ಶಾಶ್ವತ ನೀರಾವರಿ ಯೋಜನೆ ಅನುಷ್ಟಾನಗೊಳಿಸುವಂತೆ ಒತ್ತಾಯಿಸಿ ಕಳೆದ ೬೩ ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಕೂಡಾ ಯಾವುದೇ ಕ್ರಮಕ್ಕೆ ಮುಂದಾಗದ ಸರ್ಕಾರದ ನೀತಿಯನ್ನು ಖಂಡಿಸಿ ಹೆದ್ದಾರಿಗಳನ್ನು ಬಂದ್ ಮಾಡುವ ಬಗ್ಗೆ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.
ನಗರದ ಪ್ರವಾಸಿಮಂದಿರದಲ್ಲಿ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹೆದ್ದಾರಿ ಬಂದ್ ಮಾಡುವ ಬಗ್ಗೆ ಪೂರ್ವಭಾವಿ ಸಭೆ ಸೇರಿ ಚರ್ಚಿಸಿದರು. ಇದೇ ನವೆಂಬರ್ ೨೫ ರಂದು ರಾಜ್ಯ ರೈತ ಸಂಘ ಹಾಗು ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಬಯಲುಸೀಮೆಯ ವಿವಿಧ ಹೆದ್ದಾರಿಗಳನ್ನು ಬಂದ್ ಮಾಡಿ ಆ ಮೂಲಕ ಸರ್ಕಾರಕ್ಕೆ ಬಯಲುಸೀಮೆ ಭಾಗದ ಜನರ ಕೂಗನ್ನು ಮುಟ್ಟಿಸುವ ಕೆಲಸ ಮಾಡಲು ತೀರ್ಮಾನಿಸಲಾಯಿತು.
ಕಳೆದ ಎರಡು ದಶಕಗಳಿಂದ ಕುಡಿಯುವ ನೀರಿಗೂ ಪರಿತಪಿಸುತ್ತಿರುವ ಬಯಲುಸೀಮೆಯ ಭಾಗಕ್ಕೆ ನೀರಾವರಿ ತಜ್ಞ ಪರಮಶಿವಯ್ಯ ವರದಿಯಂತೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವಂತೆ ವಿವಿಧ ರೀತಿಯ ಹೋರಾಟ ಪ್ರತಿಭಟನೆಗಳನ್ನು ಈ ಭಾಗದ ಜನರು ಮಾಡುತ್ತಿದ್ದಾರೆ. ಯಾವುದೇ ಸರ್ಕಾರ ಈ ಭಾಗದ ಜನರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಚುನಾವಣೆ ಬಂದಾಗ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಗೆದ್ದು ಹೋದ ನಂತರ ಮರೆಯುವ ಜನಪ್ರತಿನಿಧಿಗಳಿಂದ ಈ ಭಾಗಕ್ಕೆ ನೀರು ಸಿಗುವುದಿಲ್ಲ ಎಂಬುದನ್ನರಿತು ಅನಿರ್ದಿಷ್ಠಾವಧಿ ಧರಣಿ ಹಮ್ಮಿಕೊಳ್ಳಲಾಗಿತ್ತು. ಹೋರಾಟ ಶುರು ಮಾಡಿ ೬೪ ದಿನವಾದರೂ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲವಾದ್ದರಿಂದ ಹೋರಾಟ ತೀವ್ರಗೊಳಿಸುವ ಸಲುವಾಗಿ ಇದೇ ನವೆಂಬರ್ ೨೫ ರಂದು ಹೆದ್ದಾರಿ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಹೆದ್ದಾರಿಗಳಲ್ಲಿ ಜಾನುವಾರುಗಳನ್ನು ಕಟ್ಟಿ ಟ್ರಾಕ್ಟರ್ಗಳನ್ನು ನಿಲ್ಲಿಸುವುದರೊಂದಿಗೆ ವಾಹನ ಸಂಚಾರ ತಡೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ತಾದೂರುಮಂಜುನಾಥ್, ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಅಬ್ಲೂಡು ಆರ್.ದೇವರಾಜ್, ವೇಣುಗೋಪಾಲ್, ವೀರಾಪುರ ರಾಮಣ್ಣ, ಹುಜುಗೂರು ರಾಮಚಂದ್ರಪ್ಪ, ಅಪ್ಜಲ್ಪಾಷಾ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -