21.1 C
Sidlaghatta
Thursday, July 31, 2025

ಜಿಎಸ್‌ಟಿ ಯಿಂದಾಗಿ ಅಳಿವು ಉಳಿವಿನ ಹಂತದಲ್ಲಿರುವ ರೇಷ್ಮೆ ಬೆಳೆಗಾರ

- Advertisement -
- Advertisement -

ಈಗಾಗಲೇ ರೇಷ್ಮೆ ಗೂಡಿನ ಬೆಲೆ ಸಾಲದು, ನಷ್ಟ ಹೊಂದುತ್ತಿದ್ದೇವೆ ಎಂದು ಬೆಂಬಲ ಬೆಲೆಗಾಗಿ ರೇಷ್ಮೆ ಬೆಳೆಗಾರರು ಒಂದೆಡೆ ಹೋರಾಡುತ್ತಿದ್ದರೆ ಗಾಯದ ಮೇಲೆ ಬರೆ ಎಳೆದಂತೆ ಜಿಎಸ್‌ಟಿ ಮೂಲಕ ಇನ್ನಷ್ಟು ರೇಷ್ಮೆ ಗೂಡಿನ ಬೆಲೆ ಕುಸಿಯುವ ಆತಂಕದಲ್ಲಿ ರೇಷ್ಮೆ ಬೆಳೆಗಾರರು ಇರುವುದಾಗಿ ಅಖಿಲ ಭಾರತ ಸುಂಕ ರಹಿತ ರೇಷ್ಮೆ ಆಮದು ವಿರೋಧಿ ಹೋರಾಟ ಸಮಿತಿ ಸಂಚಾಲಕ, ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಳ್ಳೂರು ಶಿವಣ್ಣ ತಿಳಿಸಿದರು.
ಐದು ರಾಜ್ಯಗಳ ರೇಷ್ಮೆ ಬೆಳೆಗಾರರ ನಿಯೋಗದೊಂದಿಗೆ ದೆಹಲಿಯಲ್ಲಿ ವಿವಿಧ ಸಚಿವರನ್ನು ಭೇಟಿಯಾಗಿ ಜಿಎಸ್‌ಟಿಯ ಅಡ್ಡಪರಿಣಾಮದಿಂದ ರೇಷ್ಮೆ ಬೆಳೆಗಾರರಿಗೆ ಆಗುತ್ತಿರುವ ನಷ್ಟವನ್ನು ವಿವರಿಸಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಹಿಂದಿರುಗಿದ ಅವರು ಮಾತನಾಡಿದರು.
ದೇಶಾದ್ಯಂತ ಪ್ರತಿ ದಿನ ರೈತರು ಸುಮಾರು 12 ಕೋಟಿ ರೂಗಳಷ್ಟು ರೇಷ್ಮೆ ಗೂಡನ್ನು ಬೆಳೆದು ತಂದು ಮಾರಾಟ ಮಾಡುತ್ತಿದ್ದಾರೆ. ರೇಷ್ಮೆ ಗೂಡಿನ ಮಾರುಕಟ್ಟೆಗಳಲ್ಲಿ ರೈತರು ರೇಷ್ಮೆ ಗೂಡನ್ನು ಮಾರುವಾಗ ತಮ್ಮ ಅಭಿವೃದ್ಧಿಗಾಗಿ ಪಿಎಸ್‌ಎಫ್‌ಎ ಫಂಡ್‌ ಎಂದು ಶೇ.1 ರಷ್ಟು ಹಣವನ್ನು ಕಟ್ಟುತ್ತಿದ್ದಾರೆ. ಅದೇ ರೀತಿ ಕೊಳ್ಳುವ ರೀಲರುಗಳೂ ಸಹ ಶೇ.1 ರಷ್ಟು ಹಣವನ್ನು ಕಟ್ಟುತ್ತಾರೆ. ಆದರೆ ರೇಷ್ಮೆ ಉದ್ದಿಮೆಯಲ್ಲಿ ಸುಂಕವನ್ನು ಮೊದಲಿನಿಂದಲೂ ಕಟ್ಟಿಲ್ಲ. ರೇಷ್ಮೆ ವಾಣಿಜ್ಯ ಬೆಳೆಯಾದರೂ ಇದನ್ನು ಗುಡಿ ಕೈಗಾರಿಕೆಯೆಂದು ಪರಿಗಣಿಸಲಾಗಿತ್ತು.
ದೇಶದ ರೇಷ್ಮೆ ಉತ್ಪಾದನೆಯಲ್ಲಿ ನಮ್ಮ ರಾಜ್ಯದ ಪಾಲು ಶೇ.60 ರಷ್ಟಿದೆ. ರಾಜ್ಯದ ರೈತರು ಒಂದು ಲಕ್ಷ ಇಪ್ಪತ್ತೈದು ಸಾವಿರ ಕೋಟಿ ರೂಗಳ ಬಂಡವಾಳವನ್ನು ಹೂಡಿದ್ದಾರೆ. ಲಾಭ ನಷ್ಟಗಳೊಂದಿಗೆ ರೈತರು ರೇಷ್ಮೆಯನ್ನು ನಂಬಿದ್ದರು.
