ಶಿಡ್ಲಘಟ್ಟದ ಆಜಾದ್ ನಗರದ ಸರ್ಕಾರಿ ಉರ್ದು ಪ್ರೌಢಶಾಲೆಗೆ ಹೊಸ ಕಳೆ ಬಂದಿದೆ. ಹಲವು ವರ್ಷಗಳಿಂದ ಸುಣ್ಣಬಣ್ಣ ಕಾಣದಿದ್ದ ಈ ಶಾಲೆಯ ಗೋಡೆಗಳನ್ನು ಕಳೆದ ಮೂರು ದಿನಗಳಿಂದ ಬಳಿದಿರುವ್ವ ಬಣ್ಣ ಹಾಗೂ ಗೋಡೆಗಳ ಮೇಲೆ ರಚಿಸಿರುವ ಬಣ್ಣ ಬಣ್ಣದ ವಿನೂತನ ಶೈಲಿಯ ಚಿತ್ರಗಳಿಂದ ನೋಡುಗರ ಮನಸೆಳೆಯುವಂತಾಗಿದೆ. ಇದಕ್ಕೆ ಕಾರಣರಾದವರು ಸಾಫ್ಟ್ ವೇರ್ ಉದ್ಯೋಗಿಗಳು.
ಆಜಾದ್ ನಗರದ ಸರ್ಕಾರಿ ಉರ್ದು ಪ್ರೌಢಶಾಲೆಯ ಆವರಣ, ಸುತ್ತ ಮುತ್ತ ಸ್ವಚ್ಛಗೊಳಿಸಿದ್ದಾರೆ. ಕಳೆಗಿಡಗಳನ್ನೆಲ್ಲಾ ತೆಗೆಯಲಾಗಿದೆ. ಶಾಲೆಯ ಗೋಡೆಗಳ ಮೇಲೆ ವರ್ಲಿಯ ಪ್ರೇರಣೆಯಿಂದ, ಜಾಮಿತಿಕ ನಕ್ಷೆಗಳು, ವಿಜ್ಞಾನ, ಪರಿಸರ, ಶಿಕ್ಷಣ, ಕ್ರೀಡೆ, ಬಿಸಿಯೂಟ, ಸೈಕಲ್ ವಿತರಣೆ ಮೊದಲಾದ ಸರ್ಕಾರಿ ಯೋಜನೆಗಳು, ಕಂಪ್ಯೂಟರ್ ಮುಂತಾದವುಗಳಿರುವ ಸುಂದರ ಚಿತ್ರಗಳನ್ನು ರಚಿಸಲಾಗಿದೆ.
ಗ್ರಾಮಾಂತರ ಟ್ರಸ್ಟ್ ಮೂಲಕ ಸಿಟ್ರಿಕ್ಸ್ ಆರ್ ಅಂಡ್ ಡಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಸುಮಾರು ೨೫ ಮಂದಿ ಉದ್ಯೋಗಿಗಳು ಆಗಮಿಸಿ ತಮ್ಮ ಕಂಪೆನಿಯ ಹಣದಲ್ಲಿ ಗ್ರಾಮೀಣಾಭಿವೃದ್ಧಿಯ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
“ನಾವುಗಳು ಗ್ರಾಮಾಂತರ ಟ್ರಸ್ಟ್ ಸಹಯೋಗದಲ್ಲಿ ಆಜಾದ್ ನಗರದ ಸರ್ಕಾರಿ ಉರ್ದು ಪ್ರೌಢಶಾಲೆಯ ಗೋಡೆಗಳಿಗೆ ಬಣ್ಣ ಬಳಿದಿದ್ದೇವೆ. ಅದರ ಮೇಲೆ ಚಿತ್ರಗಳನ್ನು ರಚಿಸುತ್ತಿದ್ದೇವೆ. ಕಳೆದ ಎರಡು ವರ್ಷಗಳಿಂದ ನಾವು ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಶಾಲೆಗಳಲ್ಲಿ ಈ ರೀತಿಯ ಚಟುವಟಿಕೆ ನಡೆಸಿದ್ದೇವೆ. ಇದಲ್ಲದೆ ನಾವು ಮಕ್ಕಳೊಂದಿಗೆ ಸಂವಾದಿಸುತ್ತಾ ಅವರಿಗೆ ಸುಲಭ ಗಣಿತ, ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ಬಗೆ, ಉತ್ತೇಜನ ತುಂಬುವ, ಕಲಿಕಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕೌಶಲಗಳನ್ನು ಕಲಿಸುತ್ತಿದ್ದೇವೆ. ನಾವು ಈ ರೀತಿಯ ಸಾಮಾಜಿಕ ಚಟುವಟಿಕೆ ನಡೆಸಲು ನಮ್ಮ ಕಂಪೆನಿ ನೆರವಾಗುತ್ತದೆ” ಎಂದು ಕಂಪೆನಿಯ ಸೋಹಿನಿ ತಿಳಿಸಿದರು.
