ನಗರದ ನೆಹರೂ ಕ್ರೀಡಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಗೌರವ ವಂದನೆ ಸ್ವೀಕರಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮ ಪಾಲನ್ನು ನೀಡಿದಾಗ ಮಾತ್ರ ಸ್ವಾತಂತ್ರ್ಯೋತ್ಸವಕ್ಕೆ ಅರ್ಥ ಬರುತ್ತದೆ ಎಂದು ಅವರು ತಿಳಿಸಿದರು.
ಬ್ರಿಟೀಷರಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿರಬಹುದು. ಕೃಷಿಕ ವರ್ಗದ ಘನತೆ ಹೆಚ್ಚಿದಾಗ, ಸೈನಿಕರಿಗೆ ಸೂಕ್ತ ಗೌರವ ಸಿಕ್ಕಾಗ, ಪ್ರತಿಯೊಬ್ಬ ಮಗುವಿಗೆ ಶಿಕ್ಷಣ ಸಿಕ್ಕಾಗ, ಪ್ರತಿಯೊಬ್ಬ ಪ್ರತಿಭಾವಂತರಿಗೆ ಸರಿಯಾದ ಅವಕಾಶ ಸಿಕ್ಕಿದಾಗ ಅದು ನಿಜವಾದ ಸ್ವಾತಂತ್ಯ. ಶಿಕ್ಷಣದಿಂದ ವಂಚಿತರಾಗಿರುವವರು ಬಹಳಷ್ಟು ಮಂದಿ ಇನ್ನೂ ನಮ್ಮ ದೇಶದಲ್ಲಿ ಇದ್ದಾರೆ. ಅಂಥವರಿಗೆ ಸೂಕ್ತ ಶಿಕ್ಷಣ ಮತ್ತು ಅವಕಾಶಗಳು ಸಿಗಬೇಕಾಗಿದೆ. ಪ್ರತಿಭಾವಂತರ ದೇಶ ಬಿಟ್ಟು ಹೋಗದ ವ್ಯವಸ್ಥೆಯನ್ನು ರೂಪಿಸಬೇಕಿದೆ ಎಂದರು.
ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿ, ಹಲವು ಮಹನಿಯರ ಬಲಿತ್ಯಾಗದಿಂದ ದೇಶ ಸ್ವಾತಂತ್ರ್ಯವಾಗಿದೆ. ಯುವಜನರು ದೇಶ ಕಟ್ಟುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಬೇಕು. ಜಾತಿ ಭೇದ ಮರೆತು ಭಾರತೀಯತೆಯನ್ನು ಮೆರೆಯಬೇಕು ಎಂದರು.
ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಪೊಲೀಸರಿಂದ ಪಥಸಂಚಲನೆ ಮತ್ತು ಧ್ವಜವಂದನೆಯನ್ನು ಸ್ವೀಕರಿಸಿದ ನಂತರ ಶಾಸಕ ವಿ.ಮುನಿಯಪ್ಪ ಮತ್ತು ತಹಶೀಲ್ದಾರ್ ಎಂ.ದಯಾನಂದ್ ಅವರಿಗೆ ತಂಡಗಳ ಪರಿಚಯವನ್ನು ಮಾಡಿಕೊಡಲಾಯಿತು.
೨೦೧೮–೧೯ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ತಾಲ್ಲೂಕಿಗೆ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಕೆ.ಸಹನಾ, ಪಿ.ಸುಕನ್ಯಾ, ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲೆಯ ಎನ್.ಚಂದನಾ ಅವರಿಗೆ ಶಿಕ್ಷಣ ಇಲಾಖೆಯಿಂದ ಲ್ಯಾಪ್‌ಟಾಪ್ ನೀಡಲಾಯಿತು. ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಮತ್ತು ಫುಟ್ ಬಾಲ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಟ್ರೋಫಿ ನೀಡಲಾಯಿತು.
ನಗರದ ಸರಸ್ವತಿ ಕಾನ್ವೆಂಟ್, ಕ್ರೆಸೆಂಟ್ ಶಾಲೆ, ಸರ್ಕಾರಿ ಪ್ರೌಢ ಶಾಲೆ ಮತ್ತು ಡಾಲ್ಫಿನ್ ಶಾಲೆಯ ವಿದ್ಯಾರ್ಥಿಗಳು ದೇಶ ಪ್ರೇಮವನ್ನು ಪ್ರದರ್ಶಿಸುವ ನೃತ್ಯ ರೂಪಕಗಳನ್ನು ನಡೆಸಿಕೊಟ್ಟರು. ಸ್ವಾತಂತ್ರ್ಯ ಹೋರಾಟಗಾರರ, ಯೋಧರ, ಪ್ರಾಣಿ ಪಕ್ಷಿಗಳ ವೈವಿಧ್ಯಮಯ ವೇಷಭೂಷಣಗಳನ್ನು ಧರಿಸಿದ್ದ ಮಕ್ಕಳ ನೃತ್ಯ ರೂಪಕಗಳು ಜನರ ಮೆಚ್ಚುಗೆಗೆ ಪಾತ್ರವಾದವು. ಬ್ರಹ್ಮಕುಮಾರಿ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರಿಗೆ ರಾಖಿ ಕಟ್ಟಿದರು. ಜಲಸಂರಕ್ಷಣೆ ಕುರಿತಂತೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಭೋದಿಸಲಾಯಿತು.
ತಾಲ್ಲೂಕು ಆಡಳಿತದಿಂದ ನೆರೆ ಪರಿಹಾರಕ್ಕೆ ದೇಣಿಗೆ ಸಂಗ್ರಹಣೆಯನ್ನು ಶಾಸಕರಿಂದ ಮೊದಲುಗೊಂಡು ಪ್ರಾರಂಭಿಸಲಾಯಿತು. ಕಾರ್ಯಕ್ರಮದ ನಂತರ ತಹಶೀಲ್ದಾರ್ ಮತ್ತು ಇಒ ನೇತೃತ್ವದಲ್ಲಿ ಅಧಿಕಾರಿಗಳು ನಗರದಲ್ಲಿ ದೇಣಿಗೆ ಸಂಗ್ರಹಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಪೌರಾಯುಕ್ತ ಚಲಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್, ಕೋಚಿಮುಲ್ ನಿರ್ದೇಶಕ ಶ್ರೀನಿವಾಸ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ಎ.ಪಿ.ಎಂ.ಸಿ ಉಪಾಧ್ಯಕ್ಷ ವೆಂಕಟೇಶ್, ನಗರ ಸಭೆ ಸದಸ್ಯರು, ರೈತ ಮುಖಂಡರು, ಶಿಕ್ಷಕರು ಹಾಜರಿದ್ದರು.
- Advertisement -
- Advertisement -
- Advertisement -