ಈಗ ಹೊಸದಾಗಿ ಬಂದಿರುವ ಸರಕು ಮತ್ತು ಸೇವಾ ತೆರಿಗೆಯ ಅನ್ವಯ ರೈತರ ಗೂಡಿನ ನಂತರದ ಚಟುವಟಿಕೆಗಳಾದ ನೂಲು ಬಿಚ್ಚಾಣಿಕೆ, ಹುರಿ ಮಾಡುವುದು, ಬಣ್ಣ ಹಚ್ಚುವುದು, ಬಟ್ಟೆ ಮಾಡುವುದು, ಪಾಲಿಷ್‌ ಮಾಡುವುದು ಮುಂತಾದ ಪ್ರತಿಯೊಂದು ಹಂತದಲ್ಲೂ ಶೇ.5 ರಷ್ಟು ಸರಕು ಮತ್ತು ಸೇವಾ ತೆರಿಗೆ ಬೀಳಲಿದೆ. ಪ್ರತಿ ಹಂತದಲ್ಲೂ ತೆರಿಗೆ ಬೀಳುವುದರಿಂದ ಪ್ರತಿಯೊಂದು ಹಂತದವರೂ ತಾವು ಕೊಳ್ಳುವಾಗ ಅಷ್ಟರ ಮಟ್ಟಿಗೆ ಕಡಿಮೆ ಹಣಕ್ಕೆ ಕೊಳ್ಳುತ್ತಾರೆ. ಈ ಒಟ್ಟಾರೆ ಪ್ರಕ್ರಿಯೆಯಲ್ಲಿ ಕೊನೆಗೆ ತೊಂದರೆಗೊಳಗಾಗುವವನು ರೇಷ್ಮೆ ಗೂಡು ಬೆಳೆಯುವ ರೈತ. ಏಕೆಂದರೆ ಈ ಎಲ್ಲಾ ತೆರಿಗೆಗಳ ಕಾರಣದಿಂದ ಕಡಿಮೆ ಬೆಲೆಗೆ ಗೂಡನ್ನು ಕೊಳ್ಳುತ್ತಾರೆ. ಒಟ್ಟಾರೆ ಸಾರಾಂಶದಂತೆ ಎಲ್ಲರ ತೆರಿಗೆಗಳನ್ನು ರೇಷ್ಮೆ ಬೆಳೆಗಾರ ಭರಿಸಬೇಕಾಗುತ್ತದೆ.
550ರೂ ರಿಂದ 600 ರೂಗಳವರೆಗೆ ಒಂದು ಕೆಜಿ ಬೈವೋಲ್ಟೀನ್‌ ರೇಷ್ಮೆ ಗೂಡಿನ ಬೆಲೆ ಇತ್ತು. ಸಿಬಿ ಗೂಡು ಒಂದು ಕೆಜಿಗೆ 350 ರೂಗಳಿಂದ 500 ರೂವರೆಗಿತ್ತು. ಜಿಎಸ್‌ಟಿ ಯ ಕಾರಣ ಒಂದು ಕೆಜಿ ಗೂಡಿಗೆ 200 ರೂ ಸಿಗುವುದು ಕಷ್ಟವಾಗಲಿದೆ.
ಕೇಂದ್ರದ ಸಚಿವೆ ಸ್ಮೃತಿ ಇರಾನಿ ಅವರು ನಮ್ಮ ಜಿಲ್ಲೆಗೆ ಭೇಟಿ ನೀಡಿದ್ದಾಗ ರೇಷ್ಮೆಯನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗುಳಿಸಬೇಕೆಂದು ಮನವಿ ಸಲ್ಲಿಸಿದ್ದೆವು. ಅದಕ್ಕೂ ಹಿಂದೆ ಸಚಿವೆ ನಿರ್ಮಲಾ ಸೀತಾರಾಮ್‌ ಅವರ ಗಮನಕ್ಕೂ ಈ ವಿಷಯವನ್ನು ತಂದಿದ್ದೆವು. ಆದರೆ ಈಗಾಗಲೇ ರೇಷ್ಮೆ ಬೆಳೆಗಾರರನ್ನು ಹೊರತುಪಡಿಸಿ ಉಳಿದ ಹಂತದವರಿಗೆ ಜಿಎಸ್‌ಟಿ ವಿಧಿಸಿದ್ದು, ಅದು ರೇಷ್ಮೆ ಬೆಳೆಗಾರರಿಗೆ ತೊಂದರೆಯಾಗಿದೆ.
ಆಂಧ್ರ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಪರವಾಗಿ ನಾನು ಒಟ್ಟು ಐದು ಮಂದಿ ರೇಷ್ಮೆ ಬೆಳೆಗಾರ ಮುಖಂಡರು ದೆಹಲಿಗೆ ತೆರಳಿ ಪ್ರಧಾನ ಮಂತ್ರಿ, ಹಣಕಾಸು, ಕೃಷಿ, ವಾಣಿಜ್ಯ, ವಿದೇಶಾಂಗ ಸಚಿವ ಮುಂತಾದವರನ್ನು ಭೇಟಿ ಮಾಡಿ ಜಿಎಸ್‌ಟಿಯು ರೇಷ್ಮೆ ಬೆಳೆಗಾರರಿಗೆ ತಿರುಗು ಬಾಣವಾಗಿರುವುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ರೇಷ್ಮೆ ಬೆಳೆಗಾರರಿಗೆ ಪ್ರತಿ ಒಂದು ಕೆಜಿ ಗೂಡಿಗೆ ಸುಮಾರು 150 ರೂಗಳಷ್ಟು ನಷ್ಟವಾಗುತ್ತಿದೆ. ರೇಷ್ಮೆ ಬೆಳೆಗಾರರನ್ನು ಉಳಿಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಾವು ನಮ್ಮ ನಿಯೋಗದಿಂದ ಮನವಿಯನ್ನು ಸಲ್ಲಿಸಿದ್ದೇವೆ.
ಕೇಂದ್ರ ಸರ್ಕಾರ ರೇಷ್ಮೆ ಬೆಳೆಗಾರರಿಗೆ ಅನುಕೂಲ ಮಾಡಿಕೊಡದಿದ್ದಲ್ಲಿ ನಮಗೆ ಅಳಿವು ಉಳಿವಿನ ಪ್ರಶ್ನೆ ಎದುರಾಗಿ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!