‘ಸಹಸ್ರ ದೀಪಗಳ ಉಡುಗೊರೆ’ ಎಂಬ ಕಾರ್ಯಯೋಜನೆಯ ಮೂಲಕ ಸರ್ಕಾರಿ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲು ಸೋಲಾರ್ ದೀಪಗಳನ್ನು ಉಚಿತವಾಗಿ ನೀಡುತ್ತಿರುವುದಾಗಿ ಒನ್ ಗುಡ್ ಸ್ಟೆಪ್ ಸಂಸ್ಥೆಯ ಅಮಿತಾ ಪೈ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ನೂರು ವಿದ್ಯಾರ್ಥಿಗಳಿಗೆ ಶುಕ್ರವಾರ ಸೋಲಾರ್ ದೀಪಗಳನ್ನು ವಿತರಿಸಿ ಅವರು ಮಾತನಾಡಿದರು.
ಶಾಲೆಯವರ ಮೇಲ್ವಿಚಾರಣೆಯಲ್ಲಿ ಸೋಲಾರ್ ದೀಪಗಳನ್ನು ವಿತರಿಸಲಾಗುತ್ತಿದೆ. ಸೋಲಾರ್ ದೀಪ ಪಡೆದ ವಿದ್ಯಾರ್ಥಿಗಳು ಮನೆಯಲ್ಲಿ ವಿದ್ಯುತ್ ಇಲ್ಲದಿದ್ದರೂ ಅಭ್ಯಾಸಕ್ಕೆ ತೊಂದರೆ ಪಡಬಾರದು ಎಂಬುದು ನಮ್ಮ ಉದ್ದೇಶ. ಮಕ್ಕಳು ಶಾಲೆಗೆ ತಂದು ದೀಪಗಳನ್ನು ಚಾರ್ಜ್ ಮಾಡಿಕೊಂಡು ಹೋಗಬೇಕು. ಇದರಿಂದ ಶಿಕ್ಷಕರಿಗೆ ಅದರ ಉಪಯೋಗದ ಬಗ್ಗೆ ಖಾತ್ರಿಯೂ ಸಿಗುತ್ತದೆ. ಈಗಾಗಲೇ ಶಿಡ್ಲಘಟ್ಟ ತಾಲ್ಲೂಕಿನ 10 ಶಾಲೆಗಳಲ್ಲಿ ಸೋಲಾರ್ ದೀಪಗಳನ್ನು ವಿತರಿಸಿದ್ದೇವೆ. ಜಿಲ್ಲೆಯಲ್ಲಿ ಸೋಲಾರ್ ದೀಪಗಳನ್ನು ಪಡೆಯುತ್ತಿರುವ 25 ನೇ ಶಾಲೆಯಿದು ಎಂದು ಹೇಳಿದರು.
‘ಕಲಿಕೆಗಾಗಿ ಬೆಳಕು’ ಎಂಬ ಕಾರ್ಯಕ್ರಮದ ಮೂಲಕ ‘ನಮ್ಮ ಮುತ್ತೂರು’ ಸಂಸ್ಥೆ 2011 ರಲ್ಲಿ ಸೆಲ್ಕೋ ಸೋಲಾರ್ ಮತ್ತು ಖಾಸಗಿ ದಾನಿಗಳ ಸಹಾಯದಿಂದ ಮುತ್ತೂರು ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ಮಕ್ಕಳಿಗೆ ಸೋಲಾರ್ ದೀಪಗಳನ್ನು ನೀಡಿದ್ದರು. ಇದರಿಂದ ಕಲಿಕೆಯಲ್ಲಿ ಪ್ರಗತಿ ಕಂಡುಬಂದಿತು. ಅವರಿಂದ ಪ್ರೇರಣೆ ಹೊಂದಿದ ನಾವು ಒಂದು ಸಾವಿರ ಮಕ್ಕಳಿಗೆ ಸೋಲಾರ್ ದೀಪಗಳನ್ನು ಉಡುಗೊರೆಯಾಗಿ ನೀಡುವ ಗುರಿಯನ್ನು ಹೊಂದಿದ್ದೇವೆ. ಹತ್ತನೇ ತರಗತಿಯ ಮಕ್ಕಳು ಉತ್ತೀರ್ಣಗೊಂಡು ಶಾಲೆ ಬಿಟ್ಟ ನಂತರ ಅವರು ಬಳಸುತ್ತಿದ್ದ ಸೋಲಾರ್ ದೀಪಗಳು 9 ರಿಂದ 10ಕ್ಕೆ ಬಂದ ಮಕ್ಕಳಿಗೆ ಸಿಗುತ್ತವೆ. ಒನ್ ಗುಡ್ ಸ್ಟೆಪ್, ಪವರ್ಸ್ ಆಫ್ 10 ಮತ್ತು ನಮ್ಮ ಮುತ್ತೂರು ಸಂಸ್ಥೆಗಳು ಜೊತೆಗೂಡಿ ಮಕ್ಕಳಿಗೆ ಸೋಲಾರ್ ದೀಪಗಳ ಉಡುಗೊರೆ ನೀಡುತ್ತಿದ್ದೇವೆ. ಈ ದಿನದ ಕಾರ್ಯಕ್ರಮದಲ್ಲಿ ಮೆಂಡಾ ಫೌಂಡೇಷನ್ ಮತ್ತು ವಿಜಯಪುರದ ಭಾಸ್ಕರ್ ನಮ್ಮೊಂದಿಗೆ ಕೈಜೋಡಿಸಿದ್ದಾರೆ ಎಂದು ಅವರು ವಿವರಿಸಿದರು.
ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು, ಉತ್ತಮ ಅಂಕಗಳನ್ನು ಗಳಿಸಬೇಕು, ಪ್ರಕೃತಿ ಸಹಜವಾಸ ಸೂರ್ಯನ ಬೆಳಕನ್ನು ಬಳಕೆ ಮಾಡುವುದನ್ನು ಪ್ರಚುರಪಡಿಸಬೇಕು ಎಂಬುದು ಸೋಲಾರ್ ದೀಪಗಳ ನೀಡುವಿಕೆಯ ಹಿಂದಿನ ಉದ್ದೇಶ ಎಂದು ನುಡಿದರು.
ನಮ್ಮ ಮುತ್ತೂರು ಸಂಸ್ಥೆಯ ಉಷಾಶೆಟ್ಟಿ, ಚತ್ರು ಮೆಂಡಾ, ಪವರ್ಸ್ ಆಫ್ 10 ಸಂಸ್ಥೆಯ ಸ್ಮಿತಾ ಷಾ, ವಿಜಯಪುರದ ಸಿ.ಎನ್.ಭಾಸ್ಕರ್, ಡಿ.ವೈ.ಪಿ.ಸಿ ಜಯರಾಮರೆಡ್ಡಿ, ಶಿಕ್ಷಣ ಇಲಾಖೆಯ ವೆಂಕಟೇಶ್, ನಾಗರತ್ನ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -