ಐಪಿಎಲ್ ಪ್ರಾರಂಭವಾಗುತ್ತಿದ್ದಂತೆ ಕ್ರಿಕೆಟ್ ಆಡುವವರು, ಪ್ರೊ ಕಬಡ್ಡಿ ನೋಡಿ ಕಬಡ್ಡಿ ಆಡುವಂತೆ ವಿಶ್ವಕಪ್ ಫುಟ್‌ಬಾಲ್ ಪ್ರಾರಂಭವಾಗುತ್ತಿದ್ದಂತೆ ಫುಟ್‌ಬಾಲ್ ಆಡುವವರು ಗಲ್ಲಿಗಲ್ಲಿಗಳಲ್ಲಿ ಕಾಣಿಸುತ್ತಾರೆ. ಆದರೆ ಕ್ರೀಡೆಯತ್ತ ನಿಜವಾಗಿ ಆಸಕ್ತರಾಗುವವರು, ಅದಕ್ಕೆ ತಕ್ಕಂತೆ ಪ್ರೋತ್ಸಾಹ, ತರಬೇತಿ ನೀಡುವವರು ಎಲ್ಲಾ ಕೂಡಿಬರುವುದು ವಿರಳ.
ಆದರೆ ನಗರದಲ್ಲಿ ಈ ವಿರಳವೆನ್ನುವ ಸಂಗತಿ ನಿಜವಾಗಿದೆ. ನಗರದ ನೆಹರೂ ಕ್ರೀಡಾಂಗಣದಲ್ಲಿ ಹೊಸ ತಲೆಮಾರಿನ ಮಕ್ಕಳು ಫುಟ್‌ಬಾಲ್ ಕ್ರೀಡೆಯತ್ತ ಆಕರ್ಷಿತರಾಗಿದ್ದಾರೆ. ನಗರದ ವಿವಿಧ ಶಾಲೆಗಳ ಪ್ರೌಢಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಬೆಳಿಗ್ಗೆ ಕ್ರೀಡಾಂಗಣದಲ್ಲಿ ಆಸಕ್ತಿಯಿಂದ ಫುಟ್‌ಬಾಲ್ ಆಡುವುದನ್ನು ಕಂಡು ಹಿರಿಯ ಕ್ರೀಡಾಪಟು ಹಫೀಜುಲ್ಲಾ ಅವರನ್ನು ಒಗ್ಗೂಡಿಸಿ ತರಬೇತಿ ಕೊಡಿಸಲು ಮುಂದಾಗಿದ್ದಾರೆ. ಮಕ್ಕಳ ಆಸಕ್ತಿಗೆ ನೀರೆರೆಯುತ್ತ ಅವರು ಮಕ್ಕಳಿಗೆ ಶೂ, ಜರ್ಸಿ, ಫುಟ್‌ಬಾಲ್ ಕೊಡಿಸಿದ್ದಾರೆ.
ಒಂದು ಕಾಲದಲ್ಲಿ ರಾಷ್ಟ್ರೀಯ ತಂಡ ಮತ್ತು ಪ್ರಸಿದ್ಧ ಮೋಹನ್‌ಬಗಾನ್ ತಂಡದಲ್ಲಿ ಆಡಿದ್ದ ಚಿಂತಾಮಣಿ ಮೂಲದ ಮುಷೀರ್ ಅಹಮದ್ ರೇಷ್ಮೆ ವ್ಯಾಪಾರವನ್ನು ಮಾಡಿಕೊಂಡು ನಗರದಲ್ಲಿ ನೆಲೆಸಿದ್ದಾರೆ. ಅವರನ್ನು ಮಕ್ಕಳಿಗೆ ತರಬೇತಿ ನೀಡಲು ಕ್ರೀಡಾಸಕ್ತರು ಮನವೊಲಿಸಿದ್ದಾರೆ. ಕಲಿಯುವ ಮಕ್ಕಳನ್ನು ಕಂಡು ಕಲಿಸುವ ಹುಮ್ಮಸ್ಸಿನಿಂದ ದೇಹಕ್ಕೆ ವಯಸ್ಸಾದರೂ ಮನಸ್ಸಿಗಲ್ಲ ಎಂಬಂತೆ ಹಿರಿಯ ಮುಷೀರ್ ಭಾಯ್ ಕ್ರೀಡಾಂಗಣದಲ್ಲಿ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ.
ಕಚ್ಛಾವಸ್ತುವನ್ನು ಉಪಯುಕ್ತ ವಸ್ತುವನ್ನಾಗಿಸುವಂತೆ ಕ್ರೀಡಾಸಕ್ತರ ಆಸಕ್ತಿಯ ನಡೆಯಿಂದಾಗಿ ಸುಮಾರು 16 ಮಂದಿ ಮಕ್ಕಳು ಫುಟ್‌ಬಾಲ್ ತರಬೇತಿ ಪಡೆಯುತ್ತಿದ್ದಾರೆ. ಪ್ರತಿ ದಿನ ನೆಹರೂ ಕ್ರೀಡಾಂಗಣದಲ್ಲಿ ಬೆಳಿಗ್ಗೆ 7 ರಿಂದ 8.15ರವರೆಗೆ ಪುಟ್ಟ ಬಾಲಕರು ಆಸಕ್ತಿಯಿಂದ ಫುಟ್‌ಬಾಲ್ ಕಲಿಯುತ್ತಿದ್ದು, ಈಚೆಗೆ ನೆಹರೂ ಕ್ರೀಡಾಂಗಣದಲ್ಲಿ ಚಿಕ್ಕಬಳ್ಳಾಪುರದ ಕ್ರೀಡಾ ವಸತಿ ಶಾಲೆಯ ತಂಡ, ಚಿಂತಾಮಣಿ ತಂಡದೊಂದಿಗೆ ಆಡಿ ಗೋಲುಗಳನ್ನು ಹೊಡೆಯುವ ಮೂಲಕ ತಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿಕೊಂಡಿದ್ದಾರೆ.
