ತಾಲ್ಲೂಕಿನ ಕುರುಚಲು ಕಾಡುಗಳಲ್ಲಿ ಬೆಳೆಯುವ ಕುರುಟಿಹಣ್ಣುಗಳು ನಗರಕ್ಕೆ ಗ್ರಾಮೀಣರು ಮಕ್ಕರಿಗಳಲ್ಲಿ ತಂದು ಮಾರಾಟ ಮಾಡುತ್ತಿದ್ದಾರೆ.
ಕಾಡುಹಣ್ಣುಗಳು ಒಂದೊಂದು ಒಂದು ಋತುವಿನಲ್ಲಿ ಕಂಡುಬರುತ್ತವೆ. ಇತ್ತೀಚೆಗೆ ಅವು ಕಡಿಮೆಯೂ ಆಗಿವೆ. ಅವುಗಳನ್ನು ತಂದು ಮಾರುವವರೂ ವಿರಳವಾಗಿದ್ದಾರೆ. ಆದರೂ ಆಗಾಗ ಕೆಲ ಶಾಲೆಗಳ ಬಳಿ ಈ ಹಣ್ಣಿನ ಮಾರಾಟ ಕಂಡುಬರುತ್ತವೆ.
ಕುರುಟಿಹಣ್ಣು ಅನೇಕರಿಗೆ ಹಳೆಯ ನೆನಪುಗಳನ್ನು ಮರುಕಳಿಸುವ ಹಣ್ಣುಗಳಲ್ಲಿ ಒಂದು. ಸಂಶೋಧಿತವಾಗಿ ಇದರ ಗುಣಾವಗುಣಗಳನ್ನು ಯಾರೂ ಮಾಡಿಲ್ಲ. ಆದರೆ ಇದು ತನ್ನ ಬಣ್ಣ ಮತ್ತು ರುಚಿಯಿಂದ ಜನಪ್ರಿಯವಾಗಿದೆ. ಮಕ್ಕರಿಗಳಲ್ಲಿ ಇಟ್ಟುಕೊಂಡು ಮಾರುವವರು ಬಿಸಿಲಿಗೆ ಹಣ್ಣು ಬಾಡದಂತೆ ಹಳೆಯ ಬಟ್ಟೆ ತುಂಡನ್ನು ಮುಚ್ಚಿರುತ್ತಾರೆ. ಬಟ್ಟೆ ಮತ್ತು ಮಕ್ಕರಿಯನ್ನು ನೋಡಿದ ಕೂಡಲೇ ಅದು ಕುರುಟಿಹಣ್ಣಿನದೆಂದು ತಟ್ಟನೆ ಹೊಳೆದುಬಿಡುತ್ತದೆ. ಇದನ್ನು ಮಾರಲು ಬೇರೆ ವಸ್ತುಗಳನ್ನು ಕೂಗಿದಂತೆ ‘ಕುರುಟಿಹಣ್ಣು, ಕುರುಟಿಹಣ್ಣು’ ಎಂದು ಕೂಗಬೇಕಿಲ್ಲ.
ಕುರುಟಿಹಣ್ಣು ಕಾಡು ಮತ್ತು ಬೇಲಿಗಳ ಆಶ್ರಯದಲ್ಲಿ ಬೆಳೆಯುತ್ತದೆ. ಆಸರೆಯಿಲ್ಲದಿದ್ದರೆ ಪೊದೆ ಕಟ್ಟಿಕೊಳ್ಳುತ್ತದೆ. ಯಾವುದಾದರೂ ಮರದ ಆಸರೆ ಸಿಕ್ಕಿದರೆ ಮಲ್ಲಿಗೆಯ ಬಳ್ಳಿಯಂತೆ ಹಬ್ಬಿ ಸುಮಾರು 20 ಅಡಿಯವರೆಗೂ ಬೆಳೆಯುತ್ತದೆ.
