ಸ್ವಚ್ಚ ಭಾರತ ಮಿಷನ್ನಡಿಯಲ್ಲಿ ನಗರದ ಸರ್ಕಾರಿ ಕಟ್ಟಡಗಳಲ್ಲಿ ಸ್ವಚ್ಚತೆಯ ಬಗ್ಗೆ ನಗರಸಭೆ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿದಾಗ ನಗರದ ನೂತನ ನ್ಯಾಯಾಲಯ ಸಂಕೀರ್ಣವು ಸ್ವಚ್ಚತೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ನಗರಸಭೆ ಆಯುಕ್ತ ಹೆಚ್.ಎ.ಹರೀಶ್ ಹೇಳಿದರು.
ನಗರಸಭೆ ಕಛೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸ್ವಚ್ಚತೆಯಲ್ಲಿ ನಗರ ಪೋಲೀಸ್ ಠಾಣೆ ದ್ವಿತೀಯ ಹಾಗು ಪ್ರಥಮ ದರ್ಜೆ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡಿದೆ. ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ನಗರದಲ್ಲಿ ಸ್ವಚ್ಚತೆಯನ್ನು ಕಾಪಾಡುತ್ತಿರುವ ಸರ್ಕಾರಿ ಕಟ್ಟಡಗಳ ಪರೀಶಿಲನೆ ನಡೆಸಿದಾಗ ನಗರದ ನ್ಯಾಯಾಲಯ ಸಂಕೀರ್ಣ, ನಗರ ಪೋಲೀಸ್ ಠಾಣೆ ಸೇರಿದಂತೆ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಸಮರ್ಪಕ ಕಸ ವಿಲೇವಾರಿ ಸೇರಿದಂತೆ ಶೌಚಾಲಯ ನಿರ್ವಹಣೆ, ಉತ್ತಮ ಪಾರ್ಕಿಂಗ್ ವ್ಯವಸ್ಥೆ ಎಲ್ಲವೂ ಸಮರ್ಪಕವಾಗಿರುವುದು ಕಂಡು ಬಂದ ಹಿನ್ನಲೆಯಲ್ಲಿ ರೇಟಿಂಗ್ ನೀಡಲಾಗಿದೆ ಎಂದರು.
ನಗರದ ಉಳಿದ ಸರ್ಕಾರಿ ಕಟ್ಟಡಗಳಲ್ಲಿಯೂ ಸ್ವಚ್ಚತೆ ಕಾಪಾಡುವಂತೆ ಈಗಾಗಲೇ ಮನವಿ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ನಗರದಾದ್ಯಂತ ಪ್ಲಾಸ್ಟಿಕ್ ನಿಷೇಧಗೊಳಿಸುವ ಸಲುವಾಗಿ ಅಂಗಡಿ, ಹೋಟೆಲ್ ಸೇರಿದಂತೆ ಮಾಂಸದಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ಬಳಸುತ್ತಿರುವವರ ವಿರುದ್ದ ದಂಡ ವಿಧಿಸುವ ಕೆಲಸ ಮಾಡಲಾಗುವುದು ಎಂದರು.
ನಗರದಲ್ಲಿ ಸುಸಜ್ಜಿತ ನೂತನ ನಗರಸಭಾ ಕಾರ್ಯಾಲಯವನ್ನು ನಿರ್ಮಾಣ ಮಾಡಲು ಸರ್ಕಾರ ಈಗಾಗಲೇ ಸುಮಾರು ೬ ಕೋಟಿ ರೂ ಹಣ ಮಂಜೂರು ಮಾಡಿದ್ದು ಕಟ್ಟಡದ ಕಾಮಗಾರಿ ಅತಿ ಶೀಘ್ರದಲ್ಲಿ ಮಾಡಲಾಗುವುದು ಎಂದರು.
ಬೇಸಿಗೆಯಲ್ಲಿ ನಗರದಾದ್ಯಂತ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ತಡೆಯಲು ಸುಮಾರು ೧೩ ಕೊಳವೆಬಾವಿಗಳನ್ನು ಕೊರೆಸಲು ಜಿಲ್ಲಾಧಿಕಾರಿಗಳಿಂದ ಆದೇಶ ಬಂದಿದ್ದು ಇದರಲ್ಲಿ ಸುಮಾರು ನಾಳ್ಕು ಕೊಳವೆಬಾವಿಗಳನ್ನು ನಗರದ ಹೊರವಲಯದ ಗೌಡನಕೆರೆ ಆವರಣದಲ್ಲಿ ಕೊರೆಸಲಾಗಿದೆ. ಈ ಪೈಕಿ ನಾಲ್ಕು ಕೊಳವೆಬಾವಿಗಳಲ್ಲೂ ಉತ್ತಮ ನೀರು ಲಭ್ಯವಾಗಿರುವುದು ನಗರದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಲು ಸಹಕಾರಿಯಾಗಲಿದೆ ಎಂದರು.
ನಗರಸಭೆ ವ್ಯವಸ್ಥಾಪಕ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಕೆ.ಕಿಷನ್ (ನಂದು), ಸದಸ್ಯರಾದ ಷಫಿವುಲ್ಲಾ, ಮುಸ್ತು, ಮುಖಂಡರಾದ ಎಸ್.ಎಂ.ರಮೇಶ್, ಶ್ರೀನಾಥ್, ಅಂಜದ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -