ಸ್ವಿಜರ್ಲೆಂಡ್ ದೇಶದಲ್ಲಿ ರೇಷ್ಮೆ ಬೆಳೆಯನ್ನು ಬೆಳೆಯಲು ಉದ್ದೇಶಿಸಿ ಒಂದು ವರ್ಷದ ಹಿಂದೆ ಶಿಡ್ಲಘಟ್ಟಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದೆ. ಇನ್ನಷ್ಟು ಮಾಹಿತಿಯನ್ನು ಪಡೆಯಲು ವಿವಿಧ ಕ್ಷೇತ್ರಗಳ ತಜ್ಞರನ್ನು ಈ ಬಾರಿ ಕರೆದುಕೊಂಡು ಬಂದಿದ್ದೇನೆ. ಭಾರತದ ಕೇಂದ್ರೀಯ ರೇಷ್ಮೆ ಮಂಡಳಿಯ ಸಹಕಾರ ಪಡೆದು ರೇಷ್ಮೆಯ ವಿವಿಧ ಹಂತಗಳ ಅಧ್ಯಯನವನ್ನು ಕೈಗೊಂಡಿರುವುದಾಗಿ ಸ್ವಿಜರ್ಲೆಂಡ್ನ ಜಾನುವಾರುಗಳ ಅಭಿವೃದ್ಧಿ ಸಂಸ್ಥೆಯ ಸಲಹೆಗಾರ ಫ್ರಿಟ್ಜ್ ಶ್ನೀಡರ್ ತಿಳಿಸಿದರು.
ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಕೆ.ಸುರೇಶ್ ಅವರ ಚಾಕಿ ಕೇಂದ್ರಕ್ಕೆ ಮಂಗಳವಾರ ತಮ್ಮ ತಂಡದೊಡನೆ ಭೇಟಿ ನೀಡಿದ್ದ ಅವರು ಮಾತನಾಡಿದರು.
ಸ್ವಿಜರ್ಲೆಂಡ್ ದೇಶದಲ್ಲಿ ಈಗಾಗಲೇ ಸ್ವಲ್ಪಮಟ್ಟಿಗಿನ ರೇಷ್ಮೆ ಉತ್ಪಾದನೆಯಿದ್ದು, ಭಾರತದ ಸಹಕಾರದೊಂದಿಗೆ ಅದನ್ನು ಅಭಿವೃದ್ಧಿಗೊಳಿಸುವ ಯೋಜನೆಯಿದೆ. ಹೈನುಗಾರಿಕೆ, ನೀರಿನ ಸದ್ಭಳಕೆಯ ಬಗ್ಗೆಯೂ ಅಧ್ಯಯನ ನಡೆಸುತ್ತಿದ್ದೇವೆ. ಜಿಕೆವಿಕೆಯ ರೇಷ್ಮೆ ವಿಭಾಗದ ಪ್ರೊ.ಚಂದ್ರಶೇಖರ್ ಗೌಡ ಅವರೊಂದಿಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ರೇಷ್ಮೆಯ ಬೆಳೆಯುವ ಬಗ್ಗೆ ಕ್ಷೇತ್ರದರ್ಶನ ಮಾಡಿ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಇಂಡೋ ಸ್ವಿಜ್ ಜಂಟಿಯಾಗಿ ರೇಷ್ಮೆ ಬೆಳೆಯುವ ಕೆಲಸವನ್ನು ಸ್ವಿಜರ್ಲೆಂಡ್ ದೇಶದಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳುವ ಉದ್ದೇಶವಿದೆ. ಸ್ವಿಜರ್ಲೆಂಡ್ನಲ್ಲಿ –10 ರಿಂದ 30 ಡಿಗ್ರಿಯವರೆಗೆ ತಾಪಮಾನ ವೈಪರೀತ್ಯವಿದೆ. ಆ ದೃಷ್ಟಿಯಿಂದಲೂ ಅಧ್ಯಯನ ಮಾಡುತ್ತಿದ್ದೇವೆ. ಭಾರತದ ತಮಿಳುನಾಡು, ಕೇರಳ , ಆಂದ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಕೇಂದ್ರೀಯ ರೇಷ್ಮೆ ಮಂಡಳಿಯ ಸಹಕಾರ ಪಡೆದು ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ವಿವರಿಸಿದರು.
