ಕನಕದಾಸರೆಂದರೆ ನೆನಪಾಗುವುದು ಸಂಗೀತದ ಮೂಲಕ ಕರ್ಣಾಮೃತ ಒದಗಿಸುವ ಅವರ ನೂರಾರು ರಚನೆಗಳು. ಕನಕದಾಸರು ಹದಿನೈದು ಹದಿನಾರನೇ ಶತಮಾನಗಳಲ್ಲಿದ್ದ ಜನಪ್ರಿಯವಾದ ಭಕ್ತಿ ಪಂಥದ ಪ್ರಮುಖ ಹರಿದಾಸರಲ್ಲಿ ಒಬ್ಬರು ಎಂದು ಡಾ.ಡಿ.ಟಿ.ಸತ್ಯನಾರಾಯಣರಾವ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯ ಮುಂದೆ ನಾಡಹಬ್ಬಗಳ ಆಚರಣಾ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ದಾಸಶ್ರೇಷ್ಠ ಶ್ರೀ ಕನಕದಾಸರ 529ನೇ ಜಯಂತಿ ಮಹೋತ್ಸವದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಅಮೂಲ್ಯ ಕಾಣಿಕೆಗಳನ್ನಿತ್ತವರು ಕನಕದಾಸರು. ತಮಗೆ ದೊರೆತ ನಿಧಿಯಿಂದ ಕನಕನಾಯಕರೆಂಬ ಹೆಸರನ್ನು ಪಡೆದು ಮುಂದೆ ಕನಕದಾಸರಾಗಿ ಕಂಗೊಳಿಸಿದರು. ಕನಕರು ‘ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರ’ ಎಂದು ಎಲ್ಲ ಜಾತಿ ಪದ್ಧತಿಗಳ ಮೂಲವನ್ನೇ ಪ್ರಶ್ನಿಸಿದವರು. ಕನಕದಾಸರು ವ್ಯಾಸರಾಯರ ನೆಚ್ಚಿನ ಶಿಷ್ಯರು. ಕನಕದಾಸರು ರಚಿಸಿರುವ ನೂರಾರು ಕೀರ್ತನೆಗಳು ಮತ್ತು ಅವರ ಕಾವ್ಯಕೃತಿಗಳಾದ ‘ಮೋಹನತರಂಗಿಣಿ’, ‘ನಳಚರಿತ್ರೆ’, ‘ರಾಮಧಾನ್ಯಚರಿತ್ರೆ ಮತ್ತು ‘ಹರಿಭಕ್ತಿಸಾರ’ ಇವುಗಳು ಅಂದಿನಿಂದ ಇಂದಿನವರೆಗೆ ಜನಮಾನಸದಲ್ಲಿ ನಿರಂತರ ಗಂಗೆಯಾಗಿ ಹರಿದು ಬಂದಿದೆ. ಶ್ರೇಷ್ಠ ಭಕ್ತಪಂಥದ ಹಿರಿಮೆಯಲ್ಲಿ ಶಾಶ್ವತವಾಗಿ ನಿಲ್ಲುವಂತಹ ಕೀರ್ತನೆಗಳನ್ನು ನೀಡಿರುವ ಪೂಜ್ಯ ಕನಕದಾಸರು ನಮ್ಮ ಹೃದಯಗಳಲ್ಲೂ ಶಾಶ್ವತ ಸ್ಥಾನ ಪಡೆದವರಾಗಿದ್ದಾರೆ ಎಂದು ವಿವರಿಸಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಸಾಮಾಜಿಕ ನ್ಯಾಯ ಎತ್ತಿ ಹಿಡಿದ ದಾರ್ಶನಿಕ, ಮಹಾನ್ ಕವಿ ಮತ್ತು ಭಕ್ತಿಯ ಸಾಮ್ರಾಜ್ಯ ಕಟ್ಟಿದವರು ಕನಕದಾಸರು. ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಕನಕದಾಸರು ಕನ್ನಡದಲ್ಲಿ ಸಾಹಿತ್ಯವನ್ನು ರಚಿಸಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದರು. ವರ್ಗರಹಿತ ಸಮಾಜವನ್ನು ಕಟ್ಟಲು ಶ್ರಮಿಸಿದವರು ಎಂದು ಹೇಳಿದರು.
ಕುರುಬ ಸಮಾಜದ ಸೊಣ್ಣಪ್ಪ, ರಂಗಪ್ಪ, ಮುನಿಯಪ್ಪ, ಶ್ರೀರಾಮಪ್ಪ ಮುಂತಾದ ಹಿರಿಯರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಒಂದು ಸಾವಿರ ರೂ ನಗದು ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು. ಕನಕದಾಸರ ಜೀವನದ ಬಗ್ಗೆ ಮಾತನಾಡಿದ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಶಿವಾನಿಯನ್ನು ಸನ್ಮಾನಿಸಲಾಯಿತು.
ಬೆಳಿಗ್ಗೆ ಓ.ಟಿ.ವೃತ್ತದಲ್ಲಿರುವ ಶ್ರೀ ಕನಕದಾಸರ ಭಜನೆ ಮಂದಿರದಲ್ಲಿ ಪೂಜೆಯನ್ನು ನೆರವೇರಿಸಲಾಯಿತು. ಗಾರುಡಿ ಬೊಂಬೆ, ಡೊಳ್ಳುಕುಣಿತ, ವೀರಗಾಸೆ, ತಮಟೆ, ಶಾಲಾ ಮಕ್ಕಳ ವಾದ್ಯವೃಂದ ದೊಂದಿಗೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಕನಕದಾಸರ ಪ್ರತಿಕೃತಿಯಿರುವ ಟ್ರಾಕ್ಟರ್‌ಗಳನ್ನು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು. ತೆಂಗಿನಕಾಯಿ ಪವಾಡವನ್ನೂ ನಡೆಸಲಾಯಿತು.
ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ, ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಸದಸ್ಯರಾದ ವೆಂಕಟಸ್ವಾಮಿ, ಸಿಕಂದರ್, ರಾಜ್ಯ ಕುರುಬರ ಸಂಘದ ಉಪಾಧ್ಯಕ್ಷ ಎ.ನಾಗರಾಜು, ತಾಲ್ಲೂಕು ಕುರುಬರ ಸಂಘದ ಗೌರವಾಧ್ಯಕ್ಷ ಎಂ.ಗಣೇಶಪ್ಪ, ಅಧ್ಯಕ್ಷ ಕೆ.ಮಂಜುನಾಥ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಮಾಜಿ ಅಧ್ಯಕ್ಷ ಗುರುರಾಜರಾವ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ರಾಮಚಂದ್ರಪ್ಪ, ತಾದೂರು ಮಂಜುನಾಥ್, ಮಂಜುಳಮ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -