ತಾಲ್ಲೂಕಿನ ಪಲಿಚೇರ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಕನ್ನಪ್ಪನಹಳ್ಳಿಯಲ್ಲಿ ಸರ್ಕಾರಿ ಶಾಲೆಯ ಪಕ್ಕದಲ್ಲೇ ಹಾಳು ಬಾವಿಯೊಂದಿದ್ದು, ತುರ್ತಾಗಿ ಅದನ್ನು ಮುಚ್ಚಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬಾವಿಯ ಒಂದು ಬದಿಯಲ್ಲಿ ಸರ್ಕಾರಿ ಶಾಲೆಯಿದೆ, ಮತ್ತೊಂದು ಕಡೆ ರಸ್ತೆಯಿದೆ ಮತ್ತು ಮತ್ತೊಂದೆಡೆ ಮನೆಗಳಿವೆ. ಹಳೆಯ ಕಾಲದ ಬಾವಿಯಾಗಿರುವುದರಿಂದ ಅದಕ್ಕೆ ಯಾವುದೇ ಅಡತಡೆಯಿಲ್ಲ. ಮಳೆ ನೀರು ಹರಿದು ಸುತ್ತಲಿನ ದಿಬ್ಬವೆಲ್ಲಾ ಕುಸಿದು ಅಪಾಯಕಾರಿಯಾಗಿದೆ. ಬಾವಿಯ ಒಳಗೂ ಮತ್ತು ಹೊರಗೂ ಗಿಡಗಂಟೆಗಳು ಬೆಳೆದಿದ್ದು, ಕತ್ತಲಲ್ಲಿ ಬಾವಿಯಿರುವುದೂ ತಿಳಿಯದಂತಿದೆ. ಸುಮಾರು 45 ರಿಂದ 50 ಅಡಿ ಆಳವಿದ್ದು, ಸಾರ್ವಜನಿಕರು ಕತ್ತಲಲ್ಲಿ ಈ ಭಾಗದಲ್ಲಿ ಓಡಾಡಲು ಭಯಪಡುವಂತಾಗಿದೆ. ಹಲವು ಬಾರಿ ದನಕರುಗಳು ಮತ್ತು ಕೋಳಿಗಳು ಈ ಬಾವಿಯಲ್ಲಿ ಬಿದ್ದ ಘಟನೆ ನಡೆದಿವೆ.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲೇ ಬಾವಿಯಿರುವುದರಿಂದ ಶಾಲೆ ಬಿಟ್ಟಾಗ ಮಕ್ಕಳು ಈ ಬಾವಿಯ ಹತ್ತಿರ ಆಡುತ್ತಾ ಇಣುಕುವುದು, ಕಲ್ಲೆಸೆಯುವುದೂ ಮಾಡುತ್ತಿರುತ್ತಾರೆ. ಇದರಿಂದ ಪೋಷಕರು ಆತಂಕಕ್ಕೊಳಗಾಗುತ್ತಿರುತ್ತಾರೆ.
ಈ ಬಗ್ಗೆ ಗ್ರಾಮಸ್ಥರು ಈಗಾಗಲೇ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ, ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಏನಾದರೂ ಅಪಾಯ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳಬೇಕು. ತುರ್ತಾಗಿ ಸ್ಥಳ ಪರಿಶೀಲಿಸಿ ಬಾವಿಯನ್ನು ಮುಚ್ಚಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
- Advertisement -
- Advertisement -
- Advertisement -