ಜಿಕೆವಿಕೆಯ ರೇಷ್ಮೆ ವಿಭಾಗದ ಪ್ರೊ.ಚಂದ್ರಶೇಖರ್ ಗೌಡ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕು ರೇಷ್ಮೆ ಮತ್ತು ಹೈನುಗಾರಿಕೆಗೆ ಪ್ರಸಿದ್ಧಿ. ಹಾಗಾಗಿ ಅಧ್ಯಯನಶೀಲರಿಗೆ ಅನುಕೂಲಕರ. ರೇಷ್ಮೆಯ ವಿವಿಧ ಹಂತಗಳು, ಮಾರುಕಟ್ಟೆಯ ಸ್ಥಿತಿಗತಿ, ಅದರ ಉತ್ಪನ್ನಗಳು, ಬಳಕೆ ಎಲ್ಲವನ್ನೂ ಸ್ವಿಜರ್ಲೆಂಡ್ ದೇಶದಿಂದ ಬಂದ 18 ಮಂದಿ ತಜ್ಞರಿಗೆ ವಿವರುತ್ತಿದ್ದೇವೆ. ನೀರಿನ ಸದುಪಯೋಗ ಹಾಗೂ ಕಾಫಿಯ ಕುರಿತಂತೆಯೂ ಅವರು ಅಧ್ಯಯನ ನಡೆಸುತ್ತಿದ್ದಾರೆ ಎಂದರು.
ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಕೆ.ಸುರೇಶ್ ಅವರ ಚಾಕಿ ಕೇಂದ್ರ, ಹಿಪ್ಪುನೇರಳೆ ತೋಟ, ರೇಷ್ಮೆ ಹುಳು ಸಾಕಾಣಿಕಾ ಮನೆ, ಹಿತ್ತಲಹಳ್ಳಿ ಜಿ.ಗೋಪಾಲಕೃಷ್ಣ ಅವರ ರೇಷ್ಮೆ ಹುಳು ಸಾಕಾಣಿಕಾ ಮನೆ, ರೇಷ್ಮೆ ಗೂಡಿನ ಮಾರುಕಟ್ಟೆ, ದ್ಯಾವಪ್ಪನಗುಡಿ ಬಳಿಯ ಸಯದ್ ಆಜಮ್ ಅವರ ಸ್ವಯಂಚಾಲಿತ ರೀಲಿಂಗ್ ಕೇಂದ್ರವನ್ನು ವೀಕ್ಷಿಸಿ ವಿವರಗಳನ್ನು ಪಡೆದರು.
ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಬೋಜಣ್ಣ, ನಿವೃತ್ತ ಸಹಾಯಕ ನಿರ್ದೇಶಕ ಜನಾರ್ಧನಮೂರ್ತಿ, ಎಚ್.ಎಂ.ಕೃಷ್ಣಪ್ಪ, ಕಂಬದಹಳ್ಳಿ ನಾರಾಯಣರೆಡ್ಡಿ, ಜೆ.ಕೃಷ್ಣಪ್ಪ, ಬೋದಗೂರು ವೆಂಕಟಸ್ವಾಮಿರೆಡ್ಡಿ, ನ್ಯೂಗ್ರೀನ್ ಕಂಪೆನಿಯ ಅಜಯ್ಮೆಹ್ತ ಹಾಜರಿದ್ದರು.
ಹಿಸುಕಿದ ಅವರೆ ಬೇಳೆ ಸಾರಿಗೆ ಮನಸೋತರು: ಸ್ವಿಜರ್ಲೆಂಡ್ನ ಫ್ರಿಟ್ಜ್ ಶ್ನೀಡರ್ ತಂಡದ ಸದಸ್ಯರಿಗೆಂದು ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಕೆ.ಸುರೇಶ್ ದೇಶೀ ಶೈಲಿಯ ಖಾದ್ಯ ಮಾಡಿಸಿದ್ದರು. ಚಪಾತಿ, ಹಿಸುಕಿದ ಅವರೆ ಬೇಳೆ ಸಾರು, ಪಲಾವ್, ಅನ್ನ, ಮೊಸರುಬಜ್ಜಿ, ತಿಳಿಸಾರು, ಬೇಯಿಸಿದ ಮೊಟ್ಟೆಯನ್ನು ತಿಂದು ಅವುಗಳ ರುಚಿಗೆ ಮನಸೋತರು. ಅಡುಗೆ ಮಾಡಿದವರನ್ನು ಕರೆಸಿ ಎಂದು ಒತ್ತಾಯಿಸಿ ಕರೆಸಿ ಅವರನ್ನು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಹಿಸುಕಿದ ಅವರೆ ಬೇಳೆ ಸಾರಿನ ಬಗ್ಗೆ ಅದರ ತಯಾರಿಕೆಯ ಬಗ್ಗೆಯೂ ಮಾಹಿತಿ ಕೇಳಿ ಪಡೆದರು.
- Advertisement -
- Advertisement -
- Advertisement -