23.1 C
Sidlaghatta
Monday, October 27, 2025

ಹಿತ್ತಲಹಳ್ಳಿಯಲ್ಲಿ ಮಳೆರಾಯನ ಪೂಜೆ

- Advertisement -
- Advertisement -

ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಮದುವೆಯೊಂದು ನಡೆಯಿತು. ವಧು ವರರ ವಯಸ್ಸು 8 ಮತ್ತು 10 ವರ್ಷ, ಅವರ ಹೆಸರು ನಿರ್ಮಲ ಮತ್ತು ಪ್ರೇಮ. ಹಾಗೆಂದು ಇದು ಬಾಲ್ಯ ವಿವಾಹವೂ ಅಲ್ಲ, ಸಲಿಂಗಿಗಳ ಮದುವೆಯೂ ಅಲ್ಲ. ಆದರೂ ಗ್ರಾಮಸ್ಥರು ಸೇರಿ ಇಬ್ಬರು ಪುಟ್ಟ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದರು.
ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದಲ್ಲಿ ನಡೆದ ಹೆಣ್ಣುಮಕ್ಕಳ ಮದುವೆ ಅಥವಾ ಚಿತ್ತಾರದ ಚಂದ್ರಮ ಎಂಬ ಮಳೆರಾಯನ ಪೂಜೆಯಾಗಿದೆ.
ತೆಲುಗು ಪ್ರಭಾವವಿರುವ ಜಿಲ್ಲೆಯಲ್ಲಿ ಈ ಆಚರಣೆ ರೂಢಿಯಲ್ಲಿದೆ. ಮಳೆ ಬರದೆ ಬೆಳೆ ಒಣಗಿದಾಗ ನಮ್ಮ ಜನಪದರು ಭಕ್ತಿಯಿಂದ ಮಳೆರಾಯನನ್ನು ಆರಾಧಿಸುತ್ತಾರೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಪೂಜೆಯನ್ನು ಮಾಡಿದ ನಂತರ ಮಳೆ ಬಂದೇ ತೀರುತ್ತದೆಂಬ ಅಚಲವಾದ ನಂಬಿಕೆ ಗ್ರಾಮೀಣರದ್ದು. ಮಳೆರಾಯನನ್ನು ಸ್ತುತಿಸುವ ತೆಲುಗು ಪದಗಳನ್ನು ರಾಗ ಹಾಗೂ ಲಯಬದ್ಧವಾಗಿ ಹಾಡುತ್ತಾ ಗುಂಪುಗೂಡಿ ರೈತರು, ಮಕ್ಕಳು ಮನೆಮನೆಗೂ ಹೋಗುತ್ತಾರೆ. ಪ್ರತಿ ಮನೆಯವರೂ ಹಸಿಟ್ಟನ್ನು ನೀಡುತ್ತಾರೆ. ಗ್ರಾಮ ದೇಗುಲದ ಬಳಿ ತಿಂಗಳ ಮಾಮ ಅಥವಾ ಚಂದ್ರನನ್ನು ರಂಗೋಲಿಯಲ್ಲಿ ಬಿಡಿಸಿ, ಹೂಗಳಿಂದ ಅಲಂಕರಿಸಿ ರೊಟ್ಟಿ ಅನ್ನವನ್ನಿಟ್ಟು ಪೂಜಿಸುತ್ತಾರೆ.
ಕೋಲಾಟ, ಹಾಡು ಮುಂತಾದವುಗಳು ನಡೆಯುತ್ತವೆ. ಪ್ರಸಾದ ವಿತರಣೆಯೂ ಮಾಡಲಾಗುತ್ತದೆ. ಈ ರೀತಿ ಎಂಟು ದಿನ ಜರುಗುತ್ತದೆ. ಒಂಬತ್ತನೇ ದಿನ ಇಬ್ಬರು ಹೆಣ್ಣು ಮಕ್ಕಳಿಗೆ ಹಿರಿಯರಿಗೆ ಮಾಡುವ ರೀತಿಯಲ್ಲಿ ಶಾಸ್ತ್ರಬದ್ಧವಾಗಿ ಮದುವೆ ಮಾಡಲಾಗುತ್ತದೆ. ನಂತರ ಚಿತ್ತಾರದ ಚಂದ್ರನನ್ನು ವಿಸರ್ಜಿಸುತ್ತಾರೆ.
ಮಳೆರಾಯನ ಮೆರವಣಿಗೆ, ಪೂಜೆ ವಿಧಾನಗಳು ಬೇರೆ ಬೇರೆ ಪ್ರಾಂತ್ಯಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತವೆ. ಹಾಡುಗಳೂ ಅಷ್ಟೇ. ಇವು ಜಾನಪದ ’ಪದ’ಗಳು.
ರೈತರ ಬದುಕಿಗೆ ಜೀವಾಳವಾದ ಮಳೆಯನ್ನು ಜನಪದರು ದೈವವೆಂದೇ ಪರಿಗಣಿಸಿದ್ದಾರೆ. ಸಕಾಲದಲ್ಲಿ ಮಳೆಯಾದರೆ ಬೆಳೆ, ಬೆಳೆಯಾದರೆ ಬದುಕು. ಆದರೆ ಮಳೆಗಾಲ ಬಂದರೂ ಮಳೆಬಾರದೇ ಹೋದರೆ ಕಂಗಾಲಾದ ರೈತರು ಮಳೆರಾಯನಿಗೆ ಮೊರೆಹೋಗುತ್ತಾರೆ. ಕೃಷಿಯನ್ನೇ ನಂಬಿರುವ ಗ್ರಾಮೀಣರು ಅದಕ್ಕಾಗಿ ಕೆಲವು ಆಚರಣೆಗಳನ್ನು ಮಾಡುವುದುಂಟು. ಈ ಆಚರಣೆಗಳು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸಗಳಿದ್ದು ವೈವಿಧ್ಯಮಯವಾಗಿರುತ್ತದೆ.
 

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!