ಸಂಪತ್ತಿಗೆ ಸೊಕ್ಕಬೇಡಿ, ಸಿರಿ ಬಂದ ಕಾಲಕ್ಕೆ ಮೈಮರೆತು ಹಿಗ್ಗದೇ, ದಾನಧರ್ಮ ಮಾಡುವುದರ ಮೂಲಕ ದಾನಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಸಾರಿದ ದಾನಚಿಂತಾಮಣಿ ಹೇಮರೆಡ್ಡಿ ಮಲ್ಲಮ್ಮ ಬದುಕು ಆದರ್ಶವಾದುದು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರು ೫೦೦ ವರ್ಷಗಳ ಹಿಂದೆ ಶ್ರೀಶೈಲದ ಸಮೀಪ ಶರಣೆಯಾಗಿ ಜೀವಿಸಿದ್ದವಳು ಹೇಮರೆಡ್ಡಿ ಮಲ್ಲಮ್ಮ. ಶ್ರೀಶೈಲದ ದಕ್ಷಿಣಕ್ಕಿರುವ ವೆಲ್ಲಟೂರು ಜಿಲ್ಲೆಗೆ ಸೇರಿದ ರಾಮಪುರದ ರಾಮರೆಡ್ಡಿ- ಗೌರಮ್ಮ ದಂಪತಿಗಳಿಗೆ ಶ್ರೀಶೈಲ ಚನ್ನಮಲ್ಲಿಕಾರ್ಜುನನ ಕೃಪೆಯಿಂದ ಜನಿಸಿದ ಮಗಳು ಹೇಮರೆಡ್ಡಿ ಮಲ್ಲಮ್ಮ. ಈಕೆ ಬಾಲ್ಯದಿಂದಲೂ ಶ್ರೀಶೈಲ ಚನ್ನಮಲ್ಲಿಕಾರ್ಜುನನನ್ನೇ ಆರಾಧ್ಯ ದೈವವೆಂದು ಪರಿಭಾವಿಸಿ, ಕಡೆಯಲ್ಲಿ ದೇವರನ್ನೇ ಸಾಕ್ಷಾತ್ಕರಿಸಿಕೊಂಡವಳು. ಈಕೆಯ ಬಾಳು ಪವಿತ್ರ ಮೌಲ್ಯಗಳ, ಆದರ್ಶದ, ಅತ್ಯಮೂಲ್ಯ ಕಣಜವಾಗಿದೆ ಎಂದು ಹೇಳಿದರು.
ಬಸವೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿ, ಶಿವಶರಣರು ಹೇಗೆ ಬದುಕಬೇಕೆಂದು ತಿಳಿಸಿಕೊಟ್ಟಿದ್ದಾರೆ. ಅವರ ಬದುಕು, ಬರಹ ಶಾಶ್ವತವಾದುದು. ಅವರನ್ನು ಈಗಿನವರು ಮರೆಯಬಾರದು, ಅವರ ಆದರ್ಶಗಳನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಅವರ ಜಯಂತ್ಯುತ್ಸವವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಗ್ರೇಡ್ 2 ತಹಶೀಲ್ದಾರ್ ಮುನಿಕೃಷ್ಣಪ್ಪ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







