ಮೇ ೨೯ ರಂದು ನಗರಸಭೆಗೆ ನಡೆದ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿ, ಒಟ್ಟು ೩೧ ಸ್ಥಾನಗಳಿರುವ ನಗರಸಭೆಯ ಯಾವುದೇ ಪ್ರಮುಖ ಪಕ್ಷಕ್ಕೂ ನಿಖರವಾದ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಕಾಂಗ್ರೆಸ್ – ೧೩, ಜೆಡಿಎಸ್ – ೧೦, ಬಿ.ಜೆ.ಪಿ – ೨, ಬಿ.ಎಸ್.ಪಿ – ೨, ಪಕ್ಷೇತರ – ೪ ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿವೆ. ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ೧೬ ಸ್ಥಾನಗಳು ಬೇಕಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ೩ ಸ್ಥಾನಗಳು ಹಾಗೂ ಜೆಡಿಎಸ್ ಗೆ ೬ ಸ್ಥಾನಗಳ ಕೊರತೆಯಿದೆ. ಪಕ್ಷೇತರ, ಬಿ.ಎಸ್.ಪಿ ಮತ್ತು ಬಿ.ಜೆ.ಪಿ ಪಕ್ಷದಿಂದ ಗೆದ್ದ ಅಭ್ಯರ್ಥಿಗಳ ಮೇಲೆ ಈಗ ಅಧಿಕಾರ ಚುಕ್ಕಾಣಿ ಹಿಡಿಯುವವರು ಅವಲಂಬಿತರಾಗಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನಗಳನ್ನು ಗಳಿಸಲು ಸಫಲವಾದರೂ ಬಹುಮತ ಪಡೆಯಲು ವಿಫಲವಾಗಿದೆ. ೧೯ ನೇ ವಾರ್ಡಿನ ಅಭ್ಯರ್ಥಿ ಫರೀದುನ್ನೀಸಾ ಅವರಿಗೆ ಕಾಂಗ್ರೆಸ್ ನಿಂದ ಬಿ ಫಾರಂ ನೀಡಿದ್ದರಾದರೂ ನಾಮಪತ್ರ ಪರಿಶೀಲನೆಯಲ್ಲಿ ಅಸಿಂಧುವಾದ ಕಾರಣ ಪಕ್ಷೇತರವಾಗಿ ನಿಂತು ಗೆದ್ದಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಬಿ ಫಾರಂ ಪಡೆಯುವಲ್ಲಿ ವಿಫಲವಾದ ೧೩ ನೇ ವಾರ್ಡ್ ಎಸ್ ಎ ನಾರಾಯಣಸ್ವಾಮಿ ಅವರು ಬಿ.ಜೆ.ಪಿ ಪಕ್ಷದಿಂದ ಬಿ ಫಾರಂ ಪಡೆದು ವಿಜೇತರಾಗಿದ್ದಾರೆ. ಮಾಜಿ ಶಾಸಕ ಎಂ.ರಾಜಣ್ಣ ಬೆಂಬಲಿಗರಾದ ೧೨ ನೇ ವಾರ್ಡಿನ ಮೌಲಾ ಮತ್ತು ೨೯ ನೇ ವಾರ್ಡಿನ ಅಫ್ಸರ್ ಪಾಷ ಅವರು ಕಾಂಗ್ರೆಸ್ ನಿಂದ ಬಿ ಫಾರಂ ಸಿಗದೆ ಬಿ.ಎಸ್.ಪಿ ಪಕ್ಷದಿಂದ ನಿಂತು ಗೆದ್ದಿದ್ದಾರೆ. ೧೪ ನೇ ವಾರ್ಡಿನ ವಿಜೇತ ಅಭ್ಯರ್ಥಿ ಜೈಬಾ ಶೊಹರತ್ ಸಹ ಕಾಂಗ್ರೆಸ್ ನಿಂದ ಬಿ ಫಾರಂ ವಂಚಿತರೇ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ಅವರ ಬೆಂಬಲಿತ ಅಭ್ಯರ್ಥಿಗಳ ಪೈಕಿ ೧೮ ನೇ ವಾರ್ಡ್ ನ ಐ.ಶಬ್ಬೀರ್ ಪಕ್ಷೇತರರಾಗಿ ನಿಂತು ವಿಜೇತರಾಗಿದ್ದಾರೆ.
ಇನ್ನು ಮುಂದಿನ ದಿನಗಳಲ್ಲಿ ನಗರಸಭೆ ಅಧ್ಯಕ್ಷರ ಆಯ್ಕೆ ನಡೆಯಲಿದ್ದು ಯಾವ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯುತ್ತದೆ ಎಂದು ಕಾದು ನೋಡಬೇಕಿದೆ.
- Advertisement -
- Advertisement -
- Advertisement -