ಶಿಡ್ಲಘಟ್ಟ : ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳಿಂದ ಯಾರೇ ಆಗಲೀ ಬಂದಾಗ ಅವರ ಬಗ್ಗೆ ನೆರೆಹೊರೆಯವರು ತಕ್ಷಣ ತಹಶೀಲ್ದಾರ್, ಆರೋಗ್ಯ ಇಲಾಖೆ, ಕಾಲ್ ಸೆಂಟರ್(08158 256763) ಅಥವಾ ಪೊಲೀಸರಿಗೆ ಮಾಹಿತಿ ಕೊಡಿ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಮುಂತಾದ ಯಾವುದೇ ರಾಜ್ಯದಿಂದ ಬಂದಿದ್ದರೂ ಅವರನ್ನು ಖಡ್ಡಾಯವಾಗಿ ಇನ್ಸಿಟ್ಯೂಟ್ ಕ್ವಾರಂಟೈನ್ ಮಾಡಲಾಗುವುದು, ಹೊರಜಿಲ್ಲೆಯವರಿಗೆ ತಪಸಣೆ ಮಾಡಿ ಹೋಮ್ ಕ್ವಾರಂಟೈನ್ ಮಾಡಲಾಗುವುದು. ಹೊರಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಬಂದವರು ಸ್ವಯಂ ಪ್ರೇರಿತರಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಇಲ್ಲವಾದಲ್ಲಿ ಸಂಬಂಧಿಸಿದ ಇಲಾಖೆಯವರು ಬಂದು ವಶಕ್ಕೆ ಪಡೆದು ಕ್ವಾರಂಟೈನ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಮ್ಮ ಅಕ್ಕಪಕ್ಕದ ಮನೆಗಳಿಗೆ ಬರುವ ಹೊರಜಿಲ್ಲೆ ಅಥವಾ ಹೊರರಾಜ್ಯಗಳಿಂದ ಬಂದವರ ಮಾಹಿತಿಯನ್ನು ನೀಡಿದವರ ಹೆಸರನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ. ಹಾಗಾಗಿ ಎಲ್ಲರ ಒಳಿತಿಗಾಗಿ ಇಂತಹವರ ಮಾಹಿತಿಯನ್ನು ನೀಡಿ ಎಂದು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದರು.
ಸರ್ಕಾರದ ಮಾರ್ಗಸೂಚಿಯಂತೆ ಈಗಾಗಲೇ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಹಾಗಾಗಿ ಸರ್ಕಾರದ ಸೂಚನೆಯಂತೆ ಹೊರರಾಜ್ಯಗಳಿಂದ ಬರುವ ಎಲ್ಲಾ ಪ್ರಯಾಣಿಕರ ಮಾಹಿತಿಯನ್ನು ಪಡೆಯಬೇಕಿದೆ. ಕ್ವಾರಂಟೈನ್ ಮಾಡಿ, ಐದರಿಂದ ಏಳನೇ ದಿನದೊಳಗೆ ಒಂದು ಸ್ವಾಬ್ ತೆಗೆದು, ನಂತರ 12 ನೇ ದಿನ ಮತ್ತೊಂದು ಸ್ವಾಬ್ ತೆಗೆದು ಪರೀಕ್ಷೆ ನಡೆಸುತ್ತೇವೆ. ಸೋಂಕಿಲ್ಲವೆಂಬುದು ಖಾತರಿಯಾದೊಡನೆ ಅವರನ್ನು ಅವರ ಮನೆಗಳಿಗೆ ಕಳುಹಿಸಿಕೊಡುತ್ತೇವೆ. ಮನೆಗಳಲ್ಲಿ ಹೇಗಿರಬೇಕು ಎಂದು ಮುನ್ನೆಚ್ಚರಿಕೆ ಕ್ರಮಗಳನ್ನು ಸಹ ತಿಳಿಸಿಕೊಡುತ್ತೇವೆ.
ಹೊರ ಜಿಲ್ಲೆಗಳಿಂದ ಬಂದವರ ಬಗ್ಗೆಯೂ ನಿಗಾ ವಹಿಸಿ ಅವರನ್ನು ಹೋಂ ಕ್ವಾರಂಟೈನ್ ಮಾಡಬೇಕೆಂಬ ಸರ್ಕಾರಿ ಸೂಚನೆಯಿದೆ. ಅವರು ನಿಯಮ ಮೀರಿ ಹೊರಗಡೆ ಓಡಾಡುವುದು ಕಂಡು ಬಂದಲ್ಲಿ ಪೊಲೀಸರ ಸಹಕಾರದಿಂದ ಇನ್ಸಿಟ್ಯೂಟ್ ಕ್ವಾರಂಟೈನ್ ಮಾಡಲಾಗುವುದು ಎಂದರು.
ಜ್ವರ, ಕೆಮ್ಮು, ನೆಗಡಿ ಏನೇ ಬಂದರೂ ಸರ್ಕಾರಿ ವೈದ್ಯರ ಬಳಿ ಬಂದು ಚಿಕಿತ್ಸೆ ಪಡೆಯಿರಿ. ಅನುಮಾನವಿದ್ದಲ್ಲಿ ಸ್ವಾಬ್ ತೆಗೆದು ಪರೀಕ್ಷೆ ನಡೆಸುತ್ತೇವೆ. ಪಾಸಿಟೀವ್ ಬಂದರೆ ಕ್ವಾರಂಟೈನ್ ಆಗಿ, ನಮ್ಮೊಂದಿಗೆ ಸಹಕರಿಸಿ. ಸೂಕ್ತ ಚಿಕಿತ್ಸೆ ನೀಡುತ್ತೇವೆ. ನಾನೊಬ್ಬನೇ ಚೆನ್ನಾಗಿರಬೇಕು ಎಂಬ ಮನಸ್ಥಿತಿಯಿಂದ ಹೊರಬನ್ನಿ, ಸಮುದಾಯ ಚೆನ್ನಾಗಿರಬೇಕು ಎಂದು ಯೋಚಿಸುವ ಕಾಲ ಬಂದಿದೆ. ವೈರಸ್ ನೊಂದಿಗೇ ಹೊಂದಾಣಿಕೆ ಮಾಡಿಕೊಂಡು ಸಾಕಷ್ಟು ತಿಂಗಳುಗಳ ಕಾಲ ಬದುಕಬೇಕಿದೆ. ಮಾಸ್ಕ್ ಧರಿಸಿ, ಅನಗತ್ಯವಾಗಿ ಓಡಾಡಬೇಡಿ, ಅಂತರ ಕಾಯ್ದುಕೊಳ್ಳಿ, ಸ್ವಚ್ಚತೆಯನ್ನು ರೂಢಿಸಿಕೊಳ್ಳಿ ಎಂದು ಕೋರಿದರು.