ತಾಲ್ಲೂಕಿನ ಸಾದಲಿ ಹೋಬಳಿಯಲ್ಲಿ ಪಶು ಆಹಾರ ಘಟಕ ಸ್ಥಾಪಿಸಲು ಈಗಾಗಲೇ ೨೬ ಎಕರೆಯಷ್ಟು ಸ್ಥಳ ಮಂಜೂರಾಗಿದೆ. ಇಲ್ಲಿ ಪಶು ಆಹಾರ ಘಟಕ ಸ್ಥಾಪಿಸಿದ್ದೇ ಆದಲ್ಲಿ ಜನತೆಗೆ ಉದ್ಯೋಗ ಕಲ್ಪಿಸುವ ಜೊತೆಗೆ ಈ ಬಾಗದ ಹೈನುಗಾರಿಕೆಗೆ ಅನುಕೂಲವಾಗುತ್ತದೆ ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಹೇಳಿದರು.
ತಾಲ್ಲೂಕಿನ ತುಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಬಿ.ಎಂ.ಸಿ ಘಟಕದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಉತ್ತರ ಭಾಗದಲ್ಲಿರುವ ಸಾದಲಿ ಹೋಬಳಿ ತೀರಾ ಹಿಂದುಳಿದ ಪ್ರದೇಶವಾಗಿದ್ದು ಈ ಭಾಗದಲ್ಲಿ ಯಾವುದೇ ಕಾರ್ಖಾನೆ ಅಥವ ಫ್ಯಾಕ್ಟರಿ ಇಲ್ಲದೇ ಇರುವುದರಿಂದ ಉದ್ಯೋಗವಿಲ್ಲದೇ ಇಲ್ಲಿನ ಜನತೆ ಆರ್ಥಿಕವಾಗಿ ತೀರಾ ಹಿಂದುಳಿದಿದ್ದಾರೆ. ಹಾಗಾಗಿ ಈ ಭಾಗದಲ್ಲಿ ಪಶು ಆಹಾರ ಘಟಕ ಸ್ಥಾಪಿಸಬೇಕು ಎಂಬ ಉದ್ದೇಶದಿಂದ ಶಾಸಕರು ಸೇರಿದಂತೆ ನಾವೆಲ್ಲಾ ಪ್ರಯತ್ನ ಮಾಡಿ ಸುಮಾರು ೨೬ ಎಕರೆ ಜಮೀನು ಮಾಡಿಸಲಾಗಿದೆ. ಕೋಚಿಮುಲ್ ಅಧ್ಯಕ್ಷರು ಸೇರಿದಂತೆ ಒಕ್ಕೂಟದ ನಿರ್ದೇಶಕರು ಹಾಗು ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ತಾಲ್ಲೂಕಿನಲ್ಲಿಯೇ ಪಶು ಆಹಾರ ಘಟಕ ನಿರ್ಮಿಸಲು ಸಹಕಾರ ನೀಡಬೇಕು ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಜಿಲ್ಲೆಯಾದ್ಯಂತ ಅಂತರ್ಜಲ ಕುಸಿದು ಕುಡಿಯುವ ನೀರಿಗೂ ಪರಿತಪಿಸುವ ಸಮಯದಲ್ಲಿಯೂ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡಿದ ಕೀರ್ತಿ ಶಿಡ್ಲಘಟ್ಟಕ್ಕೆ ಸಲ್ಲುತ್ತದೆ. ಈ ಭಾಗದ ಹಾಲು ಉತ್ಪಾದಕರು ಹೈನುಗಾರಿಕೆಯನ್ನು ಮುಖ್ಯ ಕಸಬನ್ನಾಗಿ ಮಾಡಿಕೊಂಡು ಪ್ರತಿನಿತ್ಯ ಸುಮಾರು ೧ ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಿ ಒಕ್ಕೂಟಕ್ಕೆ ನೀಡುತ್ತಿದ್ದಾರೆ. ಹಾಗಾಗಿ ತಾಲ್ಲೂಕಿನಲ್ಲಿ ಈಗಾಗಲೇ ಮಂಜೂರಾಗಿರುವ ಸ್ಥಳದಲ್ಲಿ ಪಶು ಆಹಾರ ಘಟಕ ಸ್ಥಾಪಿಸಲು ಒಕ್ಕೂಟದ ಅಧ್ಯಕ್ಷರೂ ಸೇರಿದಂತೆ ಸದಸ್ಯರು ಮುಂದಾಗಬೇಕು ಎಂದರು.
