ಮಹಾಮಾರಿ ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ಲಾಕ್‌ಡೌನ್ ಜಾರಿಗೊಳಿಸಿದ ದಿನದಿಂದಲೂ ನಗರದಾದ್ಯಂತ ಸ್ವಚ್ಛತೆ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರ ಆರೋಗ್ಯವನ್ನು ಕಾಪಾಡುವುದು ಹಾಗೂ ಅವರಿಗೆ ಸೂಕ್ತ ಆರೋಗ್ಯ ನೆರವು ನೀಡುವುದು ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಯ ಕರ್ತವ್ಯವಾಗಿದೆ ಎಂದು ತಹಶಿಲ್ದಾರ್ ಕೆ.ಅರುಂಧತಿ ತಿಳಿಸಿದರು.
ನಗರದ ನಗರಸಭೆಯಲ್ಲಿ ಶುಕ್ರವಾರ ತಾಲ್ಲೂಕು ಆಡಳಿತದ ವತಿಯಿಂದ ಪೌರಕಾರ್ಮಿಕರು ಹಾಗೂ ನಗರಸಭೆಯ ಸಿಬ್ಬಂದಿಗೆ ಆರೋಗ್ಯ ಇಲಾಖೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದು, ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊರೊನಾ ಸೋಂಕಿನ ವಿರುದ್ಧ ನಡೆಯುತ್ತಿರುವ ಸಂಘರ್ಷದಲ್ಲಿ ನಗರದ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಅತ್ಯಂತ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರ ಆರೋಗ್ಯವನ್ನು ಈ ದಿನ ತಪಾಸಣೆ ಮಾಡಿಸಲಾಗುತ್ತಿದೆ. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ನಗರಸಭೆ ಹಾಗೂ ತಾಲ್ಲೂಕು ಆಡಳಿತ ಕೊರೊನಾ ಹೊಡೆದೋಡಿಸಲು ಕರ್ತವ್ಯನಿಷ್ಠೆಯಿಂದ ಕೆಲಸ ಮಾಡುತ್ತಿದ್ದು, ಸಾರ್ವಜನಿಕರು ಮನೆಯಲ್ಲಿಯೇ ಇರುವ ಮೂಲಕ ಸಹಕರಿಸಬೇಕು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದೇವೆ. ದಯವಿಟ್ಟು ನೀವುಗಳು ಯಾರೂ ಮನೆಯಿಂದ ಹೊರಬರಬೇಡಿ. ಅವಶ್ಯಕ ವಸ್ತುಗಳಿಗೆ ಮಾತ್ರ ಮಾಸ್ಕ್ ಧರಿಸಿ ಹೊರಬಂದು ತೆಗೆದುಕೊಂಡು ತಕ್ಷಣ ಮನೆಗೆ ಹೋಗಿ. ಸ್ಯಾನಿಟೈಸರ್ ಬಳಸಿ. ಮಕ್ಕಳನ್ನು ವೃದ್ಧರನ್ನು ಮನೆಯಿಂದ ಹೊರಕ್ಕೆ ಕಳಿಸಬೇಡಿ. ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ಕೈಗಳನ್ನು ತೊಳೆಯುತ್ತಿರಿ ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ತ್ಯಾಗರಾಜ್, ನಗರಸಭಾ ಸದಸ್ಯರು, ಸಿಬ್ಬಂದಿ, ಪೌರಕಾರ್ಮಿಕರು ಹಾಜರಿದ್ದರು.