ಬಲು ಹಿಂದೆ ನಗರಕ್ಕೆ ಟಿ.ವಿ ಕಾಲಿಡುವ ಮುನ್ನ ಈಗಿನ ಸಾರ್ವಜನಿಕ ಆಸ್ಪತ್ರೆಯಿರುವ ಸ್ಥಳದಲ್ಲಿ ಆಗಿನ ಯುವಕರು ಫುಟ್‌ಬಾಲ್ ಆಡುತ್ತಿದ್ದರಂತೆ. ಇತರ ಊರುಗಳ ಜೊತೆ ನಡೆಯುವ ಪಂದ್ಯವನ್ನು ವೀಕ್ಷಿಸಲು ನಗರ ಹಾಗೂ ಗ್ರಾಮಗಳ ಜನರು ಜಮಾಯಿಸುತ್ತಿದ್ದರೆಂದು ಹಿರಿಯಲು ಈಗಲೂ ನೆನಪಿಸಿಕೊಳ್ಳುತ್ತಾರೆ.
‘ಈಗಿನ ತಲೆಮಾರಿನ ಮಕ್ಕಳಲ್ಲಿ ಆಟಕ್ಕಿಂತ ಓದಿನ ಬಗ್ಗೆಯೇ ಕಾಳಜಿ ಹೆಚ್ಚು. ಆದರೆ ವಿವಿಧ ಶಾಲೆಗಳ ಪ್ರೌಢಶಾಲೆಯ ವಿದ್ಯಾರ್ಥಿಗಳು ಫುಟ್‌ಬಾಲ್ ಕ್ರೀಡೆಯತ್ತ ಆಕರ್ಷಿತರಾಗಿದ್ದಾರೆ. ಹಿರಿಯ ಫುಟ್‌ಬಾಲ್ ಕ್ರೀಡಾಪಟು ಮುಷೀರ್ ಅಹಮದ್ ಅವರು ಉಚಿತವಾಗಿ ಮಕ್ಕಳಿಗೆ ಫುಟ್‌ಬಾಲ್ ಕಲಿಸಲು ಒಪ್ಪಿದರು. ಅವರೊಂದಿಗೆ ಹಿರಿಯ ಫುಟ್‌ಬಾಲ್ ಆಟಗಾರರಾದ ಆರೀಫ್ ಮತ್ತು ಮುಜಾಹಿದ್‌ಪಾಷ ಸಹ ಹೇಳಿಕೊಡುತ್ತಿದ್ದಾರೆ. ಈಗ 16 ಮಕ್ಕಳಿದ್ದಾರೆ. ಅವರಿಗೆ ಶೂ, ಜರ್ಸಿ, ಫುಟ್‌ಬಾಲ್, ನೆಟ್ ಇತ್ಯಾದಿ ಕೊಡಿಸಿರುವೆ. ನೆಹರೂ ಕ್ರೀಡಾಂಗಣದಲ್ಲಿ ಅವುಗಳನ್ನು ಇಡಲು ಕೋಣೆ ಸಹ ನೀಡಿದ್ದಾರೆ. ಮಕ್ಕಳ ಕಲಿಕೆ, ಉತ್ಸಾಹ, ಜಿಂಕೆಯಂತೆ ಓಡುವ ವೇಗ ಕಂಡು ಖುಷಿಯಾಗುತ್ತದೆ. ನಮಗೆ ಸಿಗದ ಅವಕಾಶ ಈಗಿನ ಮಕ್ಕಳಿಗೆ ಸಿಗಲಿ ಎಂಬುದು ನನ್ನ ಆಸೆ’ ಎನ್ನುತ್ತಾರೆ ಹಫೀಜುಲ್ಲಾ.
‘ಕ್ರೀಡಾ ಇಲಾಖೆಯಿಂದ ಒಂದಷ್ಟು ಪ್ರೋತ್ಸಾಹ, ಸ್ಥಳೀಯ ಕ್ರೀಡಾಸಕ್ತರಿಂದ ನೆರವು ಸಿಕ್ಕಲ್ಲಿ ಕಲಿಯುವ ಮಕ್ಕಳಿಗೆ ಅನುಕೂಲಕರ. ನಮ್ಮ ಉದ್ದೇಶ ನಮ್ಮ ತಾಲ್ಲೂಕಿನಿಂದ ರಾಷ್ಟ್ರಮಟ್ಟದಲ್ಲಿ ಆಡುವ ಫುಟ್‌ಬಾಲ್ ಕ್ರೀಡಾಪಟುಗಳನ್ನು ರೂಪಿಸುವುದಾಗಿದೆ. ಫುಟ್‌ಬಾಲ್ ಕಲಿಯಬಯಸುವ ಮಕ್ಕಳಿಗೆ ಸ್ವಾಗತವಿದೆ. ಉಚಿತವಾಗಿ ಕಲಿಸಲು ಹಿರಿಯ ಕ್ರೀಡಾಪಟುಗಳು ಸಿದ್ಧವಿದ್ದಾರೆ. ಒಟ್ಟಾರೆ ಕ್ರೀಡೆಯ ಮೂಲಕ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸುವುದು ನಮ್ಮ ಆಶಯ’ ಎಂದು ಅವರು ಹೇಳಿದರು.
- Advertisement -
- Advertisement -
- Advertisement -