ಕೋಚಿಮುಲ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಕೆ.ವಿ.ನಾಗರಾಜ್ ಮಾತನಾಡಿ, ಒಕ್ಕೂಟಕ್ಕೆ ಪ್ರತಿನಿತ್ಯ ಸುಮಾರು ೧೦ ಲಕ್ಷ ಲೀ ಹಾಲು ಸರಬರಾಜು ಆಗುತ್ತಿದೆ. ಇದರಲ್ಲಿ ಸುಮಾರು ೫ ಲಕ್ಷ ಲೀ ನಷ್ಟು ಹಾಲು ಹಾಗು ಹಾಲಿನಿಂದ ತಯಾರಿಸಲಾಗುವ ಇತರೆ ಉತ್ಪನ್ನಗಳಿಗೆ ಬಳಸಲಾಗುತ್ತಿದೆ. ಉಳಿದ ಸುಮಾರು ೫ ಲಕ್ಷ ಲೀ ಹಾಲನ್ನು ಖಾಸಗಿಯವರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುವುದರಿಂದ ಒಕ್ಕೂಟಕ್ಕೆ ನಷ್ಟ ವಾಗುತ್ತಿದೆ. ಒಕ್ಕೂಟಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ಚಿಕ್ಕಬಳ್ಳಾಪುರದಲ್ಲಿ ಮೆಗಾಡೈರಿ ನಿರ್ಮಾಣವಾಗುತ್ತಿದ್ದು ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು ಮುಂಬರುವ ಡಿಸೆಂಬರ್ ಒಳಗೆ ಕಾರ್ಯಾರಂಭ ಮಾಡಲಿದೆ. ಮೆಗಾಡೈರಿ ಪ್ರಾರಂಭವಾದರೆ ಇಲ್ಲಿ ಟೆಟ್ರಾ ಪ್ಯಾಕ್ ಮೂಲಕ ಸುಮಾರು ೧.೫ ಲಕ್ಷ ಲೀ ಹಾಲು ಸಂಸ್ಕರಿಸಿ ದೂರದ ಗಡಿ ಭಾಗಗಳಿಗೆ ರಫ್ತು ಮಾಡಲಾಗುತ್ತದೆ. ಉಳಿದ ಸುಮಾರು ೧.೫ ಲಕ್ಷ ಲೀ ಹಾಲನ್ನು ಮೂರು ಲೇಯರ್ ಗಳುಳ್ಳ ಫ್ಲೆಕ್ಸಿ ಪ್ಯಾಕ್ ಮೂಲಕ ದೂರದ ಊರುಗಳಿಗೆ ಸರಬರಾಜು ಮಾಡಲಾಗುತ್ತದೆ. ಹಾಲನ್ನು ಹಾಗೆ ಮಾರುವುದರಿಂದ ಲಾಭಾಂಶ ಕಡಿಮೆಯಾಗಿದ್ದು ಹಾಲಿನಿಂದ ವಿವಿಧ ರೀತಿಯ ಉತ್ಪನ್ನಗಳ ತಯಾರಿಕೆ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರಿಂದ ಒಕ್ಕೂಟಕ್ಕೆ ಆಗುವ ನಷ್ಟ ತಪ್ಪುವ ಜೊತೆಗೆ ಹಾಲು ಉತ್ಪಾದಕರಿಗೆ ಸಹಕಾರಿಯಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ಎ.ಹುಣಸೇನಹಳ್ಳಿ, ಎಲ್.ಮುತ್ತುಕದಹಳ್ಳಿ, ಗಂಭೀರನಹಳ್ಳಿ, ಹಿತ್ತಲಹಳ್ಳಿ, ವಾರಹುಣಸೇನಹಳ್ಳಿ, ದೊಗರನಾಯಕನಹಳ್ಳಿ, ಫಲಿಚೇರ್ಲು, ದೊಡ್ಡದಾಸೇನಹಳ್ಳಿ, ಕುಂದಲಗುರ್ಕಿ ಹಾಗು ಆನೆಮಡುಗು ಗ್ರಾಮದ ಹಾಳು ಉತ್ಪಾದಕರ ಸಹಕಾರ ಸಂಘಗಳಲ್ಲಿ ಬಿಎಂಸಿ ಘಟಕದ ಉದ್ಘಾಟನೆ ನೆರವೇರಿಸಿದ ನಾಮಫಲಕಗಳನ್ನು ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಸದಸ್ಯ ರಾಜಶೇಖರ್, ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಮ್ಮ, ಉಪಾಧ್ಯಕ್ಷ ಸುರೇಂದ್ರ, ಮುಖಂಡರಾದ ರಾಮಕೃಷ್ಣಪ್ಪ, ಹುಜುಗೂರು ರಾಮಯ್ಯ, ಬಿಎಂಸಿ ಉಪವ್ಯವಸ್ಥಾಪಕ ಎ.ಗೋಪಾಲ್ರಾವ್, ಕೋಚಿಮುಲ್ ಶಿಬಿರ ಘಟಕದ ಬಿ.ಎಸ್.ಹನುಮಂತರಾವ್, ತಾದೂರು ರಘು, ಮುಗಿಲಡಿಪಿ ನಂಜಪ್ಪ, ಶ್ರೀನಿವಾಸಗೌಡ, ಜೆ.ಎಂ.ವೆಂಕಟೇಶ್, ಟಿ.ಆರ್.ವಿಶ್ವನಾಥ್, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರು ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -