ಜಾತ್ಯತೀತ ಹಾಲಂಬಿ ಸದಾ ಸ್ಮರಣೀಯರು. ಕೊನೆ ಉಸಿರುವವರೆಗೂ ಕನ್ನಡಪರ ಚಿಂತಕರಾಗಿ, ಕನ್ನಡಿಗರ ಸೇವೆಯೇ ನಿಜ ಕಾಯಕವೆಂದು ನಂಬಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಪುಂಡಲಿಕ ಹಾಲಂಬಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಹೇಳಿದರು.
ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಕ.ಸಾ.ಪ ವತಿಯಿಂದ ಸೋಮವಾರ ಸಂಜೆ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ‘ನಾನು ಸಾಹಿತಿ ಅಲ್ಲದಿದ್ದರೂ ಸಾಹಿತ್ಯದ ಪರಿಚಾರಕ. ಕವಿ ಜಿ.ಎಸ್.ಎಸ್ ಅವರಿಂದ ಕನ್ನಡ ದೀಕ್ಷೆ ಪಡೆದ ಶಿಷ್ಯ ನಾನು’ ಎಂದು ಹೆಮ್ಮೆಯಿಂದ ಹೇಳುತ್ತಿದ್ದ ಹಾಲಂಬಿ ಪಾರದರ್ಶಕವಾಗಿ ಆಡಳಿತ ನಡೆಸಿದ ಪ್ರಾಮಾಣಿಕರು. ಜಾತಿಯ ಸೋಂಕು ತಗುಲದಂತೆ ಮೂರು ವರ್ಷ ಕ.ಸಾ.ಪ ಚುಕ್ಕಾಣಿ ಹಿಡಿದು ಅದರ ಅಧ್ಯಕ್ಷರಾಗಿ ಜನಪರ ಕೆಲಸ ಮಾಡಿದ ಮಾದರಿ ವ್ಯಕ್ತಿ. ತಮ್ಮ ಕಿಡ್ನಿಗಳು ನಿಷ್ಕ್ರಿಯವಾಗಿದ್ದರೂ ಡಯಾಲಿಸಿಸ್ ಮಾಡಿಸಿಕೊಂಡೇ ಮೂರೂವರೆ ವರ್ಷ ಕ.ಸಾ.ಪ ಚಟುವಟಿಕೆಗಳನ್ನು ಜೀವಂತವಾಗಿಟ್ಟಿದ್ದರು. ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನು ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲೇ ಆಯ್ಕೆ ಮಾಡಿ ಪ್ರಜಾಪ್ರಭುತ್ವಕ್ಕೆ ತಲೆ ಬಾಗಿದ್ದರು. ಸಾಹಿತ್ಯಾಸಕ್ತರ ಮೆಚ್ಚುಗೆಗೂ ಅವರು ಪಾತ್ರರಾಗಿದ್ದರು ಎಂದು ಹೇಳಿದರು.
ನಮ್ಮ ತಾಲ್ಲೂಕಿನಲ್ಲಿ ಹಾಲಂಬಿಯವರ ಆದರ್ಶಗಳನ್ನು ಪರಿಪಾಲಿಸುತ್, ಉತ್ತಮವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರ ಆಶೋತ್ತರಗಳನ್ನು ಈಡೇರಿಸುವ ಮೂಲಕ ಅವರಿಗೆ ನಿಜವಾದ ಶ್ರದ್ಧಾಂಜಲಿಯನ್ನು ಅರ್ಪಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ.ಸಾ.ಪ ಮಾಜಿ ಜಿಲ್ಲಾ ಅಧ್ಯಕ್ಷ ಎಸ್.ವಿ.ನಾಗರಾಜರಾವ್, ಮಾಜಿ ತಾಲ್ಲೂಕು ಅಧ್ಯಕ್ಷರಾದ ರೂಪಸಿ ರಮೇಶ್, ವಿ.ಕೃಷ್ಣ, ಕೃ.ನಾ.ಶ್ರೀ, ರೈತಸಂಘದ ತಾಲ್ಲೂಕು ಅಧ್ಯಕ್ಷ ರವಿಕುಮಾರ್, ನಾರಾಯಣ ಕುಲಕರ್ಣಿ, ಕೆ.ಮಂಜುನಾಥ್ ಪುಂಡಲಿಕ ಹಾಲಂಬಿ ಅವರ ಕುರಿತು ಮಾತನಾಡಿದರು.
ಕ.ಸಾ.ಪ ಸದಸ್ಯರಾದ ಅಪ್ಪೇಗೌಡನಹಳ್ಳಿ ತ್ಯಾಗರಾಜ್, ಭಾಸ್ಕರ್, ಜೆ.ಎಸ್.ವೆಂಕಟಸ್ವಾಮಿ, ಭಕ್ತರಹಳ್ಳಿ ಪ್ರತೀಶ್, ಕನ್ನಮಂಗಲ ಚಿಕ್ಕಾಂಜಿನಪ್ಪ, ಚಿಕ್ಕವೆಂಕಟರಾಯಪ್ಪ, ಮಾಧವರಾವ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -