21.1 C
Sidlaghatta
Thursday, July 31, 2025

ಜೆಡಿಎಸ್ ಕಾರ್ಯಕರ್ತರ ಸಭೆ – ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿರಲು ನಿರ್ಧಾರ

- Advertisement -
- Advertisement -

ತಾಲ್ಲೂಕಿನ ವರದನಾಯಕನಹಳ್ಳಿಯ ಪಟಾಲಮ್ಮ ದೇವಾಲಯದ ಆವರಣದಲ್ಲಿ ಸೋಮವಾರ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ, ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಒಕ್ಕೊರಲಿನಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರನ್ನು ಬೆಂಬಲಿಸಲು ತೀರ್ಮಾನಿಸಲಾಯಿತು.
“ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆದೇಶ ಪಾಲಿಸುವುದು ನಮ್ಮ ಕರ್ತವ್ಯ. ಅವರ ಸೂಚನೆಯಂತೆ ನಮ್ಮ ತಾಲ್ಲೂಕಿನವರೇ ಆದ ಕೆ.ಎಚ್.ಮುನಿಯಪ್ಪ ಅವರನ್ನು ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕಿದೆ. ಕಾಂಗ್ರೆಸ್ ಅನ್ನು ಇಷ್ಟು ದಿನ ವಿರೋಧಿಸಿದ್ದವರು ನಾವು. ಆದರೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಜನಹಿತವನ್ನು ಉದ್ದೇಶವಿಟ್ಟುಕೊಂಡು ಹಿರಿಯರು ಮಾಡಿದ ತೀರ್ಮಾನಕ್ಕೆ ನಾವು ಬದ್ಧರಾಗಿರಬೇಕು. ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ನನ್ನ ಮರ್ಯಾದೆಯನ್ನು ಉಳಿಸಿ” ಎಂದು ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
“ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಬಡವರು ತಮ್ಮ ಖಾತೆಗೆ ಹಾಣ ಹಾಕಿ ಎಂದಿರಲಿಲ್ಲ, ಆದರೆ ಅವರೇ ಹೊರದೇಶದಿಂದ ಕಪ್ಪು ಹಣ ತಂದು ಬಡವರ ಖಾತೆಗೆ ಸುರಿಯುತ್ತೇನೆಂದಿದ್ದರು. ನದಿ ಜೋಡಣೆ ಮಾಡುತ್ತೇನೆಂದಿದ್ದರು. ಶ್ರೀರಾಮ ಮಂದಿರ ನಿರ್ಮಾಣ ಬಿಜೆಪಿ ಚುನಾವಣಾ ಅಜೆಂಡಾ ಆಗಿದೆ. “ಹಿಂದುತ್ವ”ವನ್ನು ಜನರ ಮನಸ್ಸಿನಲ್ಲಿ ಹುಟ್ಟಾಕಿ ಹಿಟ್ಲರ್ ಆಡಳಿತ ನಡೆಸಿದ್ದಾರೆ. ದೇಶದ ಬಡವರ ಮೇಲೆ ಅವರಿಗೆ ನಿಜವಾದ ಕಳಕಳಿ ಇದ್ದರೆ, ರೈತರೊಂದಿಗೆ ಸಂವಾದಿಸಲಿ. ಅದನ್ನು ಬಿಟ್ಟು ಅವರು ಕಾರ್ಪೊರೇಟ್ ಕಂಪೆನಿಯವರೊಂದಿಗೆ ಸಂವಾದಿಸುತ್ತಾರೆ. ಮೋದಿಯವರ ಆಡಳಿತದ ವಿರುದ್ಧ ಹೋರಾಡಲು ಮಹಾಘಟಬಂಧನ್ ಮೂಲಕ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಸಮರ್ಥರಾಗಿದ್ದಾರೆ” ಎಂದು ನುಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, “ನಾವು ಕಾಂಗ್ರೆಸ್ ಗೆ ಮತ ನೀಡುತ್ತಿಲ್ಲ. ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಗೆ ಮತ ಕೊಡುತ್ತಿದ್ದೇವೆ. ಬಿ.ಎನ್.ರವಿಕುಮಾರ್, ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೋಸ್ಕರ ಮತನೀಡುತ್ತೇವೆ. ನಮ್ಮ ಶಕ್ತಿ ತೋರಿಸುವ ಮೂಲಕ ಹಿರಿಯರ ಆದೇಶ ಮತ್ತು ಆದರ್ಶ ಪಾಲನೆಯನ್ನು ಮಾಡುವುದನ್ನು ತೋರಿಸಿಕೊಡಬೇಕಿದೆ. ನಮ್ಮ ನಾಯಕರಾದ ಬಿ.ಎನ್.ರವಿಕುಮಾರ್ ಅವರಿಗೆ ಗೌರವ ತಂದುಕೊಡುವ ಕೆಲಸವನ್ನು ಮಾಡುವುದಾಗಿ ಕಾರ್ಯಕರ್ತರ ಪರವಾಗಿ ಭರವಸೆ ನೀಡುತ್ತೇನೆ” ಎಂದು ಹೇಳಿದರು.
ಜಾಮಿಯಾ ಮಸೀದಿ ಕಾರ್ಯದರ್ಶಿ ಹೈದರಾಲಿ ಮಾತನಾಡಿ, ಬಿ.ಜೆ.ಪಿ ಪಕ್ಷವನ್ನು ಸೋಲಿಸುವುದು ಹಾಗೂ ಬಿ.ಎನ್.ರವಿಕುಮಾರ್ ಅವರನ್ನು ಬೆಂಬಲಿಸುವ ಉದ್ದೇಶದಿಂದ ಕೆ.ಎಚ್.ಮುನಿಯಪ್ಪ ಅವರಿಗೆ ಮತನೀಡುವುದಾಗಿ ಘೋಷಿಸಿದರು.
ನಂದನವನಂ ಶ್ರೀರಾಮರೆಡ್ಡಿ ಮಾತನಾಡಿ, ಸಮ್ಮಿಶ್ರ ಸರ್ಕಾರವಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರಿಗಾಗಿ, ಬಡವರಿಗಾಗಿ ಹಲವು ಯೋಜನೆಗಳನ್ನು ರೂಪಿಸಲು ಯಶಸ್ವಿಯಾಗಿದ್ದಾರೆ. ಹೊಂದಾಣಿಕೆ ಮಾಡಿಕೊಂಡು ವಿರೋಧಿಗಳ ತಂತ್ರಗಾರಿಕೆಯ ನಡುವೆಯೂ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಪಕ್ಷದ ಹಿರಿಯರ ಸೂಚನೆಯ ಮೇರೆಗೆ ನಮ್ಮ ಮತವನ್ನು ಚಲಯಿಸಬೇಕಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮುಂದುವರೆಯಬೇಕು ಮತ್ತು ಕ್ಷೇತ್ರದಲ್ಲಿ ಬಿ.ಎನ್.ರವಿಕುಮಾರ್ ಅವರನ್ನು ಬೆಂಬಲಿಸಬೇಕು ಅದಕ್ಕಾಗಿ ನಮ್ಮ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಎಂದು ಹೇಳಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಬಿ.ವೆಂಕಟೇಶ್, ಮುಖಂಡರಾದ ಆದಿಲ್ ಪಾಷ, ಹುಜಗೂರು ಎಂ.ರಾಮಣ್ಣ, ಮುತ್ತೂರು ಕೆಂಪೇಗೌಡ, ಜೆ.ವಿ.ಸದಾಶಿವ, ಸಲೀಂ ಅಹಮದ್, ಹೊಸಪೇಟೆ ಶಶಿಕುಮಾರ್, ಕದಿರಿ ಯೂಸುಫ್, ಎಂ.ವಿ.ಗೋಪಾಲಪ್ಪ, ಕೆ.ಲಕ್ಷ್ಮೀನಾರಾಯಣರೆಡ್ಡಿ, ರಾಜಶೇಖರ್, ಆರ್.ಎ.ಉಮೇಶ್, ಅಮೀರ್ ಜಾನ್, ತಾದೂರು ರಘು, ಮುಗಿಲಡಿಪಿ ನಂಜಪ್ಪ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!