ದೈಹಿಕ ಮತ್ತು ಮಾನಸಿಕ ಸಮನ್ವಯತೆಗಾಗಿ ಯೋಗ ಅತ್ಯವಶ್ಯಕವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತುಮಕೂರು ವಿಭಾಗದ ಶಾರೀರಕ್ ಪ್ರಮುಖ್ ಮು.ವೆಂಕಟೇಶ್ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಯೋಗ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕಷ್ಟಗಳಿಗಿಂತ ಹೆಚ್ಚಾಗಿ ಸುಖವನ್ನೆ ಬಯಸುತ್ತಾರೆ. ಈ ನಿಟ್ಟಿನಲ್ಲಿ ಸುಖವಾಗಿರಬೇಕಾದರೆ ಹಣ, ಆಸ್ತಿ, ಅಂತಸ್ತುಗಳ ಮೇಲೆ ಹೆಚ್ಚು ವ್ಯಾಮೋಹ ಬೆಳೆಸಿಕೊಂಡು ಹಣ ಆಸ್ತಿಯನ್ನು ಸಂಪಾದಿಸುತ್ತಾರೆ. ಉತ್ತಮ ಆರೋಗ್ಯ ಹಾಗು ನೆಮ್ಮದಿಯ ಜೀವನ ನಡೆಸಲು ತಾವು ಗಳಿಸಿದ ಅಷ್ಟೂ ಹಣ, ಆಸ್ತಿ ಖರ್ಚು ಮಾಡುತ್ತಾರೆ. ಇದರಿಂದ ಶಾರೀರಕ ಹಾಗು ಮಾನಸಿಕ ನೆಮ್ಮದಿ ಸಿಗದೇ ಪರಿತಪಿಸುತ್ತಾರೆ.
ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಆಹಾರ ಪದ್ದತಿಯಿಂದಾಗಿ ಈಚೆಗೆ ವಿವಿಧ ರೀತಿಯ ಖಾಯಿಲೆಗಳು ಬರುತ್ತಿದ್ದು ಇವುಗಳನ್ನು ತಡೆಗಟ್ಟಲು ಯೋಗ ಸಹಕಾರಿಯಾಗಲಿದೆ ಎಂದರು.
ಯೋಗ ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಹುಟ್ಟಿ ಬೆಳೆದದ್ದು ಇದೀಗ ಇಡೀ ವಿಶ್ವವೆಲ್ಲಾ ಅದನ್ನೊಪ್ಪಿಕೊಂಡು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುತ್ತಿದೆ. ಇಡೀ ವಿಶ್ವಕ್ಕೆ ನೆಮ್ಮದಿ ಬೇಕು ಎನಿಸುತ್ತದೆ. ಹಾಗಾಗಿ ಯುವಪೀಳಿಗೆ ಮುಂದಿನ ದಿನಗಳಲ್ಲಿ ಆರೋಗ್ಯವಂತ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಯೋಗವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಯೋಗವನ್ನು ಮಾಡುವುದರಿಂದ ದೈಹಿಕವಾಗಿ ಸಮತೋಲನ ಕಾಪಾಡಿಕೊಳ್ಳುವುದರ ಜೊತೆಗೆ, ಮಾನಸಿಕವಾಗಿ ನೆಮ್ಮದಿಯನ್ನು ಕಾಣಲು ಸಾಧ್ಯವಾಗುತ್ತದೆ, ಕ್ರೀಯಾಶೀಲತೆ ಹಾಗೂ ದಿನನಿತ್ಯ ಚಟುವಟಿಕೆಯಿಂದ ಇರಲು ಯೋಗ ಸಹಕಾರಿಯಾಗಿರುತ್ತದೆ, ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಯೋಗವನ್ನು ಒಂದು ಹವ್ಯಾಸವನ್ನಾಗಿ ಮಾಡಿಕೊಳ್ಳಬೇಕು ಎಂದರು.
ಯೋಗ ಕಾರ್ಯಕ್ರಮದಲ್ಲಿ ಸುಮಾರು ೨೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಯೋಗ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ತಾರಾಸನ, ಅರ್ಧಚಂದ್ರಾಸನ, ಪದ್ಮಾಸನ, ಅರ್ಧಕಟಿ ಚಕ್ರಾಸನ, ಸೇರಿದಂತೆ ವಿವಿಧ ಆಸನಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಮು.ವೆಂಕಟೇಶ್ ಮಕ್ಕಳಿಗೆ ಯೋಗಾಭ್ಯಾಸ ಮಾಡಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ಸಿ.ವೆಂಕಟಶಿವಾರೆಡ್ಡಿ, ಪ್ರೌಢಶಾಲೆಯ ಮುಖ್ಯಶಿಕ್ಷಕಿ ಮಂಜುಳಾ, ಒಕ್ಕಲಿಗ ಯುವಸೇನೆ ತಾಲ್ಲೂಕು ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್, ಒಕ್ಕಲಿಗ ಯುವಸೇನೆ ನಗರಾಧ್ಯಕ್ಷ ಪುರುಷೋತ್ತಮ್ಬಾಬು, ಪ್ರಾಧ್ಯಾಪಕರಾದ ಎಚ್.ಸಿ.ಮುನಿರಾಜು, ಲೋಕೇಶ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಯೋಗೀಶ್, ಅಬ್ದುಲ್ ಅಲೀಂ, ಶಿವಾರೆಡ್ಡಿ, ಲಕ್ಷ್ಮಯ್ಯ, ಕೆ.ಅಶ್ವಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -