21.1 C
Sidlaghatta
Thursday, July 31, 2025

ಗಾಂಧೀಜಿಯವರ 150ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ 115ನೇ ಜನ್ಮದಿನಾಚರಣೆ

- Advertisement -
- Advertisement -

ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಬುಧವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ೧೫೦ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ೧೧೫ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಗಾಂಧೀಜಿ ಮತ್ತು ಶಾಸ್ತ್ರೀಜಿಯವರಿಂದ ನಾವು ಕಲಿಯಬೇಕಾದದ್ದು ಸರಳತೆ, ಸತ್ಯ, ನಮ್ಮ ಕೆಲಸ ನಾವೇ ಮಾಡುವುದು, ಸ್ವಚ್ಛತೆ, ಪಾರದರ್ಶಕತೆ, ಸಮಾಜಕ್ಕಾಗಿ ಸರ್ವಸ್ವ ತ್ಯಾಗ ಮಾಡುವ ಗುಣಗಳು ಎಂದು ಅವರು ತಿಳಿಸಿದರು.
ಹೇಳಿದ್ದನ್ನೇ ಮಾಡುವುದು, ಮಾಡಿದ್ದನ್ನೇ ಹೇಳುವುದು, ಈ ಒಂದು ವಿಶೇಷ ಗುಣದಿಂದ ಗಾಂಧಿ ಮತ್ತು ಶಾಸ್ತ್ರಿಗಳು ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ಶೀಲವಿಲ್ಲದ ಶಿಕ್ಷಣ ತಪ್ಪು ಎಂದು ಅವರು ಭಾವಿಸಿದ್ದರು. ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರು ನಂಬಿದ್ದ ಜೀವನ ಮೌಲ್ಯಗಳು ಸಾರ್ವಕಾಲಿಕವಾದದ್ದು ಎಂದರು.
ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿ, ಶಿಕ್ಷಣದ ಜೊತೆಗೆ ಮಕ್ಕಳಿಗೆ ವಿವಿಧ ರಂಗಗಳ ತರಬೇತಿ ಕೊಡುವುದು, ಸರ್ವಾಂಗೀಣ ಪ್ರಗತಿಯತ್ತ ಮಕ್ಕಳನ್ನು ಕೊಂಡೊಯ್ಯುವುದು ಅತ್ಯಗತ್ಯ ಎಂದು ಗಾಂಧೀಜಿ ನಂಬಿದ್ದರು. ಭಾರತ ನಿಜವಾಗಿಯೂ ಹಳ್ಳಿಗಳ ದೇಶ. ಭಾರತದ ನಿಜವಾದ ಶಕ್ತಿ ಹಳ್ಳಿಯಲ್ಲಿದೆ. ಪ್ರತಿ ಹಳ್ಳಿಯ ಜನರಿಗೂ ಆರೋಗ್ಯ, ಶಿಕ್ಷಣ ಸಿಗಬೇಕು, ನೈರ್ಮಲ್ಯತೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂಬುದು ಅವರ ಕನಸಾಗಿತ್ತು ಎಂದರು.
ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್ ಮಾತನಾಡಿ, ಗಾಂಧಿ ಸರಳತೆ ಇಂದು ಹಾಸ್ಯಾಸ್ಪದ ವಿಷಯವಾಗಿದೆ. ಉದಾತ್ತ ಚಿಂತನೆಯಲ್ಲಿ ಹೆಚ್ಚು ಪ್ರಾಮುಖ್ಯತೆ ಇದೆಯೆ ಹೊರತು, ಆಡಂಬರದ ಜೀವನದಲ್ಲಿ ಅಲ್ಲ ಎಂದು ಅವರು ಪ್ರತಿಪಾದಿಸುತ್ತಿದ್ದರು. ಗಾಂಧಿಯವರದು ನೂರಕ್ಕೆ ನೂರರಷ್ಟು ಆದರ್ಶಮಯ ಬದುಕು. ಅವರ ಎತ್ತರಕ್ಕೆ ಮುಟ್ಟಲಾಗುವುದಿಲ್ಲ. ಆದರೆ ಅವರ ಕಲ್ಪನೆಗಳಾದ ಸತ್ಯ, ಅಹಿಂಸೆ ಮತ್ತು ಕರ್ಮವನ್ನು ಕುರಿತು ಚಿಂತಿಸಿದರೆ ಆಗುವ ಪ್ರಯೋಜನಗಳು ಹಲವಾರು. ಗಾಂಧಿಯವರು ಹೇಳಿದ ಸ್ವಕರ್ಮ ಮತ್ತು ಸ್ವಾವಲಂಬನೆಯನ್ನ್ನು ಅನುಷ್ಠಾನಕ್ಕೆ ತಂದರೆ, ದೇಶ ರಾಮರಾಜ್ಯವಾಗುತ್ತದೆ ಎಂದರು.
ಮುಖ್ಯಭಾಷಣಕಾರರಾದ ಡಾ.ರಾಮಯ್ಯ, ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಜೀವನ ಸಾಧನೆ ಬದುಕಿನ ಬಗ್ಗೆ ವಿವರವಾಗಿ ತಿಳಿಸಿದರು. ಕಾರ್ಯಕ್ರಮದ ಮುನ್ನ ತಾಲ್ಲೂಕು ಕಚೇರಿ ಆವರಣದಲ್ಲಿ ಗಣ್ಯರು ಗಿಡವನ್ನು ನೆಟ್ಟರು. ಭಗವದ್ಗೀತೆ, ಬೈಬಲ್ ಮತ್ತು ಕುರಾನ್ ಪಠಣ ಮಾಡಲಾಯಿತು. ಪ್ಲಾಸ್ಟಿಕ್ ಬಳಕೆ ತ್ಯಜಿಸುವ ಮತ್ತು ತ್ಯಾಜ್ಯ ನಿರ್ಮೂಲನೆಗೆ ಸಹಕರಿಸುವ ಬಗ್ಗೆ ಕಾರ್ಯಕ್ರಮದಲ್ಲಿದ್ದವರಿಗೆಲ್ಲಾ ಪ್ರತಿಜ್ಞಾ ವಿಧಿ ಭೋದಿಸಲಾಯಿತು.
ನಗರಸಭೆ ಪೌರಾಯುಕ್ತ ಶ್ರೀಕಾಂತ್, ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಸರ್ಕಲ್ ಇನ್ಸ್ ಪೆಕ್ಟರ್ ಆನಂದ್, ನಗರಸಭೆ ಸದಸ್ಯರಾದ ಮಂಜುನಾಥ್, ಅನಿಲ್ ಕುಮಾರ್, ಮಂಜುನಾಥ್ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!