“ಶಾಲೆಯ ಗೋಡೆಯನ್ನು ವರ್ಲಿಯ ರೂಪಾಂತರದಿಂದ, ಜಾಮಿತಿಕ ನಕ್ಷೆಗಳು, ರೇಖಾ ಚಿತ್ರಗಳು, ವಿಜ್ಞಾನ, ಪರಿಸರ, ಶಿಕ್ಷಣ, ಕ್ರೀಡೆ ಮೊದಲಾದ ಚಿತ್ರಗಳಿಂದ ಚಂದಗೊಳಿಸಲು ಬೆಂಗಳೂರಿನಿಂದ ಬಂದಿರುವ ಸಿಟ್ರಿಕ್ಸ್ ಕಂಪೆನಿಯ ಉದ್ಯೋಗಿಗಳಿಗೆ ಸರ್ಕಾರಿ ಶಾಲೆಯ ಕಲಾ ಶಿಕ್ಷಕರಾದ ಎಂ.ನಾಗರಾಜ್, ಜಿ.ಅರುಣ, ಬಿ.ಜೆ.ಸಿದ್ದೇಶ್ ಬಂಡಿಮನೆ, ಎನ್.ಆರ್.ಸಂತೋಷ್ ಕುಮಾರ್ ನೆರವಾಗುತ್ತಿದ್ದಾರೆ” ಎಂದು ಗ್ರಾಮಾಂತರ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟೀ ಉಷಾ ಶೆಟ್ಟಿ ಹೇಳಿದರು.
“ನಮ್ಮ ಶಾಲೆಯ ಮತ್ತು ಮಕ್ಕಳ ಅದೃಷ್ಟವಿದು. ಸಿಟ್ರಿಕ್ಸ್ ಕಂಪೆನಿಯ ಉದ್ಯೋಗಿಗಳು ತಮ್ಮ, ಶ್ರಮ, ಸಮಯ ಮತ್ತು ಹಣವನ್ನು ಸರ್ಕಾರಿ ಶಾಲೆಗೆ ಮೀಸಲಿಟ್ಟು ನಮ್ಮ ಶಾಲೆಯನ್ನು ಸ್ವಚ್ಛಗೊಳಿಸಿ, ಸಿಂಗರಿಸಿದ್ದಾರೆ” ಎಂದು ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯಶಿಕ್ಷಕ ಎಚ್.ಎಂ.ರಂಗನಾಥ್ ತಿಳಿಸಿದರು.
ಗ್ರಾಮಾಂತರ ಟ್ರಸ್ಟ್ ಸಂಚಾಲಕರಾದ ಅಭಿಷೇಕ್, ಅನಂತಲಕ್ಷ್ಮಿ, ನಾಗರಾಜ್, ಶಿಕ್ಷಕರಾದ ಫಾತೀಮುನ್ನೀಸಾ, ಹರ್ಷಿಕಮರ್, ಶಬೀನಾಬಾನು, ಸುಹೇಲ್ ಅಹಮದ್, ವಿಶ್ವನಾಥ್, ವೆಂಕಟೇಶ್, ಕೆ.ಎನ್.ಸುಬ್ಬಾರೆಡ್ಡಿ ಹಾಜರಿದ್ದರು.
- Advertisement -
- Advertisement -
- Advertisement -







