಿಗಳಷ್ಟು ವಿಸ್ತರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಧರಿಸಿದೆ. ಅದರ ಭಾಗವಾಗಿ ಈಗ ರಸ್ತೆಯ ಎರಡೂ ಬದಿಗಳಲ್ಲಿನ ಹಲವಾರು ವರ್ಷಗಳ ಬೃಹತ್ ಮರಗಳನ್ನು ಕಡಿಯಲಾಗುತ್ತಿದೆ. ಮೂಡಬಿದರೆಯಿಂದ ಪ್ರಾರಂಭವಾಗುವ ಈ ರಸ್ತೆಯು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ ಮಾರ್ಗವಾಗಿ ಮುಳಬಾಗಲಿಗೆ ಸಂಪರ್ಕ ನೀಡಲಿದೆ. ಅಲ್ಲಿಂದ ಚೆನ್ನೈಗೂ ಈ ರಸ್ತೆ ಸಂಪರ್ಕ ಸಾಧಿಸಲಿದೆ. ರಾಜ್ಯ ಹೆದ್ದಾರಿಯಾಗಿದ್ದ ಈ ರಸ್ತೆಯನ್ನು ಕಳೆದೆರಡು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು.
ಈಗಾಗಲೇ ಚಿಕ್ಕಬಳ್ಳಾಪುರ ಶಿಡ್ಲಘಟ್ಟ ನಡುವಿನ ರಸ್ತೆ ಬದಿಯ ಬೃಹತ್ತಾದ ಪುರಾತನ ಮರಗಳು ಧರೆಗುರುಳುತ್ತಿದ್ದು, ಚಿಂತಾಮಣಿ ರಸ್ತೆಯಲ್ಲಿ ಬೂದಾಳ ಮತ್ತು ವೀರಾಪುರ ಗ್ರಾಮಗಳ ಸಮೀಪವಿರುವ ಬೃಹತ್ ಆಲದ ಮರಗಳೂ ದಿನಗಳೆಣಿಸುತ್ತಿವೆ. ಆರುವ ಮುಂಚಿನ ದೀಪದಂತೆ ಗುರುವಾರ ಮುಂಜಾನೆ ಮಂಜಿನ ಪಂಜನ್ನುರಿಸುತ್ತಾ ಮರಗಳು ವಿದಾಯ ಹೇಳುತ್ತಿರುವಂತೆ ಅವು ಕಂಡು ಬಂದವು.
‘ರಸ್ತೆ ಬದಿಯಲ್ಲಿ ಮರಗಳನ್ನು ನೆಡುವ ಸಂಸ್ಕೃತಿ ಅಶೋಕನ ಕಾಲದಿಂದಲೂ ಪ್ರಚಲಿತವಾದುದು. ಹಿಂದಿನವರು ರಸ್ತೆ ಬದಿಯಲ್ಲಿ ನೆರಳಿಗಾಗಿ ಮರಗಳು ಮತ್ತು ದಾರಿಹೋಕರ ದಣಿವಾರಿಸಲು ನೀರು ಹಾಕಿಡುತ್ತಿದ್ದ ಶಿಲೀಂದ್ರ ಅಥವಾ ಅರೆವಟ್ಟಿಗೆಗಳನ್ನು ನಿರ್ಮಿಸುವಲ್ಲಿ ರಸ್ತೆಗೆ ನೀಡುವಷ್ಟೇ ಪ್ರಾಮುಖ್ಯತೆ ನೀಡುತ್ತಿದ್ದರು. ಆದರೀಗ ಅಭಿವೃದ್ಧಿಯ ನೆಪದಲ್ಲಿ ಬೃಹತ್ ಮರಗಳ ಮಾರಣಹೋಮ ನಡೆಯುತ್ತಿದೆ. ಅಷ್ಟು ದೊಡ್ಡದಾಗಿ ಮರಗಳು ಬೆಳೆಯಲು ಸಾಕಷ್ಟು ವರ್ಷಗಳು ಬೇಕು. ಆದರೆ ರಸ್ತೆ ಮಾಡುವವರು ಪುನಃ ರಸ್ತೆ ಬದಿ ಮರಗಳನ್ನು ನೆಡುವ ನೈತಿಕತೆ ಹೊಂದಿದ್ದಾರೆಯೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಒಂದು ಮರದ ನಾಶದಿಂದ ಅದನ್ನು ಅವಲಂಬಿತವಾದ ಹಲವಾರು ಕೀಟಗಳು, ಪಕ್ಷಗಳು ಹಾಗೂ ಇನ್ನಿತರ ಜೀವಿಗಳ ನಾಶ ಎಂಬುದನ್ನು ಮರೆಯಬಾರದು’ ಎನ್ನುತ್ತಾರೆ ಹಿರಿಯ ವಕೀಲ ಡಿ.ಎ.ಅಶ್ವತ್ಥನಾರಾಯಣ.
- Advertisement -
- Advertisement -
- Advertisement -