ದೈಹಿಕ ಬೆಳೆವಣಿಗೆಯಲ್ಲಿ ಮನುಷ್ಯನಿಗೆ ಅತ್ಯಗತ್ಯವಾಗಿರುವ ಅಂಗಗಳಾದ ಕಣ್ಣು ಮತ್ತು ಶ್ರವಣಗಳ ಬಗ್ಗೆ ನಾಗರಿಕರು ಹೆಚ್ಚಿನ ಕಾಳಜಿವಹಿಸಬೇಕು ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಹೇಳಿದರು.
ನಗರದ ಬಸ್ ನಿಲ್ದಾಣದ ಬಳಿಯಿರುವ ಶ್ರೀ ವೆಂಕಟೇಶ್ವರ ಕಲ್ಯಾಣಮಂಟಪದಲ್ಲಿ ಭಾನುವಾರ ಎಸ್.ಎನ್.ಕ್ರಿಯಾ ಟ್ರಸ್ಟ್ನ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಕಣ್ಣಿನ ತಪಾಸಣೆ ಹಾಗೂ ವಾಕ್ ಮತ್ತು ಶ್ರವಣ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ನಿರಂತರ ದುಡಿಮೆ, ಕಲುಷಿತ ನೀರಿನ ಸೇವನೆ, ಬದಲಾಗುತ್ತಿರುವ ಆಹಾರ ಪದ್ಧತಿಗಳಿಂದಾಗಿ ದೈಹಿಕವಾಗಿ ಬಳಲಿಕೆಯೊಂದಿಗೆ ಪ್ರಮುಖವಾದ ಅಂಗಗಳಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಇವುಗಳಿಂದ ಜನರು ದುಬಾರಿ ವೆಚ್ಚವನ್ನು ಭರಿಸಿ ಬೆಂಗಳೂರಿನಂತಹ ಮಹಾನಗರಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕಾಗಿದೆ ಎಂದರು.
ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲವಾದ್ದರಿಂದ ಅಂತಹವರಿಗಾಗಿ ತಮ್ಮ ಸಂಸ್ಥೆಯಿಂದ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಿದ್ದು ಇಂತಹ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಪಾಲ್ಗೊಂಡು ತಪಾಸಣೆ ಸೇರಿದಂತೆ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.
ಶಿಬಿರದಲ್ಲಿ ಗ್ರಾಮೀಣ ಪ್ರದೇಶದ ಜನತೆ ಸೇರಿದಂತೆ ನಗರದ ನಾಗರಿಕರು ಭಾಗವಹಿಸಿ ಕಣ್ಣಿನ ತಪಾಸಣೆ, ಕಣ್ಣಿನಪೊರೆ ತಪಾಸಣೆ, ಕಿವಿಸೋರುವಿಕೆ, ಧ್ವನಿತೊಂದರೆ ಮತ್ತಿತರ ತಪಾಸಣೆ ಮಾಡಿಸಿಕೊಂಡರು.
ದೃಷ್ಟಿ ಆಸ್ಪತ್ರೆಯ ವೈದ್ಯರು ಕಣ್ಣಿನ ತಪಾಸಣೆ ನಡೆಸಿ ಅಗತ್ಯ ಔಷಧಿಗಳನ್ನು ಮತ್ತು ಕನ್ನಡಕಗಳನ್ನು ಉಚಿತವಾಗಿ ನೀಡಿದರು.
ಇತ್ತೀಚೆಗೆ ತಾಲ್ಲೂಕಿನ ದಡಂಘಟ್ಟ ಗ್ರಾಮದ ನಾಲ್ವರು ಹೆಣ್ಣು ಮಕ್ಕಳು ಬಟ್ಟೆ ತೊಳೆಯಲೆಂದು ಕೆರೆಗೆ ಹೋಗಿ ಮೃತಪಟ್ಟಿದ್ದರ ಹಿನ್ನಲೆಯಲ್ಲಿ ಅವರ ಕುಟುಂಬಗಳಿಗೆ ತಲಾ ಒಂದರಂತೆ ನಾಲ್ಕು ಹೊಲಿಗೆ ಯಂತ್ರಗಳನ್ನು ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಉಚಿತವಾಗಿ ಈ ಸಂದರ್ಭದಲ್ಲಿ ವಿತರಿಸಲಾಯಿತು.
ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಉಪಾಧ್ಯಕ್ಷ ನಂಜಪ್ಪ, ರೈತಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶ್ರೀಕಾಂತ್, ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಮುಖಂಡರಾದ ನಾರಾಯಣಪ್ಪ, ಆನೂರು ದೇವರಾಜ್, ಬೆಳ್ಳೂಟಿ ಸಂತೋಷ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -