27.3 C
Sidlaghatta
Monday, February 23, 2026

ಕನ್ನಡದ ಆಧುನಿಕ ಸಂಸ್ಕೃತಿಯನ್ನು ಕಟ್ಟಿದ ಮಹಾನ್ ಚೇತನ

- Advertisement -
- Advertisement -

ಬಡತನವಿದ್ದರೂ ವಿದ್ಯೆಯ ಹಂಬಲದಿಂದ ಕಷ್ಟಪಟ್ಟು ಸಾಧನೆ ಮಾಡಿ ಕನ್ನಡದ ಆಧುನಿಕ ಸಂಸ್ಕೃತಿಯನ್ನು ಕಟ್ಟಿದ ಮಹಾನ್ ಚೇತನ ದೇ. ಜವರೇಗೌಡ ಅವರದ್ದು ಪ್ರೇರಣದಾಯಕ ವ್ಯಕ್ತಿತ್ವ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಹೇಳಿದರು.
ನಗರದ ಕ್ರೆಸೆಂಟ್ ಶಾಲೆಯಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ನಡೆದ ದೇ. ಜವರೇಗೌಡ ಮತ್ತು ಎಚ್.ವಿ.ರಾಮಚಂದ್ರರಾವ್ ಅವರ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ರಾಷ್ಟ್ರಕವಿ ಕುವೆಂಪು ಅವರಿಂದ ಪ್ರಭಾವಿತರಾಗಿದ್ದ ದೇ.ಜವರೇಗೌಡ ಅವರು ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸರಿಸುಮಾರು ಏಳು ದಶಕಗಳಿಂದ ವಿದ್ವತ್ತು, ಆಡಳಿತ ಮತ್ತು ಚಳುವಳಿಗಳೆಂಬ ಮೂರು ನೆಲೆಗಳಲ್ಲಿ ಮಾಡಿರುವ ಕೆಲಸಗಳು ಅವರ ಕೊಡುಗೆಯ ಸ್ವರೂಪವನ್ನು ನಿರ್ಧರಿಸಿವೆ. ಜಾನಪದ, ಗ್ರಂಥಸಂಪಾದನೆ, ಸಾಹಿತ್ಯವಿಮರ್ಶೆ, ಭಾಷಾಂತರ, ಜೀವನಚರಿತ್ರೆ, ಪ್ರವಾಸ ಸಾಹಿತ್ಯ ಮುಂತಾದ ಹಲವು ಕ್ಷೇತ್ರಗಳಲ್ಲಿ ವ್ಯಾಪಕವಾದ ಕೆಲಸ ಮಾಡಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗಾಗಿ ಹತ್ತಾರು ಮಹತ್ವದ ಯೋಜನೆಗಳನ್ನು ರೂಪಿಸಿದ, ಸಂಪನ್ಮೂಲಗಳನ್ನು ಸೃಷ್ಟಿಸಿ, ಅವನ್ನು ಯಶಸ್ವಿಯಾಗಿ ನಿರ್ವಹಿಸಿದ ದೇಜಗೌರ ಸಾಧನೆ ಅನುಪಮವಾದುದು ಎಂದು ಹೇಳಿದರು.
ಶಿಡ್ಲಘಟ್ಟದಲ್ಲಿ ನಡೆದ ಪ್ರಪ್ರಥಮ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಎಚ್.ವಿ.ರಾಮಚಂದ್ರರಾವ್ ಅವರು ಮೇ 23 ರಂದು ನಿಧನರಾದರು. ಎಚ್.ವಿ.ಆರ್ ಅವರು ಹಲವಾರು ಹಿಂದಿ ಮತ್ತು ಕನ್ನಡ ಅನುವಾದಗಳನ್ನು ಮಾಡಿದ್ದು, ಕನ್ನಡ, ಹಿಂದಿ ಮತ್ತು ಸಂಸ್ಕೃತದಲ್ಲಿ ಕೃತಿಗಳನ್ನು ರಚಿಸಿದ್ದಾರೆ. ತುಳಸಿ ರಾಮಾಯಣದ ಮೇಲೆ ಬರೆದ ‘ರಾಮಚರಿತ ಮಾನಸ ಒಂದು ರಸಯಾತ್ರೆ’, ಗ್ರಾಮಾಯಣ, ಸತ್ಯಾಗ್ರಹ ಮತ್ತು ಇತರ ಕಥೆಗಳು, ಕಬೀರ ವಚನಾವಳಿ, ಹರಿಕಥಾಮೃತಸಾರ ಮುಂತಾದ 16 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅಗಲಿದ ಹಿರಿಯ ಚೇತನರ ಆತ್ಮಕ್ಕೆ ಶಾಂತಿಸಿಗಲಿ, ದುಃಖ ಭರಿಸುವ ಶಕ್ತಿ ಅವರ ಮನೆಯವರಿಗೆ ಭಗವಂತ ನೀಡಲಿ ಎಂದು ನುಡಿದರು.
ಕ.ಸಾ.ಪ ಜಿಲ್ಲಾ ಮಾಜಿ ಅಧ್ಯಕ್ಷ ಎಸ್.ವಿ.ನಾಗರಾಜರಾವ್ ಶ್ರದ್ಧಾಂಜಲಿ ಸಭೆಯ ಉದ್ದೇಶ ಹಾಗೂ ನಿಧನರಾದ ಸಾಹಿತಿಗಳ ಕುರಿತಂತೆ ಮಾತನಾಡಿದರು.
ಕ.ಸಾ.ಪ ತಾಲ್ಲೂಕು ಉಪಾಧ್ಯಕ್ಷರಾದ ಸಯ್ಯದ್ ತಮೀಮ್ ಅನ್ಸಾರಿ, ಎನ್.ಅಶೋಕ್, ಗೌರವ ಕಾರ್ಯದರ್ಶಿಗಳಾದ ಎ.ಎಂ. ತ್ಯಾಗರಾಜ್ ಎನ್.ವೆಂಕಟೇಶಪ್ಪ, ಶಿಕ್ಷಕರಾದ ವಿ.ಕೃಷ್ಣ, ಭಾಸ್ಕರ್, ಪ್ರಕಾಶ್, ಶಿವಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!