ಮೇ ೧೨ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಸೇರಿದಂತೆ ಚುನಾವಣೆ ಬಹಿರಂಗ ಪ್ರಚಾರ ಮೇ ೧೦ ರ ಸಂಜೆ ೬ ಗಂಟೆಗೆ ಕೊನೆಗೊಳ್ಳಲಿದೆ ಎಂದು ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ನಗರದ ತಾಲ್ಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.
ಹೊರಗಿನ ಕ್ಷೇತ್ರಗಳಿಂದ ಬಂದಿರುವ ಯಾರೂ ೬ ಗಂಟೆಯ ನಂತರ ಕ್ಷೇತ್ರದಲ್ಲಿ ಇರುವಂತಿಲ್ಲ. ಯಾರಿಗೆ ಮತ ಹಾಕಿದ್ದೇವೆ ಎನ್ನುವ ಕುರಿತು ಮಾದ್ಯಮಗಳ ಮೂಲಕ ಬಹಿರಂಗ ಪಡಿಸುವಂತಿಲ್ಲ.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨೩೭ ಮತಗಟ್ಟೆಗಳು, ೩೧ ಅತಿಸೂಕ್ಷ್ಮ ಮತಗಟ್ಟೆಗಳು, ಸೂಕ್ಷ್ಮ ೭೧, ಸಾಮಾನ್ಯ ೧೩೫, ಸಮಸ್ಯಾತ್ಮಕ ಮತಗಟ್ಟೆಗಳು ೮೫ ಎಂದು ವಿಂಗಡಣೆ ಮಾಡಲಾಗಿದೆ. ಎಲ್ಲಾ ಮತಗಟ್ಟೆಗಳಿಗೆ ಅಗತ್ಯವಾಗಿರುವ ಮೂಲಸೌಕರ್ಯಗಳನ್ನು ಒದಗಿಸಲಾಗಿದ್ದು, ಒಂದೊಂದು ಮತಗಟ್ಟೆಗೆ ೫ ಮಂದಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
ಅತಿಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆಯ ಜೊತೆಗೆ, ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿಯೊಂದು ಮತಗಟ್ಟೆಯ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ.
ಬಹಿರಂಗ ಪ್ರಚಾರಕ್ಕೆ ತೆರೆಬಿದ್ದ ನಂತರ ೧೫ ಮಂದಿಯ ತಂಡದೊಂದಿಗೆ ತೆರಳಿ ಮನೆ ಮನೆಗೆ ಪ್ರಚಾರ ಮಾಡಬಹುದು, ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ, ಯಾವುದೇ ಬಂಟಿಂಗ್ಸ್ ಬ್ಯಾನರ್, ಕರಪತ್ರಗಳನ್ನು ಹಿಡಿದುಕೊಂಡು ಹೋಗುವಂತಿಲ್ಲ, ೧೦೦ ಮೀಟರ್ ವರೆಗೂ ನಿಷೇಧಿತ ಪ್ರದೇಶವಾಗಿರುತ್ತದೆ. ಅಭ್ಯರ್ಥಿಗಳು ೨೦೦ ಮೀಟರ್ ಹೊರಗೆ ಇರಬೇಕಾಗುತ್ತದೆ. ನಿಷೇಧಿತ ಪ್ರದೇಶದಲ್ಲಿ ಮತಯಾಚನೆ ಮಾಡುವಂತಿಲ್ಲ, ಅಭ್ಯರ್ಥಿಯ ಭಾವಚಿತ್ರ ಪ್ರದರ್ಶನ ಮಾಡುವಂತಿಲ್ಲ. ಬಹಿರಂಗ ಪ್ರಚಾರಕ್ಕೆ ತೆರೆಬಿದ್ದ ನಂತರ ಒಬ್ಬ ಅಭ್ಯರ್ಥಿಗೆ ಸಂಬಂಧಿಸಿದಂತೆ ಮೂರು ವಾಹನಗಳಿಗೆ ಮಾತ್ರ ಅವಕಾಶವಿರುತ್ತದೆ. ಪಕ್ಷದ ಬ್ಯಾನರ್, ಬಾವುಟ, ಸ್ಟಿಕ್ಕರ್ ಕಟ್ಟುವಂತಿಲ್ಲ, ಹೆಚ್ಚಿನ ವಾಹನಗಳು ಸಂಚರಿಸುವಂತಿಲ್ಲ, ಒಂದು ವೇಳೆ ನಿಯಮ ಉಲ್ಲಂಘನೆಯಾದರೆ ಅಂತಹವರ ಮೇಲೆ ಪ್ರಕರಣ ದಾಖಲಾಗುತ್ತದೆ.
ದಿನಪತ್ರಿಕೆಗಳು, ಸುದ್ದಿವಾಹಿನಿಗಳಲ್ಲಿ ಪ್ರಚಾರ ಮಾಡಬೇಕಾದರೂ ಕಡ್ಡಾಯವಾಗಿ ಅನುಮತಿ ಪಡೆಯಬೇಕು, ಅದಕ್ಕೆ ತಗಲುವ ವೆಚ್ಚದ ಕುರಿತು ಲೆಕ್ಕ ನೀಡಬೇಕಾಗುತ್ತದೆ. ಮತದಾರರಿಗೆ ಆಮಿಷಗಳನ್ನೊಡ್ಡುವುದು, ಉಡುಗೊರೆಗಳನ್ನು ಕೊಡುವುದು ನಿಷೇಧ ಮಾಡಲಾಗಿದೆ. ಹಣ ಹಂಚಿಕೆ ಮಾಡುವುದು ಕಂಡು ಬಂದರೆ ಅಂತಹವರ ಮೇಲೆ ದೂರು ದಾಖಲಾಗುತ್ತದೆ.
ಕ್ಷೇತ್ರದಲ್ಲಿ ಚಿಲಕಲನೇರ್ಪು ಸೇರಿದಂತೆ ಒಟ್ಟು ೧,೯೮,೨೦೦ ಮತದಾರರಿದ್ದಾರೆ. ಪುರುಷರು ೯೯,೮೨೯, ಮಹಿಳಾ ಮತದಾರರು ೯೮,೩೬1, ಇತರೆ ೧೦ ಮಂದಿ ಇದ್ದಾರೆ.
ಕ್ಷೇತ್ರದ ಆರು ಕಡೆಗಳಲ್ಲಿ ಮಹಿಳೆಯರಿಗಾಗಿ ಪಿಂಕ್ ಬೂತ್‌ಗಳನ್ನು ತೆರೆಯಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಗರದ ಸರ್ಕಾರಿ ಶಾಲೆ ಎ.ಕೆ.ಕಾಲೋನಿಯಲ್ಲಿ ಎರಡು, ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪ್ರೌಢಶಾಲೆ ಉಲ್ಲೂರು ಪೇಟೆ, ವಾಸವಿ ಪ್ರೌಢಶಾಲೆ, ಹರಳಹಳ್ಳಿಯಲ್ಲಿ ಮತಗಟ್ಟೆ ಇರುತ್ತದೆ. ಎಲ್ಲರೂ ಮಹಿಳಾ ಸಿಬ್ಬಂದಿ ಇರುತ್ತಾರೆ.
ಮತದಾನ ಬೆಳಗ್ಗೆ ೭ ಗಂಟೆಯಿಂದ ಸಂಜೆ ೬ ಗಂಟೆಯವರೆಗೂ ನಡೆಯುತ್ತದೆ. ಮತದಾನ ಮಾಡಲು ಮತದಾರರು ತಮ್ಮ ಬಳಿರುವ ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಸೇರಿದಂತೆ ೧೦ ದಾಖಲೆಗಳಲ್ಲಿ ಒಂದನ್ನು ಕೊಡಬಹುದು ಎಂದರು.
ಚುನಾವಣೆ ಮುಕ್ತಾಯವಾಗುವುದು ವಿಳಂಬವಾಗುವುದರಿಂದ ಚುನಾವಣಾ ಕಾರ್ಯಕ್ಕೆ ತೆರಳುವ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ವಸ್ಥಳಗಳಿಗೆ ಹೊರಡುವಂತಹ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







