ಅಂಗವಿಕಲರಿಗೆ ಅನುಕಂಪ, ಸಹಾನುಭೂತಿ ತೋರಿಸುವ ಬದಲಿಗೆ ಅವರಿಗೆ ಸಹಕಾರ ನೀಡಲು ಮುಂದಾದರೆ ಪ್ರತಿಯೊಬ್ಬ ವಿಕಲಚೇತನರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ನಗರಸಭಾ ಕಾರ್ಯಾಲಯದ ಮುಂಭಾಗದಲ್ಲಿ ಗುರುವಾರ ೨೦೧೫-–೧೬ ನೇ ಸಾಲಿನ ಶೇ. ೩ ರ ಅನುದಾನದಡಿಯಲ್ಲಿ ಅಂಗವಿಕಲರಿಗೆ ವ್ಹೀಲ್ಚೇರ್ ಸೇರಿದಂತೆ ಸಾಧನ ಸಲಕರಣೆ ಹಾಗೂ ಟ್ರೈಸಿಕಲ್ ವಿತರಣೆ ನೆರವೇರಿಸಿ ಅವರು ಮಾತನಾಡಿದರು.
ಅಂಗವಿಕಲರು ಎಲ್ಲಾ ರಂಗಗಳಲ್ಲೂ ಉತ್ತಮವಾದ ಸಾಧನೆಗಳನ್ನು ಮಾಡಬಲ್ಲರು. ಹಾಗಾಗಿ ಅವರಿಗೆ ಅವಕಾಶಗಳನ್ನು ಕಲ್ಪಿಸಿಕೊಡುವಂತಹ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಯಾವುದೇ ಕಚೇರಿಗಳಿಗೆ ಅಂಗವಿಕಲರು ಭೇಟಿ ನೀಡಿದಾಗ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ಅವರನ್ನು ಕಂಡೊಡನೆ ಮೊದಲ ಪ್ರಾಶಸ್ತ್ಯದೊಂದಿಗೆ ಅವರ ಕೆಲಸ ಕಾರ್ಯಗಳನ್ನು ಮುಗಿಸಿಕೊಡಿ. ಯಾವುದೇ ಕಾರಣಕ್ಕೂ ಅಂಗವಿಕಲರು ಪದೇ ಪದೇ ಕಚೇರಿಗಳಿಗೆ ಅಲೆಯುವಂತಹ ಪರಿಸ್ಥಿತಿ ನಿರ್ಮಾಣ ಮಾಡಬೇಡಿ ಎಂದರು.
ಸುಮಾರು ೫,೮೪,೮೬೦ ರೂಗಳ ವೆಚ್ಚದಲ್ಲಿ ೨೨ ಮಂದಿಗೆ ವ್ಹೀಲ್ಚೇರ್, ೧೨ ಮಂದಿಗೆ ಟ್ರೈಸಿಕಲ್ ಹಾಗೂ ೪೮ ಮಂದಿಗೆ ವಿವಿಧ ಸಾಧನ ಸಲಕರಣೆಗಳನ್ನು ಇದೀಗ ವಿತರಿಸುತ್ತಿದ್ದು ಮುಂದಿನ ದಿನಗಳಲ್ಲಿ ನಗರಸಭೆಗೆ ಬರುವ ಅನುದಾನಗಳಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸಾಧನೆ ಸಲಕರಣೆಗಳನ್ನು ವಿತರಣೆ ಮಾಡಲು ಅಗತ್ಯವಾದ ಯೋಜನೆಯನ್ನು ತಯಾರಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ಮುನಿಯಪ್ಪ, ನಗರಸಭೆ ಅಧ್ಯಕ್ಷೆ ಮುಷ್ಠರಿತನ್ವೀರ್, ಉಪಾಧ್ಯಕ್ಷೆ ಸುಮಿತ್ರಮ್ಮರಮೇಶ್, ಸ್ಥಾಯಿಸಮಿತಿ ಅಧ್ಯಕ್ಷ ಕಿಶನ್, ಪೌರಾಯುಕ್ತ ಎಚ್.ಎ.ಹರೀಶ್, ನಗರಸಭೆ ಸದಸ್ಯರಾದ ಅಪ್ಸರ್ಪಾಷ, ಲಕ್ಷ್ಮಯ್ಯ, ಕೇಶವಮೂರ್ತಿ, ವೆಂಕಟಸ್ವಾಮಿ, ಜೆ.ಎಂ.ಬಾಲಕೃಷ್ಣ, ಮುಖಂಡರಾದ ಶ್ರೀನಾಥ್, ಶ್ರೀಧರ್, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -