27.5 C
Sidlaghatta
Wednesday, July 30, 2025

ಕೃಷಿ ಯಂತ್ರೋಪಕರಣಗಳ ಬಾಡಿಗೆ ಕೇಂದ್ರ ಉದ್ಘಾಟನೆ

- Advertisement -
- Advertisement -

ರೈತರಲ್ಲಿ ತಾರತಮ್ಯ ಮಾಡದೆ ಎಲ್ಲರಿಗೂ ಅವಕಾಶ ಸಿಗುವಂತೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ನೀಡುವ ಕೇಂದ್ರ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಹೊಸಪೇಟೆ ಗ್ರಾಮದಲ್ಲಿ ಕೃಷಿ ಇಲಾಖೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವದಲ್ಲಿ ಶುಕ್ರವಾರ ಹೋಬಳಿ ಮಟ್ಟದ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರದ ಉದ್ಘಾಟನೆ ಮತ್ತು ಕೃಷಿ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಕೂಲಿ ಕಾರ್ಮಿಕರ ಅಭಾವದಿಂದಾಗಿ ಕೃಷಿ ಕಾರ್ಯ ಕಷ್ಟವಾಗುತ್ತಿದೆ. ಅದಕ್ಕಾಗಿ ಹಲವಾರು ಯಂತ್ರೋಪಕರಣಗಳ ಆವಿಷ್ಕಾರವಾಗುತ್ತಿವೆ. ಆದರೆ ಎಲ್ಲಾ ರೈತರೂ ಯಂತ್ರೋಪಕರಣಗಳಿಗೆ ಹಣ ವ್ಯಯಿಸಲು ಶಕ್ತರಾಗಿರುವುದಿಲ್ಲ. ಈ ಕೊರತೆಯನ್ನು ನೀಗಿಸಲು ಕೃಷಿ ಇಲಾಖೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಂಟಿಯಾಗಿ ಹೋಬಳಿ ಮಟ್ಟದಲ್ಲಿ ಕಚೇರಿಗಳನ್ನು ತೆರೆದಿದ್ದು, ರೈತರಿಗೆ ಸುಲಭ ಬೆಲೆಯಲ್ಲಿ ಬಾಡಿಗೆಗೆ ಯಂತ್ರೋಪಕರಣಗಳು ಸಿಗುತ್ತಿರುವುದು ಒಂದು ರೀತಿಯ ವರದಾನದಂತಿದೆ ಎಂದು ಹೇಳಿದರು.
ಅಲ್ಪ ಸ್ವಲ್ಪ ನೀರಿನಲ್ಲೇ ನಮ್ಮ ಭಾಗದ ರೈತರು ಹಲವಾರು ಬೆಳೆಗಳನ್ನು ಬೆಳೆಯುವ ಸಾಹಸಿಗಳಾಗಿದ್ದಾರೆ. ಇನ್ನು ಶಾಶ್ವತ ನೀರಾವರಿ ಯೋಜನೆಯು ಈ ಭಾಗಕ್ಕೆ ಬಂದಲ್ಲಿ ಆಹಾರ ಉತ್ಪನ್ನ ಬೆಳೆಯುವುದಲ್ಲದೆ, ಆರ್ಥಿಕವಾಗಿಯೂ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ರಾಧಾಕೃಷ್ಣರಾವ್ ಮಾತನಾಡಿ, ‘ಕಳೆದ 33 ವರ್ಷಗಳಿಂದ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ನೀಡುವ ಯೋಜನೆಯನ್ನು ನಡೆಸುತ್ತಿದ್ದೇವೆ. ಕೆಲವು ವರ್ಷಗಳಿಂದ ಸರ್ಕಾರದೊಂದಿಗೆ ಸೇರಿ 180 ಹೋಬಳಿಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಒಟ್ಟು 90 ಕೋಟಿ ರೂಗಳನ್ನು ಕೃಷಿ ಯಂತ್ರೋಪಕರಣಗಳಿಗೆ ಮೀಸಲಿಡಲಾಗಿದೆ. ರಾಜ್ಯಾದ್ಯಂತ 2 ಲಕ್ಷ 25 ಸಾವಿರ ವೃದ್ಧ ರೈತರಿಗೆ ಪಿಂಚಣಿ ಸೌಲಭ್ಯವನ್ನು ನಮ್ಮ ಸಂಸ್ಥೆ ವತಿಯಿಂದ ಒದಗಿಸುತ್ತಿದ್ದೇವೆ. ಜಂಗಮಕೋಟೆ ಹೋಬಳಿಯಲ್ಲಿಯೂ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುತ್ತಿದ್ದೇವೆ’ ಎಂದು ಹೇಳಿದರು.
ಟ್ರಾಕ್ಟರ್, ಮಿನಿ ಟ್ರಾಕ್ಟರ್, ಟಿಲ್ಲರ್, ಡಿಸ್ಕ್, ಕಲ್ಟಿವೇಟರ್, ರಾಗಿ ಕ್ಲೀನಿಂಗ್ ಮಿಷಿನ್, ಪವರ್ ಸ್ಪ್ರೇಯರ್, ಯಂತ್ರಚಾಲಿತ ಬಿತ್ತನೆ ಕೂರಿಗೆ ಮುಂತಾದ ಬಾಡಿಗೆ ನೀಡುವ ಯಂತ್ರೋಪಕರಣಗಳನ್ನು ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿತ್ತು.
ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಕಾರ್ಯನಿರ್ವಾಹಣಾಧಿಕಾರಿ ಗಣಪತಿ ಸಾಕ್ರೆ, ಕೃಷಿ ಇಲಾಖೆ ಉಪನಿರ್ದೇಶಕ ಎಸ್.ಎಸ್.ಅಬೀದ್, ಸಹಾಯಕ ಕೃಷಿ ನಿರ್ದೇಶಕ ಬಿ.ಸಿ.ದೇವೇಗೌಡ, ರೇಷ್ಮೆ ಸಹಾಯಕ ನಿರ್ದೇಶಕ ಚಂದ್ರಪ್ಪ, ಆನಂದ್, ಗುಡಿಯಪ್ಪ, ಭಕ್ತರಹಳ್ಳಿ ಬೈರೇಗೌಡ, ಸೂರ್ಯನಾರಾಯಣಗೌಡ, ಎಚ್.ಎಂ.ಮುನಿಯಪ್ಪ, ಕೃಷ್ಣಪ್ಪ, ಜಯಣ್ಣ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಗೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!