ಸಮಾನತೆಯ ಸಮಾಜ ನಿರ್ಮಾಣವಾಗಲಿ

0
504

ಸಮಾಜದ ಎಲ್ಲಾ ವರ್ಗದ ಜನತೆಯು ಸಮಾನತೆಯಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದು ಶೂದ್ರಶಕ್ತಿ ಸಮಿತಿಯ ಅಧ್ಯಕ್ಷ ಬಿ.ಆರ್.ರಾಮೇಗೌಡ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದಲ್ಲಿ ಸೋಮವಾರ ಶೂದ್ರಶಕ್ತಿ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಸಂಕ್ರಾಂತಿ ರೈತ ಹಬ್ಬದ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಪ್ರತಿನಿತ್ಯ ಶೋಷಣೆಗೊಳಪಡುತ್ತಿರುವ ಶೂದ್ರಶಕ್ತಿಗಳು ಒಂದಾಗುವುದರೊಂದಿಗೆ ಮನುಸಂಸ್ಕೃತಿಯ ಅಂಶಗಳ ವಿರುಧ್ದ ಹೋರಾಟ ಮಾಡಬೇಕಾಗಿದೆ ಎಂದರು.
ಭಾರತ ದೇಶದಲ್ಲಿ ಹುಟ್ಟಿಬೆಳೆದಿರುವ ನಮಗೆ ವೇದಗಳನ್ನು ಕಲಿಯುವಂತಹ ಸ್ವಾತಂತ್ರ್ಯವಿಲ್ಲವೆ ಎಂದ ಅವರು ಒಕ್ಕಲಿಗ, ಲಿಂಗಾಯಿತ, ಕುರುಬ, ಕುಂಬಾರ, ಬಣಜಿಗ, ಗೊಲ್ಲ, ಬೇಡ, ಬೆಸ್ತ, ಅಗಸ, ನಾಯಿಂದ, ಇಡಿಗ, ತಿಗಳ, ದಲಿತ, ಗಿರಿಜನ, ಕೊರಚ, ಬೋವಿ, ಉಪ್ಪಾರ, ನೇಕಾರ, ಕೊರಮ, ವಡ್ಡ, ಬಂಜಾರ ಮರಾಠ ಮುಂತಾದವರೆಲ್ಲರೂ ಶೂದ್ರರೇ ಆಗಿದ್ದು, ಅವರವರ ಕಸುಬುಗಳಿಗೆ ಅನುಗುಣವಾಗಿ ಜಾತಿಗಳನ್ನು ವಿಭಜಿಸಲಾಗಿದೆ ಹಾಗಾಗಿ ಈ ಸತ್ಯವನ್ನು ಅರ್ಥಮಾಡಿಕೊಂಡು ಪ್ರತಿಯೊಬ್ಬ ನಾಗರಿಕರು ಸಮಾನತೆಯ ಜೀವನ ನಡೆಸುವಂತಾಗಬೇಕು ಎಂದರು.
ಪಶುಸಂಗೋಪನಾ ಇಲಾಖೆಯ ಅಡಿಷನಲ್ ಡೈರೆಕ್ಟರ್ ಡಾ.ಚಲುವಯ್ಯ ಮಾತನಾಡಿ ಸತತ ಬರಗಾಲದಿಂದಾಗಿ ರೈತರ ಸುಗ್ಗಿಯ ಹಬ್ಬವಾದ ಸಂಕ್ರಾಂತಿ ಹಬ್ಬ ಇತ್ತೀಚೆಗೆ ಕಳೆಗಟ್ಟುತ್ತಿದೆ. ಈ ಭಾಗದ ರೈತರು ನೀರಿನ ಕೊರತೆಯಿಂದಾಗಿ ವ್ಯವಸಾಯ ಮಾಡಲಾಗದೇ ಅತ್ತ ನಗರಗಳ ಕಡೆ ವಲಸೆ ಹೋಗಲಾಗದ ಅತಂತ್ರ ಸ್ಥಿತಿಯಲ್ಲಿದ್ದು ರೈತರ ಉಳಿವಿಗಾಗಿ ಪಶುಸಂಗೋಪನೆ ಸಹಕಾರಿಯಾಗಿದೆ. ಪಶುಸಂಗೋಪನೆಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಮಿನಾರಾಯಣರೆಡ್ಡಿ, ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್, ಶೂದ್ರಶಕ್ತಿ ಸಮಿತಿಯ ಗೋವಿಂದರಾಜು, ಸ್ಥಳೀಯ ಮುಖಂಡರಾದ ಶಂಕರನಾರಾಯಣ್, ಅರುಣ್ಬಾಭು, ಮಾರಪ್ಪ ಹಾಜರಿದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!