ಇದರ ಮುಳ್ಳುಗಳು ಅತ್ಯಂತ ಗಟ್ಟಿಯಾಗಿದ್ದು, ತುದಿ ಚೂಪಾಗಿ ಬಾಗಿರುತ್ತದೆ. ಹಣ್ಣು ಬಿಡಿಸುವಾಗಲಿ ಅಥವಾ ಎಚ್ಚರಿಕೆಯಿಲ್ಲದೆ ಪೊದೆಯನ್ನು ದಾಟಿಹೋದಾಗ ಅದು ತೊಟ್ಟ ಬಟ್ಟೆ ಮತ್ತು ಮೈಚರ್ಮವನ್ನು ಸೀಳುವಷ್ಟು ಮೊನಚಾಗಿರುತ್ತದೆ. ಇದರ ರಕ್ಷಣೆಯೇ ಮುಳ್ಳು. ಇದರ ಎಲೆಗಳನ್ನು ಮೇಕೆ ಮಾತ್ರ ಅತಿ ಎಚ್ಚರಿಕೆಯಿಂದ ತಿನ್ನುತ್ತದೆ. ಮತ್ತಾವ ಪ್ರಾಣಿಯೂ ಈ ಗಿಡಕ್ಕೆ ಮೂತಿ ಇಕ್ಕುವುದಿಲ್ಲ. ಹಾಗಾಗಿ ಇದು ಸ್ವಯಂ ರಕ್ಷಕ ಸಸ್ಯ. ಇದು ಸೀಗೆ ಪೊದೆಗಿಂತ ಅಪಾಯಕಾರಿ. ಕತ್ತಾಳೆ, ನಾಗದಾಳಿ ಮುಂತಾದ ಸಸ್ಯಗಳಂತೆ ಇದು ನೀರಿರದೆಯೂ ಬೆಳೆಯುತ್ತದೆ. ಬೇಸಿಗೆಯಲ್ಲಿ ಒಣಗುವುದಿಲ್ಲ. ಎಲೆಗಳನ್ನು ಉದುರಿಸಿಕೊಳ್ಳುತ್ತದೆ.
ಸಣ್ಣ ಅಕ್ಕಿನುಚ್ಚಿನಂತೆ ಹೂಬಿಟ್ಟುಕೊಳ್ಳುವ ಇದರ ಹೀಚು ಮತ್ತು ಕಾಯಿ ಹಸಿರಾಗಿದ್ದು ದೋರೆಯು ಕಂದು ಮಿಶ್ರಿತ ಕೆಂಪಗಿರುತ್ತದೆ. ಪಕ್ವವಾದ ಹಣ್ಣು ನೇರಳೆಯಷ್ಟೆ ಕಡುಕಪ್ಪು. ಒಳಗಿನ ಬೀಜ ಎರಡು ಹೋಳುಗಳನ್ನು ಕೂಡಿಸಿದಂತೆ ಇರುತ್ತದೆ. ಹಣ್ಣು ಹೆಚ್ಚು ಒಗರು ಮತ್ತು ಕಡಿಮೆ ಸಕ್ಕರೆ ಅಂಶವನ್ನು ಹೊಂದಿರುತ್ತದೆ.
ಹಳ್ಳಿ ಮಕ್ಕಳಿಗೆ ಕುರುಟಿಹಣ್ಣು ಸಂಗ್ರಹಿಸುವುದೆಂದರೆ ಸವಾಲು ಮತ್ತು ಮೋಜು. ಹೆಣ್ಣು ಮಕ್ಕಳಿಗೆ ಇದು ಹುಣಿಸೆಕಾಯಿಯಷ್ಟೆ ಪ್ರಿಯ. ಹಲವರು ಅದರಲ್ಲೂ ವಯಸ್ಸಾಗಿ ಕೂಲಿ ಕೆಲಸ ಮಾಡುವ ಹೆಂಗಸರು ಇದನ್ನು ಸಂಗ್ರಹಿಸಿ ಶಾಲೆಗಳ ಮುಂಭಾಗದಲ್ಲಿ ಮತ್ತಿತರೆ ಜನಸಂಚಾರವಿರುವ ಜಾಗಗಳಲ್ಲಿ ಮಕ್ಕರಿಯೊಂದಿಗೆ ಕುಳಿತಿರುತ್ತಾರೆ. ಕೆಲವರ ಅನುಭವದಂತೆ ಇದರಲ್ಲಿ ಕಬ್ಬಿಣದ ಅಂಶ ಇದೆ. ಹಾಗೆಯೇ ಇದು ಹಿತಕಾರಿ ಹಣ್ಣುಗಳಲ್ಲಿ ಒಂದಾಗಿದೆ. ಇವತ್ತಿಗೂ ಇದು ತನ್ನದೇ ಆದ ಗ್ರಾಹಕವರ್ಗವನ್ನು ಉಳಿಸಿಕೊಂಡಿರುವುದು ವಿಶೇಷ.
- Advertisement -
- Advertisement -
- Advertisement -