ನಗರದ ಪೊಲೀಸ್ ಠಾಣೆಯ ಮುಂದೆ ಶನಿವಾರ ಬಿಜೆಪಿ ಕಾರ್ಯಕರ್ತರು ಹಾಗೂ ಸಂಸದ ಕೆ.ಎಚ್. ಮುನಿಯಪ್ಪ ಅವರ ಬೆಂಬಲಿಗರ ನಡುವೆ ಮಾತಿನ ಚಕಮಕಿ ಹಾಗೂ ಘರ್ಷಣೆ ನಡೆಯಿತು.
“ಸಂಸದ ಕೆ.ಎಚ್. ಮುನಿಯಪ್ಪ ಅವರಿಂದ ೪೧೦ ಎಕರೆ ಭೂಕಬಳಿಕೆಯ ಬಗ್ಗೆ ಮಾಧ್ಯಮವೊಂದರಲ್ಲಿ ವರದಿ ಪ್ರಸಾರವಾಗಿದೆ. ಈ ವರದಿಯನ್ನು ಕಂಡು ರಾಜ್ಯವೇ ಬೆಚ್ಚುಬಿದ್ದಿದೆ. ಈ ಭೂಕಬಳಿಕೆಯ ವಿರುದ್ಧ ದೂರು ದಾಖಲಿಸಬೇಕು’ ಎಂದು ಬಿಜೆಪಿ ಕಾರ್ಯಕರ್ತರು ನಗರದ ಪೊಲೀಸ್ ಠಾಣೆಗೆ ದೂರು ನೀಡಲು ಹೋದರು. ಆದರೆ, ಸರ್ಕಲ್ ಇನ್ಸ್ ಪೆಕ್ಟರ್ ಇರದಿದ್ದುದರಿಂದ, ಇದು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವುದರಿಂದ ಅಲ್ಲಿ ದೂರನ್ನು ನೀಡುವಂತೆ ನಗರ ಪೊಲೀಸರು ತಿಳಿಸಿದರು. ಈ ಸಂದರ್ಭದಲ್ಲಿ ಠಾಣೆಯ ಮುಂದೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೆ.ಎಚ್. ಮುನಿಯಪ್ಪ ಅವರ ಬೆಂಬಲಿಗರು “ನೀವು ಕೆ.ಎಚ್. ಮುನಿಯಪ್ಪ ಅವರ ಬಗ್ಗೆ ನಿಂದನೆ ಮಾಡಿ ಮಾತನಾಡುವುದು ಸರಿಯಲ್ಲ” ಎಂದು ಜಗಳಕ್ಕೆ ನಿಂತರು. ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಘರ್ಷಣೆಯ ಹಂತಕ್ಕೆ ಹೋಗುವಷ್ಟರಲ್ಲಿ ಪೊಲೀಸರು ಇಬ್ಬರನ್ನೂ ಬಿಡಿಸಿ ಕಳುಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಪಕ್ಷದ ಬಿ.ಬಿ.ಎಂ.ಪಿ ಸದಸ್ಯ ಎಸ್.ಮುನಿಸ್ವಾಮಿ, “ ೩೦ ವರ್ಷಗಳ ಹಿಂದೆ ನಿರ್ಗತಿಕರೆಂದು ೪ ಎಕರೆ ಸರ್ಕಾರದಿಂದ ಮಂಜೂರು ಮಾಡಿಸಿಕೊಂಡಿದ್ದ ಕೆ.ಎಚ್. ಮುನಿಯಪ್ಪ ಅವರು ಈಗ ೪೧೦ ಎಕರೆ ಸರ್ಕಾರಿ ಜಮೀನನ್ನು ಕಬಳಿಸಿರುವುದು ಬೆಳಕಿಗೆ ಬಂದಿದೆ. ಸಂಸದರಾಗಿ ಕ್ಷೇತ್ರವನ್ನು ನಿರ್ಲಕ್ಷಿಸಿದ್ದ ಅವರು ಶಿಡ್ಲಘಟ್ಟ ತಾಲ್ಲೂಕಿನ ಗೊರಮಿಳ್ಳಹಳ್ಳಿಯಲ್ಲಿ ನೂರಾರು ಎಕರೆ ಸರ್ಕಾರಿ ಜಮೀನನ್ನು ಕಬಳಿಸಿದ್ದಾರೆ. ಈ ಭೂಕಬಳಿಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ನಾವು ದೂರು ನೀಡಲು ಬಂದಿದ್ದೆವು” ಎಂದು ತಿಳಿಸಿದರು.
ಸಂಸದ ಕೆ.ಎಚ್. ಮುನಿಯಪ್ಪ ಅವರ ಬೆಂಬಲಿಗ ಕೆ.ಪಿ.ಸಿ.ಸಿ ಸದಸ್ಯ ಜಿ.ಎನ್.ನಾರಾಯಣಸ್ವಾಮಿ ಮಾತನಾಡಿ, “ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆ ಕಾಂಪೋಂಡ್ ಒಳಗೆ ಸಂಸದ ಕೆ.ಎಚ್.ಮುನಿಯಪ್ಪ ಅವರ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿ ಅವರನ್ನು ನಿಂದಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣೆ ಶಿರಸ್ತೆದಾರ್ ಅಶೋಕ್ ಅವರಿಗೆ ಮನವಿಯನ್ನು ಸಲ್ಲಿಸಿದ್ದೇವೆ” ಎಂದು ತಿಳಿಸಿದರು.
ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ಗೋವಿಂದ, ಶ್ರೀಧರ್, ಬೈರಾರೆಡ್ಡಿ, ಸಂಸದ ಕೆ.ಎಚ್.ಮುನಿಯಪ್ಪ ಅವರ ಬೆಂಬಲಿಗರಾದ ಕೆ.ಪಿ.ಸಿ.ಸಿ ರಾಜ್ಯ ಸಂಚಲಕ ಟಿ.ನಾರಾಯಣಸ್ವಾಮಿ, ಎನ್.ಎಸ್.ಯು.ಐ ರಾಜ್ಯ ಸಂಚಾಲಕ ಮುನೀಂದ್ರ, ಕೃಷ್ಣಪ್ಪ ಹಾಜರಿದ್ದರು.
- Advertisement -
- Advertisement -
- Advertisement -