ಚುನಾವಣೆ ನೀತಿ ಸಂಹಿತೆ ಜಾರಿಯಿರುವ ಹಿನ್ನಲೆಯಲ್ಲಿ ನಗರದಲ್ಲಿ ನಡೆಯಲಿರುವ ವಿವಿಧ ಕರಗ ಮಹೋತ್ಸವ ಸಮಾರಂಭಗಳಲ್ಲಿ ವಾದ್ಯಗೋಷ್ಠಿ ಹಾಗೂ ಪ್ರಸಾದ ವಿತರಣೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ತಹಶೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಶ್ರೀ ಪೂಜಮ್ಮ ದೇವಿ ಭಕ್ತಮಂಡಳಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಈಗಾಗಲೇ ಲೋಕಸಭೆ ಚುನಾವಣೆಯ ನೀತಿಸಂಹಿತೆ ಜಾರಿಯಾಗಿರುವುದರಿಂದ ಯಾವುದೇ ಜಾತ್ರೆ, ಕರಗ ಮಹೋತ್ಸವಗಳಿಗೆ ವಾದ್ಯಘೋಷ್ಠಿ ಏರ್ಪಡಿಸಲು ಅನುಮತಿ ನೀಡಲಾಗುವುದಿಲ್ಲ. ವೇದಿಕೆ ನಿರ್ಮಿಸಿ ವಿವಿಧ ರಾಜಕಾರಣಿಗಳನ್ನು ಆಹ್ವಾನಿಸಿ ಅವರಿಗೆ ಸನ್ಮಾನ ಮತ್ತು ಅವರಿಂದ ಭಾಷಣ ಮಾಡಿಸಿದರೆ, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗುವುದು. ಆ ಖರ್ಚು ವೆಚ್ಚಗಳನ್ನು ಅಭ್ಯರ್ಥಿಯ ಖಾತೆಗೆ ಸೇರಿಸಲಾಗುವುದು. ಹಾಗಾಗಿ ಕರಗ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳನ್ನು ಸಮಯಕ್ಕೆ ಸರಿಯಾಗಿ ಸರಳವಾಗಿ ಆಚರಿಸುವ ಮೂಲಕ ಚುನಾವಣೆ ನೀತಿಸಂಹಿತೆ ಉಲ್ಲಂಘನೆಯಾಗದಂತೆ ನಡೆಸಲು ಜನತೆ ಸಹಕರಿಸಬೇಕು. ಈಚೆಗೆ ನೆರೆಯ ಚಿಂತಾಮಣಿಯಲ್ಲಿ ನಡೆದ ಪ್ರಸಾದ ದುರಂತದ ಹಿನ್ನಲೆಯಲ್ಲಿ ಯಾರೊಬ್ಬರೂ ಪ್ರಸಾದ ಹಂಚಿಕೆ ಮಾಡಬಾರದು ಎಂದರು.
ಸರ್ಕಲ್ ಇನ್ಸ್ ಪೆಕ್ಟರ್ ಜಿ.ಎನ್.ಆನಂದಕುಮಾರ್ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಸಭೆ ಸಮಾರಂಭಗಳು ಮಾಡಬೇಕಾದಲ್ಲಿ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಸಭೆ ನಡೆಸಲು ಅನುಮತಿ ನೀಡಲಾಗುವುದಿಲ್ಲ. ಮೈಕ್ ಬಳಸಲು ಬೆಳಗ್ಗೆ ೬ ರಿಂದ ರಾತ್ರಿ ೧೦ ಗಂಟೆಯವರೆಗೂ ಮಾತ್ರ ಅನುಮತಿ ನೀಡಲಾಗುತ್ತದೆ. ಹಾಗಾಗಿ ಧಾರ್ಮಿಕ ಕಾರ್ಯಗಳನ್ನು ನಿಗದಿತ ಸಮಯದೊಳಗೆ ಶಾಂತಿಯುತವಾಗಿ ಮುಗಿಸಲು ಜನತೆ ಪೊಲೀಸರೊಂದಿಗೆ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಜಿ.ಎನ್.ಚಲಪತಿ, ನಗರಠಾಣೆ ಪಿಎಸ್ಸೈ ಅವಿನಾಶ್‌ವೀರ್, ಮುಖಂಡರಾದ ಚಿಕ್ಕಮುನಿಯಪ್ಪ, ಎಸ್.ಎಂ.ರಮೇಶ್, ಮುನಿನರಸಿಂಹ, ಕೃಷ್ಣಮೂರ್ತಿ ಹಾಜರಿದ್ದರು.
- Advertisement -
- Advertisement -
- Advertisement -