ರೇಷ್ಮೆ ಬೆಳೆಗಾರರು ನೂತನ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ಉತ್ತಮ ಗುಣಮಟ್ಟದ ರೇಷ್ಮೆಯನ್ನು ಉತ್ಪಾದನೆ ಮಾಡುವತ್ತ ಗಮನಹರಿಸಬೇಕು ಎಂದು ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ ತಿಳಿಸಿದರು.
ನಗರದ ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿ ಗ್ರೇನೇಜ್ನಲ್ಲಿ ಶನಿವಾರ ಆತ್ಮ ಯೋಜನೆಯಡಿಯಲ್ಲಿ ‘ರೇಷ್ಮೆ ಬೆಳೆಗಾರರಿಗೆ ಮಳೆಯಾಶ್ರಯದಲ್ಲಿ ಮರಗಡ್ಡಿ ವಿಧಾನದಲ್ಲಿ ಹಿಪ್ಪುನೇರಳೆ ಬೆಳೆಸುವ ಬಗ್ಗೆ ಮತ್ತು ದ್ವಿತಳಿ ಹುಳು ಸಾಕಾಣಿಕೆ’ ಬಗ್ಗೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರು ತೀವ್ರ ಸಂಕಷ್ಟದ ಪರಿಸ್ಥಿತಿಯಲ್ಲಿ ರೇಷ್ಮೆಬೆಳೆಗಳನ್ನು ಬೆಳೆಯುತ್ತಿದ್ದಾರೆ. ೧೫೦೦ ಅಡಿಗಳ ಆಳಕ್ಕೆ ಕೊರೆದರೂ ಒಂದಿಂಚು ನೀರು ಸಿಗುತ್ತಿಲ್ಲ, ಇಂತಹ ವಿಷಮ ಪರಿಸ್ಥಿತಿಯಲ್ಲಿ ನೀರಿನ ಕೊರತೆ ಸುಧಾರಣೆ ಮಾಡಿಕೊಂಡು ಮರಗಳ ರೂಪದಲ್ಲಿ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯುವತ್ತ ಗಮನಹರಿಸಬೇಕು. ಹೊಸ ಹೊಸ ತಂತ್ರಜ್ಞಾನವನ್ನು ಬೆಳೆಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ರೇಷ್ಮೆ ಇಲಾಖೆಯ ವಿಜ್ಞಾನಿಗಳು, ರೇಷ್ಮೆಹುಳುಗಳಿಗೆ ಬರುವಂತಹ ರೋಗಗಳು, ಅವುಗಳನ್ನು ತಡೆಗಟ್ಟುವಂತಹ ವಿಧಾನಗಳು ಮತ್ತು ದ್ವಿತಳಿ ಗೂಡು ಬೆಳೆಯುವುದು ಹಾಗೂ ಅದರ ಅಗತ್ಯತೆಗಳ ಬಗ್ಗೆ ಮಾಹಿತಿ ನೀಡಿದರು.
ಜಂಗಮಕೋಟೆ ಜಿಲ್ಲಾ ಪಂಚಾಯತಿ ಸದಸ್ಯೆ ಪಿ.ನಿರ್ಮಲ, ತಾಲ್ಲೂಕು ಪಂಚಾಯತಿ ಸದಸ್ಯರಾದ ಎಚ್.ನರಸಿಂಹಯ್ಯ, ಚಂದ್ರಕಲಾ ಬೈರೇಗೌಡ, ರಾಜಶೇಖರ್, ಪಂಕಜಾ ನಿರಂಜನ್, ರೇಷ್ಮೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ರೇಷ್ಮೆ ಕೃಷಿ ವಿಸ್ತರಣಾಧಿಕಾರಿ, ಎಂ.ನಾರಾಯಣಸ್ವಾಮಿ ವಿಜ್ಞಾನಿಗಳಾದ ಫಣಿರಾಜ್, ಡಾ.ಮಹೇಶ್, ಡಾ.ಸುಧಾಕರ್, ಗುರುರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -