ತಾಲ್ಲೂಕಿನ ಹಿತ್ತಲಹಳ್ಳಿ ಬಳಿಯ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಚೌಡಸಂದ್ರದ ಬಳಿಯ ರೇಷ್ಮೆ ಫಾರಂ ಗಳಲ್ಲಿ ಗುರುವಾರ ಬೆಂಕಿ ಹೊತ್ತಿಕೊಂಡು ಕೆನ್ನಾಲಿಗೆ ಚಾಚುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ಹಿತ್ತಲಹಳ್ಳಿ ಗ್ರಾಮಸ್ಥರ ಆಕ್ರೋಶ : ‘ಹಿತ್ತಲಹಳ್ಳಿಯು ರೇಷ್ಮೆ ಗ್ರಾಮವೆಂದೇ ಪ್ರಸಿದ್ಧಿಯಾಗಿದೆ. ನಾವಿಲ್ಲಿ ಉಸಿರಾಡುವ ಜೀವಿಗಳನ್ನು ಸಾಕುತ್ತಿದ್ದೇವೆ. ಆದರೆ ಇದಕ್ಕೆ ಪ್ರತಿಕೂಲವಾಗುವಂತೆ ಶಿಡ್ಲಘಟ್ಟ ನಗರಸಭೆಯವರು ಊರಿನ ತ್ಯಾಜ್ಯವನ್ನೆಲ್ಲಾ ಇಲ್ಲಿ ಸುರಿಯುತ್ತಾರೆ. ಇದರಿಂದಾಗಿ ನಮ್ಮ ಬೆಳೆಗಳಿಗೆ ಕಂಟಕವಾಗಿದೆ’ ಎಂದು ಗ್ರಾಮಸ್ಥರು ದೂರಿದ್ದಾರೆ.
‘ಈ ದಿನ ಬೆಂಕಿ ಹೊತ್ತಿಕೊಂಡು ಹೊಗೆ ಮತ್ತು ಧೂಳು ಆವರಿಸಿ ಸುತ್ತ ಮುತ್ತಲಿನ ಹಿಪ್ಪುನೇರಳೆ ತೋಟಗಳು ಹಾಳಾಗಿದೆ, ಹುಳುಮನೆಗಳಿಗೆ ಈ ಹೊಗೆಯಿಂದಾಗಿ ಬೆಳೆ ಕೈಗೆ ಹತ್ತದಂತಾಗಿದೆ. ಈ ಘಟಕದ ಪಕ್ಕದಲ್ಲೇ ಇರುವ ರೈತ ಜಿ.ಗೋಪಾಲಕೃಷ್ಣ ವಿಷಕುಡಿಯುವುದೊಂದೇ ದಾರಿ ಎಂದು ರೋಧಿಸುತ್ತಿದ್ದಾರೆ. ವಿಶ್ರಾಂತಿಧಾಮ ಮಾಡುತ್ತೇವೆ, ವನ್ಯಧಾಮ ಹಾಗೂ ಉದ್ಯಾನವನ ಮಾಡುತ್ತೇವೆ ಎಂದು ನಂಬಿಸಿ ಈಗ ನಗರಸಭೆಯವರು ಕಸ ಸುರಿಯುವ ತಾಣ ಮಾಡಿದ್ದಾರೆ. ಕಸವನ್ನು ವೈಜ್ಞಾನಿಕವಾಗಿ ಯಾರಿಗೂ ತೊಂದರೆಯಾಗದಂತೆ ಪರಿಷ್ಕರಣೆ ಮಾಡಬೇಕು. ಕೋಟ್ಯಾಂತರ ಹಣವನ್ನು ದುರುಪಯೋಗ ಮಾಡಿಕೊಂಡು ನಮ್ಮ ಗ್ರಾಮಕ್ಕೆ ಸೇರಿದ್ದ ಸ್ಥಳವನ್ನು ನಮಗೆ ಕಂಟಕವನ್ನಾಗಿ ಮಾಡಿದ್ದಾರೆ. ಇದನ್ನು ಮುಚ್ಚದಿದ್ದಲ್ಲಿ ಮುಂದಿನ ದಿನಗಳಲ್ಲಿ ಇದರ ಬೀಗ ಜಡಿದು ಪ್ರತಿಭಟಿಸುತ್ತೇವೆ’ ಎಂದು ಗ್ರಾಮಸ್ಥರು ಎಚ್ಚರಿಸಿದರು.
ಸ್ಥಳಕ್ಕೆ ನಗರಸಭೆ ಆಯುಕ್ತ ಚಲಪತಿ ಆಗಮಿಸಿ ಬೆಂಕಿ ನಂದಿಸಲು ಬೇಕಾದ ನೀರಿನ ಟ್ಯಾಂಕರುಗಳನ್ನು ತರಿಸಿ ಅಗ್ನಿಶಾಮಕ ಸಿಬ್ಬಂದಿಗೆ ನೆರವು ನೀಡಿದರು.
- Advertisement -
- Advertisement -
- Advertisement -
- Advertisement -