ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಚಿಲಕಲನೇರ್ಪು ಹೋಬಳಿಯ ಅಪ್ಪಸಾನಹಳ್ಳಿಯಲ್ಲಿ ವೃದ್ಧೆಯೊಬ್ಬರ ಅತಂತ್ರ ಜೀವನವು ಸಾಗಿದೆ.
ಸರ್ಕಾರದಿಂದ ಸಿಗುವ ಅನುದಾನದಲ್ಲಿ ಹೊಸ ಮನೆ ಕಟ್ಟಿಸಿಕೊಳ್ಳಲು ಮೂರು ವರ್ಷಗಳ ಹಿಂದೆ ಶಿಥಿಲವಾಗಿದ್ದ ಮನೆಯನ್ನು ಅಪ್ಪಸಾನಹಳ್ಳಿಯ ಷರುಫುನ್ನಿಸಾ ಕೆಡವಿಸಿದ್ದರು. ಮನೆಯ ಪಾಯ ಹಾಕಿಸಲು ಮಾತ್ರ ಸರ್ಕಾರದಿಂದ ಅನುದಾನ ದೊರಕಿದೆ. ಗೋಡೆಗಳನ್ನು ಸುಮಾರು 75 ಸಾವಿರ ರೂಗಳಿಗೂ ಹೆಚ್ಚು ಸಾಲ ಮಾಡಿ ಕಟ್ಟಿಸಿ ಇನ್ನು ಸಾಧ್ಯವಿಲ್ಲವೆಂದು ನಿಲ್ಲಿಸಿಬಿಟ್ಟಿದ್ದಾರೆ.
ಈ ವೃದ್ಧೆಯ ಅಡುಗೆ, ವಾಸ, ಸ್ನಾನ ಎಲ್ಲಕ್ಕೂ ಸೂರಿಲ್ಲದ ಮನೆಯಲ್ಲೇ ನಡೆಯಬೇಕಿದೆ. ಸ್ವಾಭಿಮಾನಿಯಾದ ಈಗೆ ಪಕ್ಕದ ಮನೆಯವರು ಕರೆದರೂ ಹೋಗುವುದಿಲ್ಲ. ಮಗಳು ಮತ್ತು ಅಳಿಯ ಆಸರೆಗೂ ಒಳಪಟ್ಟಿಲ್ಲ. ಕೇವಲ ಸರ್ಕಾರದ ಅನುದಾನಕ್ಕಾಗಿ ಆಕೆಯು ಕಾಯುತ್ತಿದ್ದಾರೆ.
‘ನನ್ನ ಜೀವನ ಕಷ್ಟಕರವಾಗಿದೆ. ಕೂಲಿ ಮಾಡಿ ಜೀವನ ನಡೆಸುವ ನನಗೆ ಚಳಿ, ಮಳೆ, ಗಾಳಿಯಲ್ಲಿ ವಾಸಿಸುವ ಪರಿಸ್ಥಿತಿ ಬಂದಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನನ್ನ ಮನೆಯ ಅನುದಾನವನ್ನು ಬಿಡುಗಡೆ ಮಾಡಿದರೆ ಮನೆ ಪೂರ್ಣ ಮಾಡಿಕೊಳ್ಳುವೆ’ ಎನ್ನುತ್ತಾರೆ ವೃದ್ಧೆ ಷರುಫುನ್ನಿಸಾ.
‘ಈಕೆ ಸ್ವಾಭಿಮಾನಿ. ಅಕ್ಕಪಕ್ಕದವರು, ನೆಂಟರು ಕರೆದರೂ ಹೋಗಿಲ್ಲ. ಇಲ್ಲೇ ಕಷ್ಟದಲ್ಲೇ ಬದುಕು ಸವೆಸುತ್ತಿದ್ದಾರೆ. ಸರ್ಕಾರದ ಅನುದಾನಗಳು ಸಮರ್ಪಕವಾಗಿ ಜಾರಿಗೊಳ್ಳದಿರುವುದು ಈ ಸೂರಿಲ್ಲದ ಬದುಕಿಗೆ ಸಾಕ್ಷಿಯಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ವೃದ್ಧೆಯ ಬದುಕಿಗೆ ಸೂರು ಒದಗಿಸಲಿ’ ಎಂದು ನೆರೆಯ ವಾಸಿ ಬಾಬುರೆಡ್ಡಿ ತಿಳಿಸಿದರು.
- Advertisement -
- Advertisement -
- Advertisement -
- Advertisement -