ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ವಿಜ್ಞಾನ ಪ್ರಯೋಗಗಳನ್ನು ಮಾಡುವ ಮೂಲಕ ಆಚರಿಸಿದರು. ವೈಜ್ಞಾನಿಕ ಪ್ರಯೋಗಗಳನ್ನು, ಪ್ರಾತ್ಯಕ್ಷಿಕೆಗಳನ್ನು ನೋಡಲು ಆರು ಗ್ರಾಮಗಳ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಆಗಮಿಸಿದ್ದು ವಿಶೇಷವಾಗಿತ್ತು.
ಜಲವಿದ್ಯುತ್ ಮಾದರಿ, ಕಣ್ಣು ಮತ್ತು ಮನಸ್ಸಿನ ಹೊಂದಾಣಿಕೆಯ ಪ್ರಯೋಗ, ನೀರಿನಲ್ಲಿ ಫ್ಲೋರೈಡ್ ಅಂಶವನ್ನು ಪರೀಕ್ಷಿಸುವ ವಿಧಾನ, ನೀರಿನ ಶುದ್ಧೀಕರಣ, ನೀರಿನ ಮೇಲೆ ದೀಪ ಉರಿಸುವುದು, ವಿದ್ಯುತ್ ಮಂಡಲಗಳ ಪ್ರಯೋಗಗಳು, ಮಳೆ ನೀರು ಕೊಯ್ಲಿನ ಮಾದರಿ, ಕಂಪ್ಯೂಟರ್ ಬಿಡಿ ಭಾಗಗಳು, ಐಸ್ ಕ್ರೀಂ ಕಡ್ಡಿಗಳ ರಿಮೋಟ್ ಕಾರು, ಕೋತಿಗಳನ್ನು ಓಡಿಸುವ ಬಂದೂಕು, ನೀರಿನ ಕಾರಂಜಿ, ಸೋಲಾರ್ ಕುಕ್ಕರ್, ಸೋಲಾರ್ ಪವರ್ ಬ್ಯಾಂಕ್, ಗೋಬರ್ ಗ್ಯಾಸ್, ನೀರಿನ ಸಂಪ್ ತುಂಬಿದಾಗ ತಿಳಿಸುವ ಸಿಗ್ನಲ್, ನೀರು ಪಂಪ್ ಮಾಡುವ ಸಾಧನ, ಆಟೋಮೆಟಿಕ್ ಮೋಟರ್, ರಾಕೆಟ್ ಉಡಾವಣೆ, ಗುಜರಾತಿ ಒಲೆ, ಅಗ್ನಿಪರ್ವತ ಮುಂತಾದ ಪ್ರಯೋಗಗಳನ್ನು ಮೂರು ಕೋಣೆಗಳಲ್ಲಿ ಮಕ್ಕಳು ಮಾಡಿಟ್ಟು ಆಗಮಿಸಿದ ವಿದ್ಯಾರ್ಥಿಗಳಿಗೆ ವಿವರಿಸಿದರು.
ಐದನೇ ತರಗತಿಯ ವಿದ್ಯಾರ್ಥಿಗಳಾದ ಚಾರುಲತಾ ಮತ್ತು ಶ್ರೇಯಸಿ ‘ಕಸದಿಂದ ರಸ’ ಎಂಬ ಬಿಸಾಡುವ ಪದಾರ್ಥಗಳನ್ನು ಬಳಸಿ ಹಲವಾರು ಅಲಂಕಾರದ ವಸ್ತುವನ್ನು ತಯಾರಿಸಿ ಪ್ರದರ್ಶಿಸಿದ್ದರು.
ತಾಲ್ಲೂಕಿನ ಅಬ್ಲೂಡು, ರಾಮಚಂದ್ರ ಹೊಸೂರು, ತಾತಹಳ್ಳಿ, ಹನುಮಂತಪುರ, ಹರಳಹಳ್ಳಿ, ಚೀಮನಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಭೇಟಿ ನೀಡಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಡಿಯಮ್ ಉದುರಿಸಿದ್ದ ತೆಂಗಿನ ಜುಟ್ಟಿಗೆ ನೀರು ಹಾಕಿ ಬೆಂಕಿ ಹೊತ್ತಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಶಿಕ್ಷಕ ಗೋಪಾಲಕೃಷ್ಣಯ್ಯ, ವಿಜ್ಞಾನ ಶಿಕ್ಷಕ ಎಂ.ಎ.ರಾಮಕೃಷ್ಣಪ್ಪ, ಶಿಕ್ಷಕರಾದ ನಾಗಭೂಷಣ, ಗಂಗಶಿವಪ್ಪ, ಎಸ್ಡಿಎಂಸಿ ಸದಸ್ಯರಾದ ಕಲ್ಪನಾ, ಗೋಪಾಲಪ್ಪ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -