ಪಂಜಾಬ್, ಹರಿಯಾಣ, ದೆಹಲಿಯಲ್ಲಿ ಮಾತ್ರ ಕೋವಿಡ್ 19 ಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದ ಸ್ಮೈಲ್ ಫೌಂಡೇಶನ್ ಸಂಸ್ಥೆ ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಗೆ ಸುಮಾರು 8 ಲಕ್ಷ ಮೌಲ್ಯದ 20 ಟನ್ ದವಸ ಧಾನ್ಯಗಳನ್ನು ಭಾನುವಾರ ಕಳುಹಿಸಿಕೊಟ್ಟಿದೆ ಎಂದು ಭಕ್ತರಹಳ್ಳಿಯ ಬಿಎಂವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ತಿಳಿಸಿದ್ದಾರೆ.
ಕಳೆದ ಒಂದುವರೆ ತಿಂಗಳಿನಿಂದ ಕೊರೊನಾ ವೈರಸ್ ನ ಹಾವಳಿಯಿಂದಾಗಿ ಇಡೀ ದೇಶದಾದ್ಯಂತ ಲಾಕ್ ಡೌನ್ ಘೋಷಣೆಯಾಗಿ ಬಡವರು ಅದರಲ್ಲೂ ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ವಿಶೇಷವಾಗಿ ಎಲ್ಲ ರೀತಿಯ ಅಸಂಘಟಿತ ಕಾರ್ಮಿಕರ ಬದುಕು ಹೀನಾಯವಾಗಿಬಿಟ್ಟಿದೆ. ಕೆಲಸ ಇಲ್ಲ, ಕೂಲಿ ಇಲ್ಲ, ಹೊಟ್ಟೆಗೆ ಅನ್ನ ಇಲ್ಲದೆ ದಿಕ್ಕೇ ತೋಚದಾಗಿದೆ. ಬರೇ ನಗರಪ್ರದೇಶದ ಈ ವರ್ಗದ ಜನರಿಗೆ ಕೆಲವು ದಾನಿಗಳು ಸಹಾಯ ಮಾಡುತ್ತಿರುವುದು ಬಿಟ್ಟರೆ ಗ್ರಾಮೀಣ ಪ್ರದೇಶಗಳಲ್ಲಿನ ಲಾಕ್ ಡೌನ್ ಸಂತ್ರಸ್ತರ ಸಂಕಷ್ಟಕ್ಕೆ ಅಷ್ಟು ಹೆಚ್ಚಿನ ಸಹಾಯ ಸಿಗುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಭಕ್ತರಹಳ್ಳಿ, ಕಾಕಚೋಕ್ಕೊಂಡಹಳ್ಳಿ, ತೊಟ್ಲಗಾನಹಳ್ಳಿ, ಬೆಳ್ಳೂಟಿ, ಬಸವಾಪಟ್ಟಣಗಳಿಂದ ನಮ್ಮ ಶಾಲೆಗೆ ಬರುವ ವಿದ್ಯಾರ್ಥಿಗಳ ಬಡ ತಂದೆ ತಾಯಿಯರ ಬವಣೆ ಕೇಳಿ ನನ್ನ ಮನಸ್ಸಿಗೆ ನೋವಾಯಿತು. ಕೊರೊನಾ ವಾರಿಯರ್ ಆಗಿ ಲಾಕ್ ಡೌನ್ ಆದಂದಿನಿಂದ ಸಂತ್ರಸ್ತರಿಗೆ ನೆರವು ಕಲ್ಪಿಸುವಲ್ಲಿ ಬೆಂಗಳೂರಿನಲ್ಲಿ ಸಕ್ರಿಯಾಗಿದ್ದ ನನಗೆ ನಮ್ಮೂರು ಮತ್ತು ನಮ್ಮ ಶಾಲೆಯ ಬಡ ಪೋಷಕರಿಗೆ ಸಹಾಯ ಹಸ್ತ ನೀಡಬೇಕೆಂದು ನಿರ್ಧರಿಸಿ ಸ್ಮೈಲ್ ಫೌಂಡೇಶನ್ ಮತ್ತು ಇನ್ನಿತರ ಕೆಲವು ಸ್ವಯಂ ಸೇವಾ ಸಂಸ್ಥೆಗಳಿಗೆ ಸಹಾಯಕ್ಕಾಗಿ ಬರೆದೆ. ನನ್ನ ಅವರೊಂದಿಗಿನ 10 ವರ್ಷಗಳ ಸಂಬಂಧದಿಂದಾಗಿ ಸ್ಮೈಲ್ ಫೌಂಡೇಶನ್ ಅವರು ನನಗೆ ಸಹಾಯ ಮಾಡಲು ಮುಂದೆ ಬಂದರು.
ಪಂಜಾಬ್, ಹರಿಯಾಣ, ದೆಹಲಿ ಯಲ್ಲಿ ಮಾತ್ರ ಕೊರೊನಾ ಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದ ಈ ಸಂಸ್ಥೆ ನನ್ನ ಬೇಡಿಕೆಯನ್ನು ಮನ್ನಿಸಿ ದಕ್ಷಿಣ ಭಾರತದ ಭಕ್ತರಹಳ್ಳಿಗೆ ಸುಮಾರು 8 ಲಕ್ಷ ಮೌಲ್ಯದ 20 ಟನ್ ದವಸ ದಾನ್ಯಗಳನ್ನು ಕಳುಹಿಸಿದ್ದಾರೆ. ಅವೆಲ್ಲವನ್ನು 500 ಕಿಟ್ ಗಳನ್ನಾಗಿ ನಮ್ಮ ಶಾಲೆಯ ಶಿಕ್ಷಕರು ಸಿದ್ದಪಡಿಸಿದ್ದು ಬುಧವಾರದಿಂದ ಕೋವಿಡ್ 19 ನಿಯಮಗಳನ್ನು ಪಾಲಿಸುವುದರೊಂದಿಗೆ ವಿತರಿಸಲಾಗುವುದು. ಅರ್ಹ ಫಲಾನುಭವಿಗಳ ಪಟ್ಟಿಯನ್ನು ಈಗಾಗಲೇ ತಯಾರಿಸಲಾಗಿದೆ ಎಂದು ಅವರು ವಿವರಿಸಿದರು.