ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಆಂಧ್ರ ಮತ್ತು ತೆಲಂಗಾಣದ ಮಾದರಿಯಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡದಿದ್ದರೆ, ಮುಂದಿನ ದಿನದಲ್ಲಿ ರಾಜ್ಯದಲ್ಲಿರುವ ಸುಮಾರು ೩೬ ಲಕ್ಷ ಮಾದಿಗ ಜನಾಂಗದವರು, ಕಾಂಗ್ರೆಸ್ ವಿರುದ್ಧವಾಗಿ ಕೆಲಸ ಮಾಡಲಿದ್ದಾರೆ ಎಂದು ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ೧೯೭೬ ರಲ್ಲಿ ಹಾವನೂರ ಅವರ ಸಲ್ಲಿಸಿರುವ ವರದಿಯನ್ನು ಸರ್ಕಾರ ಪರಿಗಣಿಸಿಲ್ಲ. ನಂತರ ಕಳೆದ ನಾಲ್ಕು ವರ್ಷಗಳ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಸದಾನಂದಗೌಡ ಅವರು ಮುಖ್ಯಮಂತ್ರಿಗಳಾಗಿದ್ದಾಗಲೂ ವರದಿಯನ್ನು ಸಲ್ಲಿಸಲಾಗಿತ್ತಾದರೂ ವರದಿಯನ್ನು ತಯಾರಿಸಲು ಅನುದಾನ ಬಿಡುಗಡೆ ಮಾಡಿದ್ದನ್ನು ಬಿಟ್ಟರೆ, ಇದುವರೆಗೂ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತಹ ಪ್ರಾಮಾಣಿಕ ಪ್ರಯತ್ನ ಸರ್ಕಾರ ಮಾಡಲಿಲ್ಲ. ಜಾತಿಜನಗಣತಿಯ ಪ್ರಕಾರ ರಾಜ್ಯದಲ್ಲಿ ಒಟ್ಟು ಒಂದು ಕೋಟಿ ಎಂಟು ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಹಾವನೂರ ವರದಿಯಂತೆ ಹೆಚ್ಚಾಗಿರುವ ಮಾದಿಗ ಜನಾಂಗಕ್ಕೆ ಶೇ. ೮ ರಷ್ಟು ಮೀಸಲಾತಿ ಸಿಗಬೇಕಾಗಿತ್ತು, ಆದರೆ ನಮಗೆ ಇದುವರೆಗೂ ಸಿಕ್ಕಿದ್ದು ಮಾತ್ರ, ಕೇವಲ ಶೇ. ೧.೫ ರಷ್ಟು ಮೀಸಲಾತಿ ಮಾತ್ರ.
ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ನಮಗೆ ಸಿಗಬೇಕಾಗಿದ್ದ ಮೀಸಲಾತಿ ಇದುವರೆಗೂ ಸಿಕ್ಕಿಲ್ಲ, ಆದ್ದರಿಂದ ಮೇ 22 ರಂದು ಬೆಂಗಳೂರಿನ ವಸಂತನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ರಾಜ್ಯಾದ್ಯಂತ ಇರುವ ಮಾದಿಗ ಸಮುದಾಯದ ಜನಪ್ರತಿನಿಧಿಗಳನ್ನು ಸೇರಿಸಿ, ಅಭಿನಂದನಾ ಕಾರ್ಯಕ್ರಮವನ್ನು ಮಾಡುವ ಮೂಲಕ, ಸರ್ಕಾರದ ಮೇಲೆ ಒತ್ತಡ ಹೇರುವಂತಹ ಕೆಲಸವನ್ನು ಮಾಡಲು ಯೋಜನೆ ರೂಪಿಸಲಾಗಿದ್ದು, ಜಿಲ್ಲೆಯಿಂದ ೨೩೫ ಮಂದಿ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎನ್.ನರಸಿಂಹಮೂರ್ತಿ ಮಾತನಾಡಿ, ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸರ್ಕಾರ ಅನುಷ್ಟಾನಗೊಳಿಸಲು, ರಾಜ್ಯ ಸಚಿವ ಸಂಪುಟದ ಕೆಲವು ಮಂದಿ ಸಚಿವರೆ ಅಡ್ಡಗಾಲಾಗಿದ್ದಾರೆ, ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸದಿದ್ದರೆ, ಮುಂದಿನ ದಿನಗಳಲ್ಲಿ ಗಂಭೀರವಾದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಸರ್ಕಾರಗಳು ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ, ವರದಿಗಳನ್ನು ತಯಾರು ಮಾಡಿಸುತ್ತಾರೆ, ನಂತರ ಮೂಲೆಗುಂಪು ಮಾಡುತ್ತಾರೆ ಎಂದರು.
ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಗುರುಮೂರ್ತಿ, ಉಪಾಧ್ಯಕ್ಷ ಸಿ.ಎನ್.ರಾಮಪ್ಪ, ಯಾ.ಮ.ನಾರಾಯಣಸ್ವಾಮಿ, ಸಿ.ಎನ್.ನಾರಾಯಣಸ್ವಾಮಿ, ದೊಡ್ಡತೇಕಹಳ್ಳಿ ಕದಿರಪ್ಪ, ಡಿ.ವಿ.ಮೂರ್ತಿ, ಎಂ.ಸಿ.ನಾರಾಯಣಸ್ವಾಮಿ, ಚಿಕ್ಕವೆಂಕಟೇಶ್, ಅಲಸೂರುದಿನ್ನೆ ಮಂಜುನಾಥ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -