ತೀವ್ರ ಕುಡಿಯುವ ನೀರಿನ ಸಮಸ್ಯೆಯನ್ನು ಅನುಭವಿಸಿದರೂ ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಮಾಡುತ್ತಿರುವ ಬಯಲು ಸೀಮೆ ಭಾಗಗಳ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಶಾಸಕ ಎಂ.ರಾಜಣ್ಣ ಒತ್ತಾಯಿಸಿದರು.
ತಾಲ್ಲೂಕಿನ ಬೆಳ್ಳೂಟಿ ಗೇಟ್ನಲ್ಲಿರುವ ಗುಟ್ಟಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಆಯೋಜಿಸಿದ್ದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ, ಮರಣಹೊಂದಿರುವ ರಾಸುಗಳ ವಿಮಾ ಪರಿಹಾರದ ಚೆಕ್ಕುಗಳ ವಿತರಣೆ, ಮರಣ ಹೊಂದಿರುವ ಹಾಲು ಉತ್ಪಾದಕರ ವಾರಸುದಾರರಿಗೆ ಪರಿಹಾರದ ಚೆಕ್ಕುಗಳ ವಿತರಣಾ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ತೀವ್ರ ಬರಗಾಲದಲ್ಲಿಯೂ ಕೂಡಾ ರಾಜ್ಯಕ್ಕೆ ಉತ್ತಮಗುಣಮಟ್ಟದ ಹಾಲನ್ನು ಪೂರೈಕೆ ಮಾಡುತ್ತಿರುವ ರೈತರು, ಒಂದು ಲೀಟರ್ ಹಾಲು ಉತ್ಪಾದನೆ ಮಾಡಬೇಕಾದರೆ ಕಷ್ಟಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರಿಗೆ ಒಂದು ಲೀಟರ್ಹಾಲಿಗೆ ಕನಿಷ್ಟ ೩೦ ರೂಪಾಯಿಗಳನ್ನು ನೀಡಬೇಕು ಎಂದು ಒತ್ತಾಯಿಸಲಾಗಿದೆ. ಈ ಬಗ್ಗೆ ಬೆಳಗಾವಿಯ ಅಧಿವೇಶನದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಸಕರು, ಹಾಗೂ ಡೈರಿ ನಿರ್ದೇಶಕರುಗಳ ನಿಯೋಗ ಮುಖ್ಯಮಂತ್ರಿಯವರನ್ನು ಬೇಟಿ ಮಾಡಿದ್ದು, ರೈತರ ಸಂಕಷ್ಟಕ್ಕೆ ಸ್ಪಂದಿಸುವಂತಹ ಭರವಸೆಯನ್ನು ನೀಡಿದ್ದಾರೆ ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಹಾಲು ಉತ್ಪಾದಕರು ನೀಡುವಂತಹ ಒಂದು ಲೀಟರ್ ಹಾಲಿಗೆ ೧೦ ಪೈಸೆಯ ದತ್ತಿ ನಿಧಿಗೆ ಬರುವ ಹಣದಲ್ಲಿ, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ೬ ನೇ ತರಗತಿಯ ಸುಮಾರು ೨೦೦೦ ಮಕ್ಕಳಿಗೆ ಶಾಲಾ ಬ್ಯಾಗ್ಗಳನ್ನು ವಿತರಣೆ ಮಾಡಲಾಗುತ್ತಿದೆ. ೧೨ ಮಂದಿಗೆ ಮರಣಹೊಂದಿರುವ ರಾಸುಗಳ ವಿಮಾ ಪರಿಹಾರ ತಲಾ ೪೦ ಸಾವಿರದಂತೆ ವಿತರಣೆ ಮಾಡಲಾಗುತ್ತಿದೆ. ಮರಣಹೊಂದಿರುವ ಹಾಲು ಉತ್ಪಾದಕರ ವಾರಸುದಾರರಿಗೆ ತಲಾ ೫೦೦೦ ದಂತೆ ೩೦ ಮಂದಿಗೆ ಚೆಕ್ಕುಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ದತ್ತಿನಿಧಿಯಿಂದ ಶಾಲಾ ಬ್ಯಾಗ್ಗಳನ್ನು ವಿತರಣೆ ಮಾಡಲಾಯಿತು. ಹಾಲು ಉತ್ಪಾದಕರ ಮರಣ ಹೊಂದಿರುವ ರಾಸುಗಳಿಗಾಗಿ ತಲಾ ೪೦ ಸಾವಿರ ರೂಪಾಯಿಗಳಂತೆ ಚೆಕ್ಕುಗಳು ಹಾಗೂ ಸಂಘಗಳಿಗೆ ಲ್ಯಾಪ್ಟಾಪ್ಗಳನ್ನು ವಿತರಣೆ ಮಾಡಲಾಯಿತು.
ಕೋಚಿಮುಲ್ ಅಧ್ಯಕ್ಷ ಕಾಂತರಾಜು, ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲ್, ಚಿಕ್ಕಬಳ್ಳಾಪುರ ತಾಲ್ಲೂಕಿನ ನಿರ್ದೇಶಕ ಕೆ.ವಿ.ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಜಿಲ್ಲಾ ವ್ಯವಸ್ಥಾಪಕ ಎ.ಜಿ. ಲೋಕೇಶ್, ಗೋವಿಂದರಾಜು, ಹಿತ್ತಲಹಳ್ಳಿ ನಂಜುಂಡಪ್ಪ, ಉಪವ್ಯವಸ್ಥಾಪಕ ಹನುಮಂತರಾವ್, ಕೆ.ಎನ್.ಬಿ.ರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -