ಬೊಂಬೆ ಕೂರಿಸಿ ಆರತಿ ಎತ್ತುವುದು ನವರಾತ್ರಿ ಹಬ್ಬದ ವೈಶಿಷ್ಠ್ಯ. ಈ ಹಬ್ಬವನ್ನು ಆಚರಿಸುವವರ ಮನೆಗಳಲ್ಲಿ ಗೊಂಬೆಗಳ ಮೇಳವೇ ನಡೆಯುತ್ತದೆ. ಅದಕ್ಕೆಂದೇ ನವರಾತ್ರಿಯನ್ನು ಬೊಂಬೆಗಳ ಹಬ್ಬ ಎಂದು ಕರೆಯುತ್ತಾರೆ. ಹಿಂದೆ ಈ ಬೊಂಬೆಗಳ ಪ್ರದರ್ಶನದಲ್ಲಿ ಮಾನವಾಕಾರದ ಬೊಂಬೆಗಳನ್ನು ತಯಾರಿಸುತ್ತಿದ್ದರು. ಕೇವಲ ತಲೆಯ ಭಾಗ ಮಾತ್ರ ಇರುವ ಈ ಗೊಂಬೆಗಳಿಗೆ ದೇಹದಾಕೃತಿಯನ್ನು ಕೊಟ್ಟು ಉಡುಗೆ ತೊಡುಗೆಗಳನ್ನು ಉಡಿಸುವುದೇ ದೊಡ್ಡ ಸವಾಲಾಗಿತ್ತು.
ಮರೆತೇ ಹೋಗಿದ್ದ ಈ ರೀತಿಯ ಗೊಂಬೆಗಳನ್ನು ನಗರದ ಮೊದಲನೇ ನಗರ್ತಪೇಟೆಯಲ್ಲಿರುವ ಪ್ರಸೂತಿ ತಜ್ಞೆ ಡಾ.ರೋಹಿಣಿ ರವಿಶಂಕರ್ ತಮ್ಮ ಮನೆಯಲ್ಲಿ ಜೋಡಿಸಿಟ್ಟಿದ್ದಾರೆ. ತಮ್ಮ ಅಜ್ಜಿಯ ಕಾಲದಿಂದ ಉಳಿಸಿಕೊಂಡು ಬಂದಿರುವ ಈ ನೂರಕ್ಕೂ ಹೆಚ್ಚು ವರ್ಷದ ಗೊಂಬೆಗಳ ತಲೆ ಭಾಗಕ್ಕೆ ದೇಹದಾಕೃತಿಯನ್ನು ಕಾಲಕ್ಕೆ ತಕ್ಕಂತೆ ಅಲಂಕರಿಸಿದ್ದಾರೆ.
‘ನಮ್ಮಜ್ಜಿಯ ಮನೆಯಲ್ಲಿ ರಾಜ, ರಾಣಿ, ಯುವರಾಜ, ಯುವರಾಣಿ, ಮಂತ್ರಿ, ಸೈನಾಧಿಪತಿ, ದರ್ಬಾರ್ ಎಲ್ಲವನ್ನೂ ಬೊಂಬೆಗಳ ಮೂಲಕವೇ ನಿರೂಪಿಸುತ್ತಿದ್ದರು. ಗೊಂಬೆಗಳೆಂದರೆ ಕೇವಲ ತಲೆಗಳು ಮಾತ್ರ. ಅವಕ್ಕೆ ಉಡುಗೆಗಳನ್ನು ತೊಡಿಸಿ, ಕೈಕಾಲುಗಳನ್ನು ನಾವೇ ತಯಾರಿಸಿಡಬೇಕು. ಬೊಂಬೆಗಳಿಗೆ ಕೊಡುವ ಆಕಾರ, ನಿಲುವು, ಮೂಡಿಸುವ ಭಾವ, ತೊಡಿಸುವ ಉಡುಗೆ ತೊಡುಗೆ, ರಚನಾ ಕ್ರಿಯೆಯಲ್ಲಿ ತೋರಿಸುವ ನಯ ನಾಜೂಕು, ಇವೆಲ್ಲ ಸೊಬಗನ್ನು ಹೆಚ್ಚಿಸುತ್ತವೆ. ನಮ್ಮಜ್ಜಿಯಿಂದ ಕೊಡುಗೆಯಾಗಿ ನಮ್ಮ ಪಾಲಿಗೆ ಬಂದ ಗೊಂಬೆಗಳನ್ನು ಪ್ರತಿವರ್ಷ ವಿಶೇಷವಾಗಿ ಅಲಂಕರಿಸಿ, ವಸ್ತ್ರವನ್ನೆಲ್ಲಾ ತೊಡಿಸಿ ಜೋಡಿಸಿಡುತ್ತೇವೆ. ಈ ಬಾರಿ ರಾಜ, ರಾಣಿಯರು, ರಾಜಕುಮಾರ, ರಾಜಕುಮಾರಿ ಮತ್ತು ದೃಷ್ಟಿ ಬೊಂಬೆಗಳನ್ನು ಮಾಡಿಟ್ಟಿದ್ದೇವೆ. ಇವು ಪ್ರಧಾನವಾದ ಬೊಂಬೆಗಳಾದರೆ, ಮಿಕ್ಕ ಬೊಂಬೆಗಳಲ್ಲಿ ದಶಾವತಾರ, ಶ್ರೀಕೃಷ್ಣ ಲೀಲೆ, ಶೆಟ್ಟಿ ಅಂಗಡಿ, ಗಣೇಶ, ಕಾಮಧೇನು, ಶಿವನ ಲೋಕ ಮೊದಲಾದವುಗಳಿವೆ’ ಎಂದು ಪುರಾತನ ಗೊಂಬೆಗಳ ಬಗ್ಗೆ ಡಾ.ರೋಹಿಣಿ ರವಿಶಂಕರ್ ತಿಳಿಸಿದರು.

ಗೊಂಬೆಗಳ ಮೂಲಕ ವಿಶ್ವದರ್ಶನ: ನೂರು ವರ್ಷದ ಹಿಂದಿನ ಗೊಂಬೆಗಳು ಹಾಗೂ ಪಟ್ಟದ ಗೊಂಬೆಗಳೊಂದಿಗೆ ಡಾ.ರೋಹಿಣಿ ರವಿಶಂಕರ್ ದೇಶ ವಿದೇಶಗಳಿಂದ ತಂದ ಗೊಂಬೆಗಳನ್ನು ಜೋಡಿಸಿಟ್ಟು ಗೊಂಬೆಹಬ್ಬದಲ್ಲಿ ವಿಶ್ವದರ್ಶನವನ್ನೂ ಮಾಡಿಸಿದ್ದಾರೆ. ದಸರಾ ಗೊಂಬೆಗಳ ಮೂಲಕ ವಿಶ್ವ ಮಾನವ ಸಂದೇಶವನ್ನೂ ಸಾರುತ್ತಿದ್ದಾರೆ.
ವಾಘಾ ಗಡಿಯಲ್ಲಿ ಸೈನಿಕರ ಕವಾಯತ್ತು, ಹಾಂಕಾಂಗ್ ದೇಶದ ನವಿಲು, ಆಮ್ಸ್ಟರ್ಡ್ಯಾಂನ ಟುಲಿಪ್ಗಳು, ಸಾರಾನಾಥ್ ಮತ್ತು ಭೂತಾನ್ನ ಬುದ್ಧ ಮೂರ್ತಿಗಳು, ವೆನಿಸ್ನ ಮುಖವಾಡ, ಅಮೆರಿಕೆಯ ವೈದ್ಯ ಬೊಂಬೆಗಳು, ಲಂಡನ್ನ ಬಿಗ್ಬೆನ್, ಜರ್ಮನಿಯ ಸ್ವರೋಸ್ಕಿ ಹೂಗಳು, ಪ್ಯಾರಿಸ್ನ ಹೆಣ್ಣು ಗೊಂಬೆ, ದುಬೈ, ಥಾಯ್ಲೆಂಡ್ ದೇಶದ ಪ್ರತಿಕೃತಿಗಳು, ನ್ಯೂಯಾರ್ಕ್ನ ಡಬ್ಲೂಟಿಸಿ, ಅಮೆರಿಕೆಯ ಸ್ವಾತಂತ್ರ್ಯ ದೇವತೆ, ಪ್ಯಾರಿಸ್ನ ಐಫೆಲ್ ಟವರ್, ಹಾಲೆಂಡ್ನ ಮರದ ಪುಟಾಣಿ ಶೂಗಳು, ಥಾಯ್ಲೆಂಡ್ನ ತಾಯಿ ಮಗು, ಹಾಂಕಾಂಗ್ನ ಜೆಲ್ಲಿಫಿಶ್, ಥೈವಾನ್ನ ಅದೃಷ್ಟದ ಗೊಂಬೆಗಳು, ಡಿಸ್ನಿ ರಾಜಕುಮಾರಿ, ಚೀನಾದ ತಾಯಿ ಮಕ್ಕಳು, ಅಮೆರಿಕೆಯ ರಾಷ್ಟ್ರಪಕ್ಷಿ, ದುಬೈನ ರಾಷ್ಟ್ರಪ್ರಾಣಿ, ತಂಜಾವೂರಿನ ನರ್ತಕಿ, ಮೊದಲಾದವುಗಳನ್ನು ಜೋಡಿಸಿಟ್ಟು ದೇಶ ವಿದೇಶಗಳನ್ನು ಒಂದುಗೂಡಿಸಿದ್ದಾರೆ.
ಪರಿಸರ ಕಾಳಜಿ: ಪರಿಸರ ಪ್ರೇಮವನ್ನು ಪ್ರತಿನಿಧಿಸುವಂತೆ ಒಂದು ಭಾಗದಲ್ಲಿ ಕಾಡನ್ನು, ಕಾಡುಪ್ರಾಣಿಗಳು, ಹಕ್ಕಿಗಳು, ಕಾಡಿನಲ್ಲಿ ವಾಸಿಸುವವರನ್ನು ಗೊಂಬೆಗಳ ಮೂಲಕ ಪ್ರದರ್ಶಿಸಿದ್ದಾರೆ.
‘ಪ್ರವಾಸಕ್ಕಾಗಿ ಹೋದ ಸ್ಥಳಗಳಿಂದೆಲ್ಲಾ ಗೊಂಬೆಗಳನ್ನು ತರುವ ಅಭ್ಯಾಸವಿದೆ. ದಸರಾ ಹಬ್ಬದ ಪ್ರಯುಕ್ತ ಈ ರೀತಿ ಸಂಗ್ರಹಿಸಿರುವ ಗೊಂಬೆಗಳನ್ನೆಲ್ಲಾ ಜೋಡಿಸಿಟ್ಟಾಗ ನಾವು ಭೇಟಿ ನೀಡಿರುವ ವಿಶ್ವದ ವಿವಿಧ ಪ್ರದೇಶಗಳು, ಸಂಸ್ಕೃತಿ, ರೀತಿ ರಿವಾಜುಗಳು, ಉಡುಪು, ಖಾದ್ಯ ಎಲ್ಲವೂ ಚಿತ್ರಾವಳಿಯಂತೆ ಕಣ್ಮುಂದೆ ಬರುತ್ತದೆ. ಕುವೆಂಪು ಸಾರಿದ ವಿಶ್ವ ಮಾನವ ಸಂದೇಶ ನೆನಪಾಗುತ್ತದೆ. ಗಡಿಗಳು ಮನುಷ್ಯರ ನಿರ್ಮಿತಿ, ಮಾನವತ್ವ ಗಡಿಯನ್ನು ಮೀರಿದ್ದು. ವಿಶ್ವದ ಸಾಂಸ್ಕೃತಿಕ ವೈವಿಧ್ಯತೆ ಹೆಮ್ಮೆ ತರುತ್ತದೆ. ಗೊಂಬೆಗಳನ್ನು ತಯಾರಿಸಲು, ಜೋಡಿಸಿಡಲು ನಮ್ಮ ತಾಯಿ ಹಾಗೂ ಕುಟುಂಬದವರೆಲ್ಲ ನೆರವಾಗಿದ್ದಾರೆ’ ಎನ್ನುತ್ತಾರೆ ಡಾ.ರೋಹಿಣಿ ರವಿಶಂಕರ್.
- Advertisement -
- Advertisement -
- Advertisement -







