ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗ್ರಾಮ ಪಂಚಾಯಿತಿ ನೌಕರರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರದಿಂದ ಟಿ.ಬಿ.ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂದೆ ಪತ್ರಿಭಟನೆ ನಡೆಸಿ ನಂತರ ಮನವಿ ಪತ್ರವನ್ನು ಸಲ್ಲಿಸಿದರು. ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ ನೌಕರರಿಗೆ ಆವರಣದಲ್ಲೇ ಅಡುಗೆ ಮಾಡಿ ಬಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸುದರ್ಶನ್, ‘ಪಂಚತಂತ್ರಾಂಶದಲ್ಲಿ ಸಿಬ್ಬಂದಿಗಳನ್ನು ಸೇರಿಸಿ ಬೇಗ ವೇತನ ಸಿಗುವಂತೆ ಮಾಡಬೇಕು. ಅನುಮೋದನೆಯಾಗದೆ ಇರುವ ಸಿಬ್ಬಂದಿಯನ್ನು ಶೀಘ್ರವಾಗಿ ಅನುಮೋದನೆ ಮಾಡಬೇಕು. ನಿವೃತ್ತಿ ವೇತನ ನೀಡಬೇಕು. ಬಿಲ್ ಕಲೆಕ್ಟರ್ ಮತ್ತು ಕಂಪ್ಯೂಟರ್ ಆಪರೇಟರ್ ಸಿಬ್ಬಂದಿಗಳಿಗೆ ಬಡ್ತಿ ಹುದ್ದೆಗಳನ್ನು ನೀಡಬೇಕು. ಗ್ರಾಮ ಪಂಚಾಯಿತಿ ನೌಕರರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಕೆ.ಎನ್.ಪಾಪಣ್ಣ ಮಾತನಾಡಿ, ‘ವಿನಾಕಾರಣ ಕೆಲಸದಿಂದ ತೆಗೆದಿರುವ ಗ್ರಾಮ ಪಂಚಾಯಿತಿ ನೌಕರರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಂಡು ಪಂಚತಂತ್ರಾಶದಲ್ಲಿ ಅನುಮೋದನೆ ನೀಡಬೇಕು. ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಸುಮಾರು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ವೇತನವನ್ನು ಅವರವರ ಖಾತೆಗಳಿಗೆ ಜಮಾ ಮಾಡಬೇಕು’ ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ನೌಕರರ ಸಂಘದ ಉಪಾಧ್ಯಕ್ಷ ಶಂಕರಪ್ಪ, ಜನಾರ್ದನ್, ವೇಣುಗೋಪಾಲ್, ದೇವಪ್ಪ, ಶಿವಕುಮಾರ್, ಗಂಗಪ್ಪ, ಶ್ರೀನಿವಾಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







