ಲಾಕ್ ಡೌನ್ ವಿಸ್ತರಣೆಯಾಗುತ್ತಿದ್ದಂತೆಯೇ ನಗರಗಳಿಂದ ರಾತ್ರಿಹೊತ್ತಿನಲ್ಲಿ ವಲಸಿಗರು ಆಗಮಿಸುತ್ತಿದ್ದಾರೆ. ಮಂಗಳವಾರ ಬೆಳಗಿನ ಜಾವ ತಾಲ್ಲುಕಿನ ನಾಗಮಂಗಲಕ್ಕೆ ಎರಡು ಸಂಸಾರಗಳು ಬೆಂಗಳೂರಿನ ನೆಲಮಂಗಲದಿಂದ ಆಗಮಿಸಿವೆ.
ನಾಗಮಂಗಲ ಮೂಲದ ಒಂದು ಸಂಸಾರ ಅಂದರೆ ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು ಬೆಂಗಳೂರಿನಲ್ಲಿ ಜೀವನ ನಡೆಸಲು ದುಸ್ತರವಾಗಿ ತಮ್ಮ ತಾಯಿಯ ಮನೆಗೆ ಬಂದಿದ್ದಾರೆ. ಅವರೊಂದಿಗೆ ಮದನಪಲ್ಲಿ ಮೂಲದ ಕುಟುಂಬ ಅಂದರೆ ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು ಕೂಡ ಬಂದಿದ್ದಾರೆ. ಎರಡು ಕುಟುಂಬಗಳು ಎರಡು ಬೈಕ್ ಗಳಲ್ಲಿ ಬೆಳಗಿನ ಜಾವ ಬಂದಿದ್ದನ್ನು ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಆರೋಗ್ಯ ಇಲಾಖೆಯವರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಜಂಗಮಕೋಟೆ ಆರೋಗ್ಯ ವೈದ್ಯಾಧಿಕಾರಿ ಅಂಬಿಕಾ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯಿತಿ ಅಧಿಕಾರಿ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಲಸಿಗರ ಆರೋಗ್ಯ ತಪಾಸಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಿದರು.
“ನೀವುಗಳು ಮನೆ ಬಿಟ್ಟು ಹದಿನಾಲ್ಕು ದಿನಗಳು ಎಲ್ಲಿಯೂ ಹೋಗುವಂತಿಲ್ಲ” ಎಂದು ಅವರನ್ನು ಆರೋಗ್ಯ ಸಿಬ್ಬಂದಿ ಕ್ವಾರಂಟೈನ್ ಮಾಡಿದರು. ಮದನಪಲ್ಲಿ ಮೂಲದ ಕುಟುಂಬದವರನ್ನೂ ಸಹ ಗ್ರಾಮಸ್ಥರು ಹಾಗೂ ಆರೋಗ್ಯ ಸಿಬ್ಬಂದಿ ಊಟ ಕೊಡುತ್ತೇವೆ ಇಲ್ಲಿಯೇ ಕ್ವಾರಂಟೈನ್ ನಲ್ಲಿ ಇದ್ದುಬಿಡಿ ಎಂದರು. ಆದರೆ ಆ ವ್ಯಕ್ತಿಯು ತನಗೆ ಜನವರಿ 24 ಕೆಲಸದಿಂದ ತೆಗೆದು ಹಾಕಿದರು. ಪಿ.ಎಫ್ ಕೂಡ ಬರಲಿಲ್ಲ. ಆಗಿನಿಂದ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದೆ. ಲಾಕ್ ಡೌನ್ ಆದ ಮೇಲೆ ನಮ್ಮ ಪರಿಸ್ಥಿತಿ ಚಿಂತಾಜನಕವಾಯಿತು. ಮದನಪಲ್ಲಿಯಲ್ಲಿ ನಮ್ಮ ತಾಯಿ ಮನೆಯಿದೆ ಅಲ್ಲಿಗೇ ಹೋಗುತ್ತೇವೆ ಎಂದು ಕೇಳಿಕೊಂಡರು. ಹಾಗಾಗಿ ಅವರಿಗೆ ಊಟ ನೀಡಿ, ಆರೋಗ್ಯ ಪರೀಕ್ಷಿಸಿ ನಂತರ ಸ್ಥಳಬಿಟ್ಟು ಹೋಗಲು ತಿಳಿಸಿದರು.